Site icon Vistara News

Chetan Ahimsa : ಸನಾತನ ಧರ್ಮ, ಸಮಾನ ನಾಗರಿಕ ಸಂಹಿತೆ ಸಮರ್ಥನೆ; ಗ್ಯಾರಂಟಿ ವಿರುದ್ಧ ಸಿಡಿಮಿಡಿ; ಬದಲಾದ್ರಾ ನಟ ಚೇತನ್‌?

Gandhian ideology must be unfollowed Says Actor Chetan

ತುಮಕೂರು: ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವಿದ್ದರೂ ಅದನ್ನು ಪ್ರಬಲವಾಗಿ ವಿರೋಧಿಸುವ ಚಿತ್ರನಟ ಚೇತನ್‌ ಅಹಿಂಸಾ (Chetan Ahimsa) ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ನಾನು ಸನಾತನ ಧರ್ಮದ (Sanathan Dharma) ವಿರೋಧಿಯಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಹೇಳಿಕೆಯ ಕುರಿತ ವಿವಾದಕ್ಕೂ ಪ್ರತಿಕ್ರಿಯಿಸಿದರು. ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಉದಯನಿಧಿ ಸ್ಟಾಲಿನ್‌ ಅವರೂ ಮಾತನಾಡಬಹುದು. ಆದರೆ ಸನಾತನ ಧರ್ಮ ಅನ್ನೋದನ್ನು ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು. ನಾನಂತೂ ಸನಾತನ ಧರ್ಮದ ವಿರೋಧಿಯಲ್ಲ. ಆದರೆ, ನಾನು ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ ಎಂದು ಹೇಳಿದರು ಚೇತನ್‌ ಅಹಿಂಸಾ. ಅಸಮಾನತೆ ಎನ್ನುವುದು ಕೇವಲ ಹಿಂದೂ ಧರ್ಮದಲ್ಲಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ. ಅದರ ನಿವಾರಣೆಯಾಗಬೇಕು ಎಂದರು.

ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮ ಮಲೇರಿಯಾ, ಡೆಂಗೆ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಅದರ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ವಿಸ್ತೃತ ಪ್ರತಿಕ್ರಿಯೆ ನೀಡಿರುವ ಚೇತನ್‌ ಅಹಿಂಸಾ, ʻʻಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಮಾತನಾಡಿದವರ ಮೇಲೆ ಎಫ್‌ಐಆರ್‌ ಹಾಕಿಸಿ, ಕಪಾಳಮೋಕ್ಷ ಮಾಡಿಸಿ ಎಂದೆಲ್ಲ ಹೇಳುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಅಧಿಕಾರ ಇದೆ. ಕಾಂಗ್ರೆಸ್‌ಗೂ ಇದೆ, ಬಿಜೆಪಿಗೂ ಇದೆ. ಯಾರಿಗೇ ಅದರೂ ಅವರು ಬಯಸುವ ಧರ್ಮವನ್ನು ಆಚರಿಸುವ, ಇಷ್ಟದ ದೇವರನ್ನು ಪೂಜಿಸುವ ಹಕ್ಕಿದೆ. ಆದರೆ, ಈ ಮೂರೂ ಧರ್ಮಗಳು ಅಸಮಾನತೆಯ ಸಿದ್ಧಾಂತಗಳನ್ನು ಹೊಂದಿವೆ. ನಮ್ಮ ದೇಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯತೆ ಹೆಚ್ಚಾದಷ್ಟೂ ಒಳ್ಳೆಯದೆ. ಆದರೆ, ಈಗ ಇರುವ ಶ್ರೇಣೀಕೃತ ಅಸಮಾನತೆಯನ್ನು ಹೋಗಲಾಡಿಸಬೇಕು ಎಂದು ಚೇತನ್‌ ಹೇಳಿದರು.

ಸಮಾನ ನಾಗರಿಕ ಸಂಹಿತೆಗೂ ಸಹಮತ

ʻʻಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಆದ್ರೆ ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು. ಕಮ್ಯೂನಿಸ್ಟರು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆʼʼ ಎಂದು ಹೇಳಿದರು ಚೇತನ್‌ ಅಹಿಂಸಾ

ಪಂಚ ಗ್ಯಾರಂಟಿಗಳು ಕೇವಲ ತೇಪೆ ಹಚ್ಚುವ ಕೆಲಸ

ʻʻಕಾಂಗ್ರೆಸ್‌ನವರು ತಂದಿರುವ ಐದು ಗ್ಯಾರಂಟಿಗಳು ತೇಪೆ ಹೆಚ್ಚುವ ಕೆಲಸ. ಅದನ್ನೆಲ್ಲ ದೇವರಾಜ ಅರಸರ ಆಡಳಿತಕ್ಕೆ ಹೋಲಿಸಬೇಡಿ. ಎಸ್ಸಿ, ಎಸ್ಟಿಗಳ ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಭೂಮಿಯನ್ನು ಮೈನಿಂಗ್ ಗೆ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿದವರು ಅವರು. ದೊಡ್ಡ ಪಾದ ಯಾತ್ರೆ ಮಾಡಿದರು. ಈಗ ಮೈನಿಂಗ್‌ಗೆ ಭೂಮಿ ಕೊಟ್ಟಿದ್ದಾರೆ. ಈ ರೀತಿಯ ವೈರುಧ್ಯತೆಗಳಿರುವ ಕಾಂಗ್ರೆಸ್‌ ಪಕ್ಷದ ನಿಲುವುಗಳನ್ನು ನಾನು ಒಪ್ಪಲ್ಲʼʼ ಎಂದರು ಚೇತನ್‌.

Exit mobile version