ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆ ರದ್ದು ಪಡಿಸಲಾಗಿದೆ.
ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಡ ರಾತ್ರಿ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಸತತವಾಗಿ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಿಜೆಪಿ ಕಾರ್ಯಕರ್ತರ ಆಕ್ರೋಶದ ನಡುವೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮದ ಮೂಲಕ ಸಂಭ್ರಮಾಚರಣೆ ನಡೆಸುವುದು ಎಷ್ಟು ಸರಿ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿತ್ತು.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೂರಾರು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರವೀಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಹೋಗಿದ್ದ ಬಿಜೆಪಿಯ ಹಿರಿಯ ಮುಖಂಡರ ಕಾರಿಗೆ ನೂರಾರು ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿ ಸಿಟ್ಟು ಪ್ರದರ್ಶಿಸಿದ್ದರು. ಬಿಜೆಪಿಯ ಹಲವು ಶಾಸಕರೇ ಸರ್ಕಾರದ ನಡೆಯ ವಿರುದ್ಧ ದನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಜನೋತ್ಸವ ನಡೆಸುವುದು ಹೇಗೆ ಎಂಬ ಇಕ್ಕಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಿಲುಕಿತ್ತು. ಅಂತಿಮವಾಗಿ ಬುಧವಾರ ಮಧ್ಯ ರಾತ್ರಿಯ ವೇಳೆಗೆ ಜನೋತ್ಸವ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಒಪ್ಪಿಗೆಯನ್ನೂ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಗುರುವಾರ ದೊಡ್ಡ ಬಳ್ಳಾಪುರದಲ್ಲಿ ನಡೆಯಬೇಕಾಗಿರುವ ಕಾರ್ಯಕ್ರಮ ರದ್ದಾಗಿರುವಂತೆಯೇ ವಿಧಾನಸೌಧದಲ್ಲಿ ನಡೆಯಬೇಕಾಗಿದ್ದ ಸರ್ಕಾರಿ ಕಾರ್ಯಕ್ರಮವನ್ನೂ ರದ್ದು ಪಡಿಸಲಾಗಿದೆ. ಕೇವಲ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಸರ್ಕಾರದ ಸಾಧನೆಯನ್ನು ಹಂಚಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ| ಜನೋತ್ಸವಕ್ಕೆ ಮುನ್ನಾ ದಿನ ಜನಾಕ್ರೋಶ: ಸಂಭ್ರಮಕ್ಕೂ ಮೊದಲು ಇಕ್ಕಟ್ಟಿನಲ್ಲಿ ಬಿಜೆಪಿ ಸರ್ಕಾರ