Site icon Vistara News

Adi Yogi | ನೀವೇ ನಿರ್ಮಿಸಿಕೊಂಡ ಬೇಲಿಗಳಿಂದ ಹೊರಬನ್ನಿ; ಸದ್ಗುರು: ಚಿಕ್ಕಬಳ್ಳಾಪುರದಲ್ಲಿ ಆದಿ ಯೋಗಿ ಪ್ರತಿಮೆ

adi-yogi-come-out-of-self-made-fence-says-sadhguru

ಬೆಂಗಳೂರು: ಮಾನವರು ಹುಟ್ಟುತ್ತ ಯಾವುದೇ ಬೇಲಿಗಳಿಲ್ಲದೇ ಇರುತ್ತಾರೆ. ಆದರೆ ನಂತರದಲ್ಲಿ ತಮ್ಮ ಸುತ್ತಲೇ ಬೇಲಿಗಳನ್ನು ನಿರ್ಮಿಸಿಕೊಳ್ಳುತ್ತ ಅದನ್ನೇ ನಿಜವಾದ ಪ್ರಪಂಚ ಎಂದು ಭಾವಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಈಶ ಫೌಂಡೇಷನ್‌ನ ಸದ್ಗುರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ (Adi Yogi) ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಮಾನವರು ಅನೇಕ ರೂಪಗಳಲ್ಲಿ ಜೀವನ ನಡೆಸುತ್ತಾರೆ. ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಇದರಿಂದ ಸಂತೋಷ ಉಂಟಾಗುತ್ತದೆ. ನಮ್ಮ ನಿಜವಾದ ವ್ಯಕ್ತಿತ್ವವನ್ನು ಸ್ಪರ್ಷಿಸುವುದರಿಂದ ಸಾಮಾನ್ಯ ಜೀವಿಯಿಂದ ಮೇಲೆದ್ದು ಉನ್ನತ ಮಟ್ಟವನ್ನು ತಲುಪುತ್ತೇವೆ.

ಅಂತಹ ವ್ಯಕ್ತಿತ್ವವು, ತಮ್ಮ ಕೆಳಕೆ ಇನ್ನೊಬ್ಬರನ್ನು ಹಿಂಸಿಸುತ್ತಿರುವವರತ್ತ ನೋಡಬೇಕು. ಇದರಿಂದಾಗಿಯೇ ಒಬ್ಬ ಸಾಮಾನ್ಯರು ಯೋಗಿ ಆಗುತ್ತಾರೆ. ಅದಕ್ಕಾಗಿಯೇ ಮೊಟ್ಟಮೊದಲ ಯೋಗಿ, ಅಂದರೆ ಆದಿ ಯೋಗಿಯನ್ನು ನಾವು ಹೊಂದಿದ್ದೇವೆ. ನಮ್ಮ ಪ್ರತಿನಿತ್ಯದ ಜಂಜಾಟಗಳ ನಡುವೆಯೇ ಸಣ್ಣ ಕ್ರಿಯೆಯ ಮೂಲಕ ಉನ್ನತ ಮಟ್ಟಕ್ಕೆ ಏರಬಹುದು.

ಕೆಲವರು ಈಶಾ ಕ್ರಿಯೆಯ ಮೂಲಕ, ಈಶಾ ಮೊಬೈಲ್‌ ಮೂಲಕವೇ ಇದನ್ನು ಸಾಧಿಸುತ್ತಾರೆ. ಯಾರಿಗೆ ಇಂತಹದ್ದರಿಂದ ಹೊರಬರಲು ಸಾಧ್ಯವಿಲ್ಲವೊ, ಅಂಥವರಿಗಾಗಿ ಇಂತಹ ಶಕ್ತಿಸ್ಥಳಗಳನ್ನು ಸೃಷ್ಟಿಸಲಾಗುತ್ತದೆ. ಏನನ್ನೋ ನಿರೀಕ್ಷೆ ಇಟ್ಟುಕೊಂಡವರಿಗೆ ಈ ಜಾಗವಲ್ಲ. ತಮ್ಮ ಮಟ್ಟವನ್ನು ಮೇಲಕ್ಕೆ ಎತ್ತರಿಸಿಕೊಳ್ಳಲು ಬಯಸುವವರಿಗಾಗಿ. ಆದರೆ, ಆ ಮಾರ್ಗಕ್ಕೆ ನಾವು ಪ್ರಯಾಣ ಆರಂಭಿಸುತ್ತೇವೆಯೇ ಎನ್ನುವುದು ಪ್ರಶ್ನೆ.

ಜನರು ಒಂದರ ನಂತರ ಒಂದು ಬೇಲಿಗಳನ್ನು ತಮ್ಮ ಸುತ್ತ ನಿರ್ಮಿಸಿಕೊಳ್ಳುತ್ತಿದ್ದಾರೆ. ಹುಟ್ಟಿದಾಗ ಯಾವುದೇ ಬೇಲಿ ಇರಲಿಲ್ಲ. ಆದರೆ ಮುಂದುವರಿದಂತೆ ಸಾಮಾಜಿಕ, ಶೈಕ್ಷಣಿಕ ಬೇಲಿಗಳನ್ನು ನಿರ್ಮಿಸಿಕೊಂಡಿದ್ದೇವೆ. ಈ ಬೇಲಿಗಳು ಸಿಹಿಯಾಗಿರುತ್ತವೆ. ಅದರ ಸವಿಯನ್ನು ಸವಿಯುತ್ತ, ಇದೇ ಉತ್ತಮ ಜಗತ್ತು ಎಂಬ ಭ್ರಮೆ ಮೂಡುತ್ತದೆ. ಆದರೆ ಅದು ಸತ್ಯವಲ್ಲ. ಅನೇಕರು ಇಂದು ತಮ್ಮನ್ನು ಹುಲಿ, ಸಿಂಹ ಎಂದು ಕರೆದುಕೊಳ್ಳುತ್ತಾರೆ. ಹಾಗೆ ಕರೆದುಕೊಂಡರೆ ಅದು ಮಾನವನ ಜೀವ ವಿಕಾಸದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟಂತೆ. ಮಾನವನಾಗುವುದೇ ಈ ಜಗತ್ತಿನಲ್ಲಿ ಅತ್ಯುನ್ನತ ಜೀವನ ವಿಕಾಸ. ಆದರೆ ಅನೇಕ ಮಾನವರು ತಮ್ಮನ್ನು ಈ ಎತ್ತರದಲ್ಲಿ ಭಾವಿಸಿಕೊಳ್ಳುತ್ತಿಲ್ಲ. ಏಕೆಂದರೆ ಅವರ ಮೂಲಕ್ಕೆ ತಲುಪುವ ಮಾರ್ಗವನ್ನು ಅವರು ಕಂಡುಕೊಂಡಿಲ್ಲ. ಸುಖಾಸುಮ್ಮನೆ ನೋವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಇಂತಹ ಕಾರಣಕ್ಕಾಗಿಯೇ ಅನೇಕರು ಯೋಗದ ಮೊರೆ ಹೋಗಿದ್ದಾರೆ. ಯೋಗ ಮಾಡದೇ ಇದ್ದರೆ ಕೊಲೆ ಮಾಡುತ್ತೇವೆ ಎಂದು ಯಾರೂ ಇಲ್ಲಿವರೆಗೆ ಹೇಳಿಲ್ಲ, ಯಾರೂ ಹೇಳುವುದೂ ಇಲ್ಲ. ಆದರೂ ಇಷ್ಟು ಬೃಹತ್‌ ಸಂಖ್ಯೆಯಲ್ಲಿ ಜನರು ಒಂದಲ್ಲ ಒಂದು ಮಾದರಿಯ ಯೋಗವನ್ನು ಆಚರಿಸುತ್ತಿದ್ದಾರೆ. ನೀವು ಎಳೆದುಕೊಂಡಿರುವ ಬೇಲಿಗಳನ್ನು ಮೀರಲು ಯೋಗವು ಸಹಕರಿಸುತ್ತದೆ. 112 ಮಾದರಿಗಳಲ್ಲಿ ಮಾನವರು ತಮ್ಮ ಔನ್ನತ್ಯವನ್ನು ಸಾಧಿಸಬಹುದು ಎಂದು ಆದಿಯೋಗಿ ತಿಳಿಸಿದ್ದಾರೆ. ಅದಕ್ಕಾಗಿಯೇ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದರು.

ಸ್ಥಳವು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಕಾರಣಕ್ಕೆ ಸ್ಥಳೀಯ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಬಾರದು ಎಂದು ಈಗಾಗಲೆ ಹೈಕೋರ್ಟ್‌ ತಿಳಿಸಿದೆ. ಆದರೆ ಈ ಮೊದಲೇ ನಿಶ್ಚಯವಾಗಿದ್ದ ಆದಿಯೋಗಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿತ್ತು.

ಇದನ್ನೂ ಓದಿ Isha Foundation | ನಂದಿ ಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಅನುಮತಿ

Exit mobile version