Site icon Vistara News

ಆರ್‌ಎಸ್ಎಸ್‍ ಜತೆ ಗುರುತಿಸಿಕೊಂಡಿರುವ ಹೆಮ್ಮೆ ನನಗೆ ಇದೆ: ಸಿಎಂ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರು: ಸಿದ್ಧಾಂತ, ದೇಶಪ್ರೇಮದ ವಿಚಾರಗಳಿಂದ ಆರ್‌ಎಸ್‌ಎಸ್ ಜತೆಗೆ ಹೆಮ್ಮೆಯಿಂದ ನಾನು ಗುರುತಿಸಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಆರ್‌ಎಸ್‌ಎಸ್‌ನ ಕೈಗೊಂಬೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ನನಗೆ ಕನಿಕರವಿದೆ. ದೇಶಭಕ್ತಿಯುಳ್ಳ ದೊಡ್ಡ ಸಂಸ್ಥೆಯೊಂದಿಗೆ ನಾವು ಗುರುತಿಸಿಕೊಂಡಿದ್ದೇವೆ. ಸಿದ್ದರಾಮಯ್ಯ ಅವರು ಯಾವ ಸಂಸ್ಥೆಯೊಟ್ಟಿಗೆ ಗುರುತಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಕೆಳಸ್ತರದಲ್ಲಿರುವ, ಈವರೆಗೆ ಗುರುತಿಸದಿದ್ದ ಅಸಂಘಟಿತರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಬಜೆಟ್‌ನ ಎಲ್ಲ ವಿಶೇಷ ಕಾರ್ಯಕ್ರಮಗಳ ಜತೆಗೆ ಅದರಲ್ಲಿಯೂ ಮುಖ್ಯವಾಗಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಕ್ಷೇತ್ರಗಳಲ್ಲಿ ಅವರಿಗಾಗಿ ಒತ್ತು ಕೊಡಲಾಗಿದೆ. ಕೃಷಿ ಕಾರ್ಮಿಕರಿಗೆ ವಿದ್ಯಾ ನಿಧಿ ಯೋಜನೆಯಲ್ಲಿ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ. ಕರಕುಶಲ ಕಾರ್ಮಿಕರಾದ ಬಡಗಿ, ಕುಂಬಾರರು, ವಿಶ್ವಕರ್ಮ, ಭಜಂತ್ರಿ, ತೋಟಗಾರಿಕೆ, ಮೀನುಗಾರರು, ಕುರಿ ಕಾಯುವವರಿಗೆ 50 ಸಾವಿರ ರೂ.ಗಳನ್ನು ಒದಗಿಸಿ ಉದ್ಯೋಗ ನೀಡುವ ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | ಪ್ರತಾಪ್‌ ಸಿಂಹ ಒಬ್ಬ ಯಕಶ್ಚಿತ್‌ ರಾಜಕಾರಣಿ: ಮೊದಲು ಲಕ್ಷ್ಮಣ್‌ ಜತೆ ಚರ್ಚಿಸಲಿ ಎಂದ ಸಿದ್ದರಾಮಯ್ಯ

ತುಮಕೂರು ವಿವಿಯಲ್ಲಿ ಚೆನ್ನಿಗರಾಯ ಸ್ವಾಮಿ ಸಮುದಾಯ ಅಧ್ಯಯನ ಪೀಠ ಸ್ಥಾಪನೆ
ಚೆನ್ನಿಗರಾಯ ಸ್ವಾಮಿ ಸಮುದಾಯದ ಇತಿಹಾಸ ಆಧ್ಯಯನಕ್ಕಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸುವ ಮೂಲಕ ಸಮುದಾಯದ ಇತಿಹಾಸ, ಪರಂಪರೆ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀ ಮಹಾಲಕ್ಷ್ಮೀ ತಿಗಳರ ಮಹಾಸಂಸ್ಥಾನದ ಟ್ರಸ್ಟ್ ಶಿವಗಂಗೆ ಹಾಗೂ ತಿಗಳ ಕ್ಷತ್ರಿಯ ಸಮಾಜದ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮ ಹಾಗೂ ತಿಗಳ ಕ್ಷತ್ರಿಯರ ಜಾಗೃತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದಿಂದ ಅಗ್ನಿ ಬನ್ನಿಗರಾಯ ಸ್ವಾಮಿಯ ಜನ್ಮದಿನಾಚರಣೆ
ತಿಗಳರು, ಮಾಳಿ, ಮಾಳಿ ಮಾಲಗಾರ, ಕುಂಬಾರರು ಸೇರಿ ಗ್ರಾಮೀಣ ಪ್ರದೇಶದ ಹಲವು ಅಲ್ಪಾವಧಿ ಕೃಷಿ ಆಧಾರಿತವಾದ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು 400 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಲಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿಶೇಷ ಘಟಕ ಸ್ಥಾಪಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಿಗಳರ ಸಮಾಜದ ವಿವಿಧ ಸಂಘಸಂಸ್ಥೆಗಳಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ 4.45 ಕೋಟಿ ರೂ. ಅನುದಾನ ನೀಡಲಾಗಿದೆ. ಅಗ್ನಿ ಬನ್ನಿಗರಾಯ ಸ್ವಾಮಿಯ ಜನ್ಮದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವ ಘೋಷಣೆಯನ್ನು ಮುಖ್ಯಮಂತ್ರಿಗಳು ಮಾಡಿದರು.

ಸಮುದಾಯಗಳ ಬೇಡಿಕೆಗಳ ಈಡೇರಿಕೆಗೆ ಕ್ರಮ
23 ಸಮುದಾಯಗಳಿಗೆ ಸೇರಿದ ವಿವಿಧ ಸಂಸ್ಥೆಗಳಿಗೆ ಒಟ್ಟು 12.30 ಕೋಟಿ ರೂ.ಗಳ ಅನುದಾನದ ಬೇಡಿಕೆಯಿದ್ದು, ಮಂಜೂರು ಮಾಡಲಾಗುವುದು. ಮಹಾಲಕ್ಷ್ಮಿ ಮಠಕ್ಕೆ ಜಮೀನು ಮಂಜೂರಾತಿಗಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಗಸ್ಟ್ 15ರಂದು ಘೋಷಿಸಿದಂತೆ ತಿಗಳರು, ಕಮ್ಮಾರರು, ಕುಂಬಾರರು, ವಿಶ್ವಕರ್ಮಿಗಳು ಸೇರಿದಂತೆ ಕುಲ ಕಸುಬುದಾರರಿಗೆ ರಾಜ್ಯ ಸರ್ಕಾರದ ಸಬ್ಸಿಡಿ ಹಾಗೂ ಬ್ಯಾಂಕ್‍ಗಳ ಮೂಲಕ 50,000 ರೂ.ಗಳ ಧನಸಹಾಯವನ್ನು ಮಾಡಲು ತೀರ್ಮಾನಿಸಲಾಗಿದೆ. ಇದರ ಲಾಭವನ್ನು ಸಮುದಾಯಗಳು ಪಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ | ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ದಂಧೆ ನಡೆದಿತ್ತು; ಮಾಜಿ ಸಿಎಂ ಎಚ್‌ಡಿಕೆ

Exit mobile version