Site icon Vistara News

Accident Case:ಕೇತೇನಹಳ್ಳಿ ಫಾಲ್ಸ್‌ನಿಂದ ಬರುವಾಗ ಕಾಲು ಜಾರಿ ಬಿದ್ದ ಮಹಿಳಾ ಟೆಕ್ಕಿ; 2 ಕಿಮೀ ಹೊತ್ತು ತಂದ ಯುವಕರು

accident case

ಚಿಕ್ಕಬಳ್ಳಾಪುರ: ಮಹಿಳಾ ಟೆಕ್ಕಿಯೊಬ್ಬರು ಜಲಪಾತ ನೋಡಲು ಆಗಮಿಸಿ (Accident Case) ಕಾಲು ಜಾರಿ ಬಿದ್ದಿದ್ದಾರೆ. ಮುಂಬೈ ಮೂಲದ ಅರ್ಪಿತಾ ಕಾಲು ಮುರಿದುಕೊಂಡ ಟೆಕ್ಕಿ. ಜಲಪಾತದಲ್ಲಿ ಆಟವಾಡಿ ವಾಪಾಸ್ ಬರುವಾಗ ಕಾಲು ಜಾರಿಬಿದ್ದು ಅವಘಡ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಫಾಲ್ಸ್ ಬಳಿ ಘಟನೆ ನಡೆದಿದೆ.

ಸ್ನೇಹಿತರೊಂದಿಗೆ ಆಗಮಿಸಿದ್ದ ಅರ್ಪಿತಾ ಕಾಡಿನ ಮಧ್ಯೆ ಕಡಿದಾದ ಹಾದಿಯಲ್ಲಿ ಬರುವಾಗ ಜಾರಿ ಬಿದ್ದಿದ್ದಾರೆ. ಕಾಡಿನ ಹಾದಿಯಲ್ಲಿ ಹರಸಾಹಸ ಪಟ್ಟು ಅರ್ಪಿತಾಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 2 ಕಿಲೋ ಮೀಟರ್ ಸ್ಟ್ರೆಚರ್ ಮೂಲಕ ಟೆಕ್ಕಿ ಹೊತ್ತು ತಂದ ಯುವಕರು. ಅಮ್ಮ ಆಂಬ್ಯುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಖಾಸಗಿ ಅಸ್ಪತ್ರೆಗೆ ರವಾನಿಸಿದ್ದಾರೆ.

ಹಾಸನದಲ್ಲಿ ಸುಟ್ಟು ಕರಕಲಾದ ತಂಬಾಕು ಬ್ಯಾರಲ್

ಆಕಸ್ಮಿಕ ಬೆಂಕಿಗೆ ತಂಬಾಕು ಬ್ಯಾರಲ್ ಧಗ ಧಗನೆ ಹೊತ್ತಿ ಉರಿದು, ಸುಟ್ಟು ಕರಕಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕರ್ಕಿಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಲೋಕೇಶ್ ಎಂಬುವವರಿಗೆ ಸೇರಿದ ಹೊಗೆಸೊಪ್ಪು ಹದಗೊಳಿಸುತ್ತಿದ್ದ ಬ್ಯಾರಲ್ ಮನೆಗೆ ಬೆಂಕಿ ತಗುಲಿದೆ.

ತಡರಾತ್ರಿ 2 ಗಂಟೆ ಸುಮಾರಿಗೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. 400 ಕೆ.ಜಿ. ತೂಕದ ತಂಬಾಕು ಸುಟ್ಟು ಬೂದಿಯಾಗಿದೆ. ಲಕ್ಷಾಂತರ ರೂ. ಬೆಲೆ ಬಾಳುವ ಬ್ಯಾರಲ್ ಮನೆ, ಪೈಪ್ ಸೆಟ್‌ಗಳು, ಛಾವಣಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ನಂದಿಸಲು ಯತ್ನಿಸಿದ ಗ್ರಾಮಸ್ಥರು, ನಂತರ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದೆ. ಅಷ್ಟರಲ್ಲಿ ಬ್ಯಾರಲ್ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Self Harming : ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ; ಸಾಲಕ್ಕೆ ಹೆದರಿ ಯುವಕ ನೇಣಿಗೆ ಶರಣು

ಚಾಲಕನ ನಿರ್ಲಕ್ಷ್ಯಕ್ಕೆ ಧರೆಗುರುಳಿದ ವಿದ್ಯುತ್ ಕಂಬಗಳು

ಚಾಲಕನ ನಿರ್ಲಕ್ಷ್ಯಕ್ಕೆ 20ಕ್ಕೂ ಹೆಚ್ಚು‌ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ 1:30ರ ಸುಮಾರಿಗೆ ಹೈಡ್ರಾಲಿಕ್ ಏರಿಸಿಕೊಂಡು ಬಂದಿದ್ದ ಟಿಪ್ಪರ್ ಚಾಲಕ, ಲಾರಿ ಟಾಪ್‌ಗೆ ವೈರ್‌ ಸಿಕ್ಕಿಹಾಕಿಕೊಂಡಿದೆ. ಇದನ್ನೂ ಗಮನಿಸದೆ ಲಾರಿ ಚಲಾಯಿಸಿದ್ದರಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡಿದೆ.

ಲಾರಿಯಲ್ಲಿದ್ದ ಜಲ್ಲಿ ಹುಡಿ ಮುಖ್ಯರಸ್ತೆಯ ತುಂಬೆಲ್ಲಾ ಬಿದ್ದಿತ್ತು. ಮದ್ಯಪಾನ ಮಾಡಿ ಲಾರಿ ಚಲಾಯಿಸಿರುವ ಶಂಕೆ ಇದೆ. ಸದ್ಯ ಜೆಸಿಬಿ ಮುಖಾಂತರ ರಸ್ತೆ ತೆರವು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಟಿಪ್ಪರ್ ಹಾಗೂ ಚಾಲಕ ಮಣಿ ಎಂಬಾತನನ್ನು ಚಿಕ್ಕಬಾಣಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version