Site icon Vistara News

ಗೋಲ್ಡ್‌ ರಿಕವರಿಗೆ ಬಂದಿದ್ದ ತಮಿಳುನಾಡು ಪೊಲೀಸರಿಗೆ ದಿಗ್ಬಂಧನ ಹಾಕಿದ ಚಿಕ್ಕಬಳ್ಳಾಪುರ ಜ್ಯುವೆಲರಿ ಮಾಲೀಕರು

chikkaballapura juwels

ಚಿಕ್ಕಬಳ್ಳಾಪುರ: ಗೋಲ್ಡ್ ರಿಕವರಿಗೆಂದು ಬಂದಿದ್ದ ತಮಿಳುನಾಡು ಪೊಲೀಸರಿಗೆ ಸ್ಥಳೀಯ ಜ್ಯುವೆಲರಿ ಅಂಗಡಿಯವರು ದಿಗ್ಬಂಧನ ಹಾಕಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಕೆಲವರು ಬಂದಿದ್ದು, ತಾವು ತಮಿಳುನಾಡು ಪೊಲೀಸರು ಎಂದು ಹೇಳಿದ್ದಾರೆ. ಅಲ್ಲದೆ, ಗೋಲ್ಡ್‌ ರಿಕವರಿಗೆ ಬಂದಿದ್ದು, ಆರೋಪಿಗಳನ್ನು ಕರೆತಂದಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ಖರೀದಿ ಮಾಡಿದ್ದ ಅತುಲ್‌ ಸೂರ್ಯವಂಶಿ ಮಾವ ಶ್ರೀನಿವಾಸ್‌ರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಆದರೆ, ಇದು ಚಿನ್ನಾಭರಣ ಅಂಗಡಿ ಮಳಿಗೆಗಳ ಮಾಲೀಕರಿಗೆ ಅನುಮಾನ ತರಿಸಿದೆ. ಹೀಗಾಗಿ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಎಲ್ಲರೂ ಸೇರಿ ಪೊಲೀಸರು ಎಂದು ಹೇಳಿಕೊಂಡು ಬಂದವರನ್ನು ಅಂಗಡಿಯೊಂದರಲ್ಲಿ ಕೂಡಿಹಾಕಿದ್ದಾರೆ.

ಚಿಕ್ಕಬಳ್ಳಾಪುರ ನಗರದ ವಿರಾಟ್ ಜ್ಯುವೆಲ್ಲರ್ಸ್ ಮುಂಭಾಗ ಘಟನೆ ನಡೆದಿದೆ. ಕೊನೆಗೆ ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಬಂದವರ ಕಾರಿನ ಚಕ್ರದ ಗಾಳಿಯನ್ನೂ ತೆಗೆಯಲಾಗಿದೆ. ವಿಷಯ ತಿಳಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನು ಕಲೆಹಾಕಿದ್ದಾರೆ. ಬಳಿಕ ಬಂದಿದ್ದು ತಮಿಳುನಾಡು ಪೊಲೀಸರೇ ಹೌದು ಎಂಬ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ | Child theft rumour | ವಿಜಯನಗರ, ಧಾರವಾಡಕ್ಕೂ ಹಬ್ಬಿದ ಹಲ್ಲೆ ಹಾವಳಿ, ಇಬ್ಬರ ಮೇಲೆ ತೀವ್ರ ದಾಳಿ

ಏನಿದು ಪ್ರಕರಣ?
ಚಿನ್ನದಂಗಡಿ ಮಾಲೀಕ ಅತುಲ್ ಸೂರ್ಯವಂಶಿ ಎಂಬಾತನಿಗೆ ಕಳ್ಳ ಮಹಮದ್ ಖಾನ್ ಎಂಬಾತ ಕದ್ದ ಚಿನ್ನವನ್ನು ಮಾರಾಟ ಮಾಡಿದ್ದಾಗಿ ತಮಿಳುನಾಡು ಪೊಲೀಸರ ಬಳಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಅಲ್ಲದೆ, ಅತುಲ್‌ ಬಳಿ ಈಗಾಗಲೇ ಎರಡು ಬಾರಿ ಬೆಂಗಳೂರು, ತಮಿಳುನಾಡು ಪೊಲೀಸರು ಸೇರಿದಂತೆ ಬೇರೆ ಬೇರೆ ಠಾಣಾ ಪೊಲೀಸರು 200 ಗ್ರಾಂಗೂ ಹೆಚ್ಚು ಚಿನ್ನಾಭರಣವನ್ನು ವಸೂಲಿ ಮಾಡಿಹೋಗಿದ್ದಾರೆಂದು ಹೇಳಲಾಗಿದೆ.

ಹೀಗಾಗಿ ಪೊಲೀಸರು ಕಳ್ಳನ ಸಮೇತ ಗೋಲ್ಡ್ ರಿಕವರಿಗಾಗಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾರೆ. ಆದರೆ, ಅದಾಗಲೇ ಅತುಲ್ ಅಂಗಡಿ ಮುಚ್ಚಿ ಊರು ಬಿಟ್ಟು ಓಡಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಅತುಲ್ ಮಾವ ಶ್ರೀನಿವಾಸ್ ಅವರನ್ನು ಬಂಧಿಸಲು ಮುಂದಾಗಿದ್ದರು ಎಂದು ಹೇಳಲಾಗಿದ್ದು, ಇದಕ್ಕೆ ಚಿನ್ನದಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರಿಗೆ ದಿಗ್ಬಂಧನ ವಿಧಿಸಿದ್ದಲ್ಲದೆ, ಪೊಲೀಸರು ಬಂದಿದ್ದ ಕಾರಿನ ಚಕ್ರದ ಗಾಳಿಯನ್ನೂ ತೆಗೆದು ಆಕ್ರೋಶ ಹೊರಹಾಕಿದ್ದರು.

ಕಳ್ಳತನವೇ ಈತನ ವೃತ್ತಿ
ತಮಿಳುನಾಡಿನ ಸಿಪಿಐ ವಿ. ರಮಣಿ, ಪಿಎಸ್‍ಐ ಸೆಲ್ವಕುಮಾರ್ ಬಂದಿದ್ದು, ಕಳ್ಳ ಮಹಮದ್ ಖಾನ್ ಎಂಬಾತನನ್ನು ಜತೆಗೆ ಕರೆತಂದಿದ್ದರು. ಈತ ಮೂಲತಃ ಆಂಧ್ರದ ಹಿಂದೂಪುರದವಾನಾಗಿದ್ದು, ಹಾಲಿ ಬೆಂಗಳೂರಿನ ಆರ್.ಟಿ. ನಗರದಲ್ಲಿ ವಾಸವಾಗಿದ್ದಾನೆ. ಈತನ ವೃತ್ತಿಯೇ ಮನೆಗಳ್ಳತನವಾಗಿದ್ದು, ಚೆನೈ ಬೆಂಗಳೂರು ಸೇರಿದಂತೆ ಹಲವು ಕಡೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಬಳಿಕ ಆ ಚಿನ್ನಾಭರಣಗಳನ್ನು ಚಿಕ್ಕಬಳ್ಳಾಪುರ ನಗರದ ಚಿನ್ನದಂಗಡಿ ಮಾಲೀಕ ಅತುಲ್ ಸೂರ್ಯವಂಶಿಗೆ ಮಾರಾಟ ಮಾಡುತ್ತಿದುದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಅತುಲ್ ಜತೆ ಆತನ ಮಾವ ಶ್ರೀನಿವಾಸ್ ಸಹ ಇದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಬಂಧನಕ್ಕೆ ತಮಿಳುನಾಡು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ. ಕಳ್ಳನೊಂದಿಗೆ ತಮಿಳುನಾಡು ಪೊಲೀಸರು ವಾಪಸಾಗಿದ್ದಾರೆ.

ಇದನ್ನೂ ಓದಿ | Kidnapping | ತೂಕ ಮಾಡುವ ನೆಪದಲ್ಲಿ ಶಿಶು ಕಳ್ಳತನ; ಚಿಕ್ಕೋಡಿಯಲ್ಲೀಗ ಭಯದ ವಾತಾವರಣ

Exit mobile version