Site icon Vistara News

Dead Body Found : ಮರದಲ್ಲಿ ನೇತಾಡುತ್ತಿತ್ತು ಅಪರಿಚಿತನ ಶವ; ಸತ್ತವನ ಕೈ ಮೇಲಿತ್ತು ಲಕ್ಷ್ಮಿ ಹೆಸರಿನ ಹಚ್ಚೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ (Dead Body Found) ಪತ್ತೆಯಾಗಿದೆ. ಮೃತನ ಕೈ ಮೇಲೆ ಲಕ್ಷ್ಮಿ ಎಂಬ ಹಚ್ಚೆ ಗುರುತು ಪತ್ತೆಯಾಗಿದೆ.

ಪ್ರೀತಿ-ಪ್ರೇಮ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಮರಕ್ಕೆ ನೇತು ಹಾಕಿ ಹೋಗಿರುವ ಅನುಮಾನವಿದೆ. ಮರದಲ್ಲಿ ನೇತಾಡುತ್ತಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಲ್ಲಿದ್ದ ಮೃತದೇಹವನ್ನು ಕೆಳಗಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಸದ್ಯ ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

ನೀರಿನಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ

ಈಜಲು ತೆರಳಿದ್ದ ಯುವಕ ನೀರು ಪಾಲಾಗಿದ್ದ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಹೇರೂರು ಗ್ರಾಮದ ಹಾರಂಗಿ ಹಿನ್ನೀರಿನಲ್ಲಿ ನಿನ್ನೆ ಭಾನುವಾರ ಅವಘಡ ನಡೆದಿತ್ತು. ನೀರಿನಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಸೋಮವಾರ ಪತ್ತೆಯಾಗಿದೆ. ಮೈಸೂರು ಮೂಲದ ಶಶಿ (30) ಮೃತ ದುರ್ದೈವಿ. ಶಶಿ ತನ್ನ 15 ಮಂದಿ ಸ್ನೇಹಿತರೊಟ್ಟಿಗೆ ಮೈಸೂರಿನಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಶಶಿ ಈಜಲು ಹೋಗಿ ನೀರುಪಾಲಾಗಿದ್ದ, ಇದೀಗ ಆತನ ಮೃತದೇಹವ ಸಿಕ್ಕಿದ್ದು, ಕುಶಾಲನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೀರಲ್ಲಿ ಕೊಚ್ಚಿ ಹೋದವರಿಗಾಗಿ ಹುಡುಕಾಟ

ಇತ್ತ ನಿನ್ನೆ ಭಾನುವಾರ ಮಹಾರಾಷ್ಟ್ರದ ಲೋನಾವಲಾ ಬಳಿ ದಿಢೀರ್ ಪ್ರವಾಹಕ್ಕೆ ನೋಡನೋಡುತ್ತಿದ್ದಂತೆ ಐವರು ಕೊಚ್ಚಿ ಹೋಗಿದ್ದರು. ಪುಣೆಯ ಅನ್ಸಾರಿ ಕುಟುಂಬದ ನಾಲ್ವರು ಮಕ್ಕಳು ಸೇರಿ ಓರ್ವ ‌ಮಹಿಳೆ‌ ನೀರುಪಾಲಾಗಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ಎನ್‌ಆರ್‌ಎಫ್‌ ತಂಡ ಮೂವರ ಶವ ಹೊರ ತೆಗೆದಿತ್ತು. ನೀರಲ್ಲಿ ಕಣ್ಮರೆಯಾಗಿರುವ ಇನ್ನಿಬ್ಬರಿಗಾಗಿ ನಿರಂತರ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬೀಡು ಬಿಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version