Site icon Vistara News

Chief Minister tour | ಪ್ರಕೃತಿ ವಿಕೋಪ ಶಾಶ್ವತ ಪರಿಹಾರಕ್ಕೆ ಮುಂದಿನ ವಾರದಿಂದಲೇ ಅಧ್ಯಯನ: ಬೊಮ್ಮಾಯಿ

ಬೊಮ್ಮಾಯಿ

ಕೊಡಗು: ಪ್ರಕೃತಿ ವಿಕೋಪ ಸಂಬಂಧ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, ಗುಡ್ಡ ಕುಸಿತ ಮತ್ತು ಭೂಕಂಪನಕ್ಕೆ ನಿಖರ ಕಾರಣಗಳ ಬಗ್ಗೆ ಅಧ್ಯಯನ ನಡೆಸಲು ಮುಂದಿನ ವಾರ ರಾಜ್ಯಕ್ಕೆ ವಿಜ್ಞಾನಿಗಳ ತಂಡ ಆಗಮಿಸಲಿದ್ದು, ಅವರಿಂದ ವರದಿ ಪಡೆದು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಡಿಕೇರಿಯಲ್ಲಿ ಮಂಗಳವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಕಂಪನ ಮತ್ತು ಗುಡ್ಡ ಕುಸಿತ ಸಂಬಂಧ ಅಧ್ಯಯನ ಮಾಡಿ ವರದಿ ನೀಡುವಂತೆ ನವ ದೆಹಲಿಯಲ್ಲಿ ಇರುವ ರಾಷ್ಟ್ರೀಯ ಮಟ್ಟದ ಭೂವಿಜ್ಞಾನ ಸಂಸ್ಥೆಗಳಿಗೆ ಪತ್ರ ಬರೆದಿದ್ದೇನೆ. ಅವರು ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.

ನ್ಯಾಷನಲ್‌ ಜಿಯೋಗ್ರಫಿಕ್‌ ಇನ್‌ಸ್ಟಿಟ್ಯೂಶನ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಟೀರಿಯಲ್‌, ಜಿಯೋಗ್ರಫಿಕಲ್‌ ಸ್ಟಡಿ ಆಫ್‌ ಇಂಡಿಯಾ ಹಾಗೂ ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯದ ಜಿಯಾಲಜಿ ವಿಭಾಗದವರು ಈ ತಂಡದಲ್ಲಿ ಇರಲಿದ್ದು, ಇವರೆಲ್ಲರೂ ಮಡಿಕೇರಿ ಸೇರಿ ಪ್ರಮುಖ ಭಾಗದಲ್ಲಿ ವಿಸ್ತೃತ ಅಧ್ಯಯನ ಕೈಗೊಂಡು ವರದಿ ನೀಡಲಿದ್ದಾರೆ. ಆಗ ಅವರು ಕೊಡುವ ಸಲಹೆಗಳನ್ನು ಪರಿಗಣಿಸಿ ಶಾಶ್ವತವಾಗಿ ಸಮಸ್ಯೆಗಳಿಂದ ಪಾರಾಗಲು ಸರ್ಕಾರ ಕ್ರಮ ವಹಿಸಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು

ಪ್ರಕೃತಿ ವಿಕೋಪಗಳನ್ನು ನೂರಕ್ಕೆ ನೂರು ತಡೆಯಲು ಸಾಧ್ಯವಿಲ್ಲ. ಅಂತಹ ಸ್ಥಳಗಳನ್ನು ಗುರುತಿಸಿ ಜನವಸತಿ ಇರದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಇನ್ನು ಭೂಕಂಪನದ ಭಯವುಳ್ಳ ಪ್ರದೇಶಗಳ ಮನೆಗಳಿಗೆ ರೆಟ್ರೋ ಫಿಟ್ಟಿಂಗ್‌ ಕ್ರಮಗಳನ್ನು ಅನುಸರಿಸುವ ಮುಖಾಂತರ ಅವರ ರಕ್ಷಣೆ ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಈಗಾಗಲೇ ಭೂ ಕುಸಿತ ಆದ ಕಡೆಗಳಲ್ಲಿ ಅಮೃತ ವಿಶ್ವವಿದ್ಯಾಲಯದವರು ಅಧ್ಯಯನ ನಡೆಸಿ ಪ್ರಾಥಮಿಕ ವರದಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವಿಸ್ತೃತ ವರದಿಯನ್ನು ನೀಡಲಿದ್ದಾರೆ ಎಂದು ಸಿಎಂ ತಿಳಿಸಿದರು.

ಗುಡ್ಡ ಕುಸಿತವನ್ನು ಮುಂಚೆಯೇ ತಡೆಯಲು ಹಲವಾರು ತಂತ್ರಜ್ಞಾನಗಳಿದ್ದು, ಅವುಗಳಲ್ಲಿ ಯಾವುದನ್ನು ಶಿಫಾರಸು ಮಾಡುತ್ತಾರೋ ಅದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕ್ರಮಗಳು ಇದರಲ್ಲಿ ಸೇರಿರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಮಗ್ರ ಪರಿಶೀಲನೆ, ಪ್ರಗತಿಯಲ್ಲಿ ಪರಿಹಾರ ಕಾರ್ಯ

ಮಳೆ ಹಾನಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡಕ್ಕೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಜುಲೈನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಮನೆಗಳು, ರಸ್ತೆಗಳಿಗೆ ಹಾನಿಯಾಗಿವೆ. ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಸಣ್ಣ ಪ್ರಮಾಣದ ಭೂಕುಸಿತವಾಗಿದೆ. ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಮುಂಗಾರಿನಲ್ಲಿ ವಾಡಿಕೆಗಿಂತ ಶೇ.114ರಷ್ಟು ಹೆಚ್ಚು ಮಳೆಯಾಗಿದೆ. ಕಳೆದೊಂದು ವಾರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿ ಪ್ರಮಾಣವೂ ಅಧಿಕವಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಮಳೆಯಿಂದ 2 ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ, 15 ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದಕ್ಕೆ 3 ಲಕ್ಷ ರೂಪಾಯಿ, 63 ಮನೆಗಳು ಸಾಧಾರಣ ಹಾನಿಯಾಗಿದ್ದು, ಅವರಿಗೆ 50 ಸಾವಿರ ರೂಪಾಯಿ, ನೀರು ನುಗ್ಗಿರುವ ಮನೆಗಳಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಮಳೆಯಿಂದ ಹಾನಿಯಾಗಿರುವ ಗ್ರಾಮೀಣ ಹಾಗೂ ಮುಖ್ಯರಸ್ತೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಮೊದಲ ಹಂತದಲ್ಲಿ ದುರಸ್ತಿ ಮಾಡಿ ಬಳಿಕ ಸಂಪೂರ್ಣ ರಸ್ತೆ ನವೀಕರಣ ಮಾಡಲಾಗುತ್ತದೆ. 2018ರ ಪ್ರವಾಹ ಸಂದರ್ಭದಲ್ಲಿ ನಿರಾಶ್ರಿತರಾದವರಿಗೆ ಈಗಾಗಲೇ 830 ಮನೆಯನ್ನು ಕಟ್ಟಿಕೊಡಲಾಗಿದೆ. ಶೇ.95 ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ನಾಗರಿಕರು ವಾಸವಿದ್ದಾರೆ. ಇನ್ನು ಒಂದೂವರೆ ತಿಂಗಳಲ್ಲಿ ಉಳಿದ 195 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Chief Minister Tour | ಕೊಡಗಿನಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಿಸಿದ ಸಿಎಂ ಬೊಮ್ಮಾಯಿ

ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿ ಖಾತೆಯಲ್ಲಿ ಅಗತ್ಯವಾದಷ್ಟು ಹಣ ಇದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ಕಾಳಜಿ ಕೇಂದ್ರದಲ್ಲಿ ಊಟ, ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೇರೆ ಮನೆಗೆ ತೆರಳಿದ ಜನರಿಗೂ ದಿನಸಿ ಕೊಡಲಾಗುತ್ತದೆ. ಮಡಿಕೇರಿಯ ತಹಸೀಲ್ದಾರ್‌ ಖಾತೆಯಲ್ಲೂ 25 ಲಕ್ಷ ರೂ.ವನ್ನು ಮೀಸಲಿಡಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಿಗೆ 50 ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಹಾರಂಗಿ ಜಲಾಶಯ ಹಿಂಭಾಗ ಹೂಳು‌ ಎತ್ತಲು 40 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕಾವೇರಿ ನದಿಯಲ್ಲೂ ಎಲ್ಲಿ ಅಗತ್ಯವಿದೆಯೋ ಅಲ್ಲಿ ಹೂಳು ಎತ್ತಲು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರ ಪ್ರತಿಕ್ರಿಯಿಸಿ ಈಗಾಗಲೇ ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್‌.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ‌.ನಾಗೇಶ್, ಸಂಸದ ಪ್ರತಾಪ್ ಸಿಂಹ, ಸಚಿವರಾದ ಸಿ.ಸಿ.ಪಾಟೀಲ್, ಶಾಸಕರಾದ ಬೋಪಯ್ಯ, ಅಪ್ಪಚ್ಚು ರಂಜನ್ ಮತ್ತಿತರರು ಇದ್ದರು.

Exit mobile version