ತುಮಕೂರು: ರಾಜ್ಯದ ಪ್ರತಿ ತಾಲೂಕಿನಲ್ಲಿ 100 ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ 5 ರಿಂದ 10 ಲಕ್ಷ ರೂಪಾಯಿ ಧನಸಹಾಯ ನೀಡಿ ಉದ್ಯೋಗ ಸೃಷ್ಟಿ ಮಾಡುವ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ತಿಳಿಸಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಭೋವಿ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, 21ನೇ ಶತಮಾನ ಜ್ಞಾನದ ಶತಮಾನ, ನಿಮ್ಮ ಜ್ಞಾನವೇ ತಂತ್ರಾಂಶವಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ 100 ಹಾಸ್ಟೆಲ್‌ಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ, ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಎಸ್‌ಸಿ, ಎಸ್‌ಟಿ ಮನೆಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಭೂ ಒಡೆತನಕ್ಕೆ 15 ಲಕ್ಷ ರೂಪಾಯಿ, ಮನೆ ನಿರ್ಮಾಣಕ್ಕೆ 2 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.
ಭೋವಿ ಅಭಿವೃದ್ಧಿ ನಿಗಮಕ್ಕೆ ಶೀಘ್ರದಲ್ಲೇ ಅಧ್ಯಕ್ಷರ ನೇಮಕ
ಭೋವಿ ಅಭಿವೃದ್ಧಿ ನಿಗಮಕ್ಕೆ ದಕ್ಷ ಅಧ್ಯಕ್ಷರನ್ನು ಸದ್ಯದಲ್ಲಿಯೇ ನೇಮಿಸಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಎಸ್‌ಸಿ ಎಸ್‌ಟಿ ಸ್ತ್ರೀ ಶಕ್ತಿ ಸಂಘಕ್ಕೆ 10 ಲಕ್ಷ ರೂಪಾಯಿವರೆಗೂ ಬ್ಯಾಂಕ್ ಸಾಲ ಸೌಲಭ್ಯ, ರಾಜ್ಯ ಸರ್ಕಾರದಿಂದ ಧನಸಹಾಯ ನೀಡಲಾಗುತ್ತಿದೆ. ಭೋವಿ ಸಮಾಜದ ಗುರುಗಳ ಮಾರ್ಗದರ್ಶನದಲ್ಲಿ ಸಮುದಾಯ ಅಭಿವೃದ್ಧಿಯನ್ನು ಕಾಣಲಿದೆ. ಸಾಮಾಜಿಕ ನ್ಯಾಯ ಭಾಷಣದ ಸರಕಲ್ಲ. ಸಮಾಜದವರು ಜಾಗೃತರಾಗಬೇಕು. ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದರು.
ಭೋವಿಕುಲದಲ್ಲಿ ಜ್ಞಾನ ಮತ್ತು ಧ್ಯಾನ ರಕ್ತಗತವಾಗಿದೆ
ಸಿದ್ಧರಾಮೇಶ್ವರರು ಬದುಕಿನ ದಾರಿಯನ್ನು ತೋರಿಸಿದ ಪವಾಡ ಪುರುಷರು. ಬದುಕಿನಲ್ಲಿ ದುಡಿಮೆಯಿಲ್ಲದಿದ್ದರೆ ಅದು ಬದುಕೇ ಅಲ್ಲ. ಬೆವರು ಹರಿಸಿ ದುಡಿದರೆ ದೇವರಿಗೆ ಮೆಚ್ಚುಗೆಯಾಗುತ್ತದೆ. ಬಸವಣ್ಣ ಅವರು ಕಾಯಕವೇ ಕೈಲಾಸ ಎಂದು ತಿಳಿಸಿದ್ದಾರೆ. ಪೂಜೆಗಿಂತ ಶ್ರೇಷ್ಠವಾದುದು ಕಾಯಕ. ಕಾಯಕಯೋಗಿಗಳಿಂದ ರಾಷ್ಟ್ರ ನಿರ್ಮಾಣವಾಗುತ್ತಿದೆ. ಕಲ್ಲನ್ನು ಮೇಣದಂತೆ ಕಡಿದು ರೂಪಗೊಳಿಸುವ ಕಲೆ, ಜ್ಞಾನ ಮತ್ತು ಧ್ಯಾನ ಭೋವಿಕುಲದಲ್ಲಿ ರಕ್ತಗತವಾಗಿದೆ. ಸಿದ್ಧರಾಮೇಶ್ವರರು ಕೆರೆಕಟ್ಟೆಗಳ ನಿರ್ಮಾಣ, ದೇವಸ್ಥಾನಗಳ ನಿರ್ಮಾಣ ಮಾಡಿರುವ ಕಾಯಕ ಶ್ರೇಷ್ಠವಾದುದಾಗಿದೆ ಎಂದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಪ್ರಸಾದ್ ಅವರು, ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಸಮಸ್ಯೆಗಳಿಗೆ ಪರಿಹಾರದ ಭಾಗವಾಗಿದ್ದಾರೆ. ಭೋವಿ ಸಮಾಜದ ಎಲ್ಲರಿಗೂ ಇವರು ಪ್ರೇರಣೆಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಇದನ್ನೂ ಓದಿ | ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್: ಕೆ.ಎಚ್.ಮುನಿಯಪ್ಪ ಮನೆಗೆ ಸುರ್ಜೇವಾಲಾ ಭೇಟಿ