ಚಿಕ್ಕಬಳ್ಳಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ಗಡಿಗವಾರ್ಲಹಳ್ಳಿ ನಡೆದಿದೆ. ಕೋಡಿಗಲ್ ಗ್ರಾಮದ ನೈದಮ್ಮ, ನರಸಿಂಹಪ್ಪ ದಂಪತಿ ಪುತ್ರಿ ತನುಶ್ರೀ (14) ಮೃತ ಬಾಲಕಿ.
ಮಂಗಳವಾರ ರಾತ್ರಿ ಊಟ ಮಾಡಿ ಮಲಗಿ ಬುಧವಾರ ಬೆಳಗ್ಗೆ ಎಂದಾಗ ತನುಶ್ರೀ ಅಸ್ವಸ್ಥಗೊಂಡಿದ್ದಳು. ಹೀಗಾಗಿ ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಕೆಂಚಾರ್ಲಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಲಾಗಿದೆ.
ಬೈಕ್ ಸ್ಕಿಡ್ ಆಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಮಂಗಳೂರು: ಬೈಕ್ ಸ್ಕಿಡ್ ಆಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕೇರಳ ಮೂಲದ ವಿದ್ಯಾರ್ಥಿ ಮಹಮ್ಮದ್ ನಶತ್(21) ಮೃತ ವಿದ್ಯಾರ್ಥಿ.
ಅತಿ ವೇಗದಲ್ಲಿದ್ದ ಬೈಕ್ ಚಲಾಯಿಸಿದ್ದರಿಂದ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್‌ನೊಂದಿಗೆ ಸವಾರ ಮೇಲಕ್ಕೆ ಹಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದರಿಂದ ತಲೆಗೆ ಗಂಭೀರವಾಗಿ ಗಾಯವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಭತ್ತದ ಗದ್ದೆಗೆ ಉರುಳಿದ ಬಸ್, ಹಲವರಿಗೆ ಗಾಯ
ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಬಸ್ ಉರುಳಿದ್ದರಿಂದ ಹಲವರು ಗಾಯಗೊಂಡಿರುವ ಘಟನೆ ರಾಣೇಬೆನ್ನೂರು ತಾಲೂಕಿನಲ್ಲಿ ನಡೆದಿದೆ. ಹಿಲದಲ್ಲಿ ಗ್ರಾಮದಿಂದ ಬೇಲೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಅನ್ನು ತಪ್ಪಿಸಲು ಹೋಗಿ ಅಪಘಾತ ನಡೆದಿದ್ದು, ಬಸ್ ಚಾಲಕ ಸೇರಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ | Heart Attack: ಟ್ಯೂಷನ್ಗೆ ಹೊರಟಿದ್ದ ಮಗಳ ಕಣ್ಣೆದುರೇ ಹೃದಯಾಘಾತ, ರಸ್ತೆ ಬದಿಯಲ್ಲೇ ಹೋಯ್ತು ಅಪ್ಪನ ಪ್ರಾಣ
ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ಬೃಹತ್ ಮರ
ಚಿಕ್ಕಮಗಳೂರು: ಚಲಿಸುತ್ತಿದ್ದ ಲಾರಿ ಮೇಲೆ ಬೃಹತ್ ಮರ ಬಿದ್ದ ಘಟನೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ನಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಹಿನ್ನೆಲೆಯಲ್ಲಿ ಲಾರಿ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಇದೇ ವೇಳೆ ಮರದ ಪಕ್ಕದಲ್ಲಿದ್ದ ವಿದ್ಯುತ್ ಲೈಟ್ ಕಂಬ ಕೂಡ ಮುರಿದುಬಿದ್ದಿದೆ. ತಕ್ಷಣ ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಅನಾಹುತ ತಪ್ಪಿದೆ.