Site icon Vistara News

Pradeep Eshwar : ಒಬ್ಬ ಶಾಸಕ ಬಿಗ್‌ ಬಾಸ್‌ಗೆ ಹೋಗ್ತಾನಾ? ಪ್ರದೀಪ್‌ ಈಶ್ವರ್‌ ಬಗ್ಗೆ ಡಾ.ಕೆ ಸುಧಾಕರ್

Dr K Sudhakar Pradeep Eshwar Big boss 10

ಚಿಕ್ಕಬಳ್ಳಾಪುರ:‌ ಯಾರಾದರೂ ಶಾಸಕರಾಗಿ ಬಿಗ್‌ ಬಾಸ್‌ಗೆ (Big Boss season 10) ಹೋಗ್ತಾರಾ? ಇವರು ಚಿಕ್ಕಬಳ್ಳಾಪುರವನ್ನು ನಗೆಪಾಟಲಿಗೆ ಈಡು ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಚಿಕ್ಕಬಳ್ಳಾಪುರ (Chikkaballapura MLA) ಕಲಶಪ್ರಾಯವಾಗಿತ್ತು. ಕ್ಷೇತ್ರದ ಮರ್ಯಾದೆ ಹಾಳು ಮಾಡ್ತಾರೆ: ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಭಾಗವಹಿಸಲು ದೊಡ್ಮನೆಗೆ ತೆರಳಿರುವ ಶಾಸಕ ಪ್ರದೀಪ್‌ ಈಶ್ವರ್‌ (MLA Pradeep Eshwar) ಬಗ್ಗೆ ಮಾಜಿ ಶಾಸಕ, ಮಾಜಿ ಸಚಿವ ಡಾ. ಕೆ. ಸುಧಾಕರ್‌ (Dr. K Sudhakar) ಅವರು ಆಡಿದ ಮಾತಿದು.

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅ. 11ರಂದು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ವಿಚಾರವನ್ನು ತಿಳಿಸಲು ಸೋಮವಾರ ಮಾಧ್ಯಮ ಗೋಷ್ಠಿ ನಡೆಸಿದ ಡಾ. ಕೆ. ಸುಧಾಕರ್‌ ಅವರು ಅದರ ನಡುವೆ ಪ್ರದೀಪ್‌ ಈಶ್ವರ್‌ ಬಗ್ಗೆಯೂ ಮಾತನಾಡಿದರು.

ಪ್ರದೀಪ್‌ ಈಶ್ವರ್‌ ಅವರು ಬಿಗ್‌ ಬಾಸ್‌ಗೆ ಹೋಗಿದ್ದರ ಬಗ್ಗೆ ಮಾತನಾಡಿದ ಅವರು, ಒಬ್ಬ ಶಾಸಕರಾಗಿ ಹೋಗಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಕ್ಟೋಬರ್‌ 11ರಂದು ಪ್ರತಿಭಟನೆ

ರೈತರಿಗೆ ವಿದ್ಯುತ್ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ, ಪಂಪ್‌ಸೆಟ್‌ಗೆ ವಿದ್ಯುತ್‌ ಸಿಗದೆ ರೈತರು ತೊಂದರೆಯಲ್ಲಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ನಿದ್ದೆಗೆ ಜಾರಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಮತ್ತು ರೈತರ ವಿರೋಧಿ ಎಂದು ಆಕ್ಷೇಪಿಸಿದರು.

ರೈತರ ಬೆನ್ನನ್ನು ಮುರಿಯುವಂತಹ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅಕ್ಟೋಬರ್‌ 11ರ ಬುಧವಾರ ಬೃಹತ್ ಪ್ರತಿಭಟನೆ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರ ನಗರದಲ್ಲಿ ರೈತರೊಂದಿಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ ಎಂದರು.

ರೈತರನ್ನು ಉದ್ಧಾರ ಮಾಡುತ್ತೇವೆ ಅಂದಿದ್ದ ಸರ್ಕಾರ ರೈತರ ಹೊಟ್ಟೆಗೆ ಹೊಡೆಯುತ್ತಿದೆ. ಹಿಂದಿನ ಸರ್ಕಾರದಲ್ಲಿ ರೈತರ ಮಕ್ಕಳಿಗೆ ಸ್ಕಾಲರ್‌ಷಿಪ್‌ ಕೊಡುತ್ತಿದ್ದುದನ್ನು ಈ ಸರ್ಕಾರ ರದ್ದು ಮಾಡಿದೆ. ರೈತರ ಮಕ್ಕಳು ಓದಬಾರದಾ? ಇದೇನಾ ನೀವು ರೈತರಿಗೆ ಗೌರವ ಕೊಡೋದು..? ಇದು ಪಾಪದ ಕೆಲಸ ಎಂದರು ಡಾ.ಕೆ. ಸುಧಾಕರ್‌.

ನನ್ನ ಮೇಲಿನ ಕೋಪಕ್ಕೆ ಜಿಲ್ಲೆ ಮೇಲೆ ಸೇಡು

ʻʻಚಿಕ್ಕಬಳ್ಳಾಪುರ ಜಿಲ್ಲೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನನ್ನ ಮೇಲಿನ ಕೋಪಕ್ಕೆ ಈ ರೀತಿ ಮಾಡುತ್ತಿರೋದು ಸರಿಯಲ್ಲ. ಚಿಕ್ಕಬಳ್ಳಾಪುರಕ್ಕೆ ಇದ್ದ ಪ್ರತ್ಯೇಕ ಹಾಲು ಒಕ್ಕೂಟವನ್ನು ರದ್ದುಗೊಳಿಸಿದ್ದಾರೆʼʼ ಎಂದು ಅವರು ಆರೋಪಿಸಿದರು.

ಜೆಡಿಎಸ್‌ ಮೈತ್ರಿಯಿಂದ ಸುಧಾಕರ್‌ಗೆ ಸಂದಿಗ್ಧ ಪರಿಸ್ಥಿತಿ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಬಗ್ಗೆ ಕೇಳಿದಾಗ ಮಾಜಿ ಸಚಿವ ಡಾ ಕೆ ಸುಧಾಕರ್ ಅವರು ಬಿಜೆಪಿ-ಜೆಡಿಎಸ್‌ ಮೈತ್ರಿಯ ಬಗ್ಗೆ ಮಾತನಾಡಿದರು. ಈ ಕ್ಷೇತ್ರವನ್ನು ಜೆಡಿಎಸ್‌ ತನಗೆ ಬಿಟ್ಟುಕೊಡುವಂತೆ ಕೇಳಿಕೊಂಡಿದೆ ಎನ್ನಲಾಗುತ್ತಿದೆ.

ʻʻನಾನು ರಾಜಕೀಯ ಜೀವನ ಪ್ರಾರಂಭ ಮಾಡಿದ್ದೇ ಜನತಾದಳದ ವಿರುದ್ಧ. ಇಲ್ಲಿ ತನಕ ಜನತಾದಳದ ವಿರುದ್ಧವೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈಗ ಜನತಾದಳದೊಂದಿಗೆ ಮೈತ್ರಿಯಾಗಿರುವುದು ಸಂದಿಗ್ಧ ಪರಿಸ್ಥಿತಿ ನಿರ್ಮಿಸಿದೆ. ನಾವು ಶಿಸ್ತಿನ ಸಿಪಾಯಿಗಳು ಆಗಿರೋದ್ರಿಂದ ಹೈಕಮ್ಯಾಂಡ್ ಹೇಳಿದ ಹಾಗೆ ಮಾಡುತ್ತೇವೆ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಬದ್ಧವಾಗಿರುತ್ತೇನೆʼʼ ಎಂದು ಹೇಳಿದರು.

ಎಚ್‌ಡಿಕೆ ವಿರೋಧ ಪಕ್ಷ ನಾಯಕನಾಗುವುದು ಕಷ್ಟ ಎಂದ ಸುಧಾಕರ್‌

ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದಿರುವ ಬಗ್ಗ ಕೇಳಿದಾಗ, ʻʻಐದು ತಿಂಗಳಾದ್ರೂ ವಿಪಕ್ಷ ನಾಯಕರನ್ನು ಮಾಡಲಿಲ್ಲ ಅಂದ್ರೆ ಅದಕ್ಕೆ ಬಲವಾದ ಕಾರಣ ಏನಾದ್ರೂ ಇರಬೇಕುʼʼ ಎಂದರು. ಆದರೆ, ಕುಮಾರಸ್ವಾಮಿ ಅವರನ್ನು ವಿಪಕ್ಷ ನಾಯಕರನ್ನು ಮಾಡುವುದು ಕಷ್ಟ ಅನಿಸುತ್ತದೆ. ಕಾನೂನಾತ್ಮಕವಾಗಿ ಏನಾದ್ರೂ ತೊಂದರೆ ಆಗಬಹುದು. ನಮ್ಮಲ್ಲೇ ಅರವತ್ತಕ್ಕೂ ಹೆಚ್ಚಿನ ಜನ ಇದಾರೆ, ಮಾಜಿ ಮುಖ್ಯಮಂತ್ರಿಗಳಿದ್ದಾರೆ, ಹಿರಿಯ ನಾಯಕರಿದ್ದಾರೆ. ನನಗೆ ಗೊತ್ತಿರುವ ಹಾಗೆ ಕುಮಾರಸ್ವಾಮಿ ವಿಪಕ್ಷನಾಯಕ ಆಗಲು ಸಾಧ್ಯವಿಲ್ಲʼʼ ಎಂದು ಹೇಳಿದರು.

15 ಲಕ್ಷ ಹಾಕ್ತೀನಿ ಅಂದಿದ್ದರ ವಿಡಿಯೊ ಕೊಡಿ, ನಾನೇ ಹಣ ಹಾಕ್ತೀನಿ!

ಗ್ಯಾರಂಟಿ ವಿಚಾರಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಬಹುದು ಎಂದು ಹೇಳಿದ್ದರ ಬಗ್ಗೆ ಚರ್ಚೆ ಆಯಿತು. ʻʻಮೋದಿಯವರು ಹಾಗೆ ಹೇಳಿರುವ ವಿಡಿಯೊ ತುಣುಕು ಇದ್ರೆ ಕೊಡಿ. ನಾನೇ ನಿಮ್ಮ ಖಾತೆಗೆ ಹದಿನೈದು ಲಕ್ಷ ಹಣ ಫ್ರೀಯಾಗಿ ಹಾಕ್ತೀನಿ ಎಂದರು ಸುಧಾಕರ್‌.

ಗುತ್ತಿಗೆದಾರ ಎಂದ ಸಚಿವ ಡಾ. ಎಂ.ಸಿ. ಸುಧಾಕರ್‌ಗೆ ತಿರುಗೇಟು

ಮಾಜಿ ಸಚಿವ ಡಾ ಕೆ ಸುಧಾಕರ್ ಒಬ್ಬ ಗುತ್ತಿಗೆದಾರ ಎಂಬ ಸಚಿವ ಡಾ ಎಂ.ಸಿ ಸುಧಾಕರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾವ್ಯಾವುದಕ್ಕೆ ಎಷ್ಟೆಷ್ಟು ಫಿಕ್ಸ್ ಆಗಿದೆ ಅನ್ನೋದು ಗೊತ್ತಿದೆ. ಎಲ್ಲಾ ಮಾಹಿತಿ ಕಲೆ ಹಾಕ್ತಿದ್ದೀನಿ. ದಾಖಲೆ ಸಮೇತ ಬರ್ತೀನಿ‌. ಈಗಲೇ ಎಲ್ಲವೂ ಹೇಳಿದ್ರೆ ಅಜೀರ್ಣವಾಗುತ್ತದೆʼʼ ಎಂದು ಹೇಳಿದರು.

ಇದನ್ನೂ ಓದಿ: BBK Season 10: ಕಲರ್‌ಫುಲ್‌ ಮನೆಗೆ ಖಡಕ್‌ ಡೈಲಾಗ್‌ ಮೂಲಕ ಭರ್ಜರಿ ಎಂಟ್ರಿ ಕೊಟ್ರು MLA ಪ್ರದೀಪ್ ಈಶ್ವರ್!

ಕಾಂಗ್ರೆಸ್‌ ಮತ್ತು ಕೋಮುಗಲಭೆ

ʻʻಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಕೋಮು ಗಲಭೆಗಳು ಹೆಚ್ಚಾಗ್ತವೆʼʼ ಎಂದು ಪ್ರಶ್ನೆ ಮಾಡಿ ಅವರೇ ಉತ್ತರ ಹೇಳಿದರು. ʻʻಕೋಮುಗಲಭೆಗಳಿಗೆ ಯಾವ ಪಕ್ಷ ಸಪೋರ್ಟ್ ಮಾಡುತ್ತದೋ ಆ ಪಕ್ಷದ ಸರ್ಕಾರ ಬಂದಾಗ ಈ ರೀತಿಯಾಗಿ ಗಲಭೆಗಳಾಗುತ್ತವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರದ ಭಯ ಇದ್ರೆ ಗಲಾಟೆಗಳಿಗೆ ಹೋಗಲ್ಲʼʼ ಎಂದು ಹೇಳಿದರು ಕೆ. ಸುಧಾಕರ್‌.

ʻʻಈ ಸರ್ಕಾರ ಬಂದಾಗ ಮಾತ್ರ ಯಾಕೆ ಕೋಮುಗಲಭೆ ಹೆಚ್ಚಾಗುತ್ತಿದೆ? ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳ ಮೇಲೆ ಕೇಸ್ ಗಳನ್ನು ವಜಾ ಮಾಡಿದ್ದೀರಿ. ಆ ಮೂಲಕ ನೀವೇ ಕೋಮು ಗಲಭೆಗಳಿಗೆ ಕುಮ್ಕಕ್ಕು ಕೊಡುತಿದ್ದೀರಿʼʼ ಎಂದು ಹೇಳಿದರು ಸುಧಾಕರ್‌.

ಚಿಕ್ಕಬಳ್ಳಾಪುರ:‌ ಯಾರಾದರೂ ಶಾಸಕರಾಗಿ ಬಿಗ್‌ ಬಾಸ್‌ಗೆ (Big Boss season 10) ಹೋಗ್ತಾರಾ? ಇವರು ಚಿಕ್ಕಬಳ್ಳಾಪುರವನ್ನು ನಗೆಪಾಟಲಿಗೆ ಈಡು ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಚಿಕ್ಕಬಳ್ಳಾಪುರ (Chikkaballapura MLA) ಕಲಶಪ್ರಾಯವಾಗಿತ್ತು. ಕ್ಷೇತ್ರದ ಮರ್ಯಾದೆ ಹಾಳು ಮಾಡ್ತಾರೆ: ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಭಾಗವಹಿಸಲು ದೊಡ್ಮನೆಗೆ ತೆರಳಿರುವ ಶಾಸಕ ಪ್ರದೀಪ್‌ ಈಶ್ವರ್‌ (MLA Pradeep Eshwar) ಬಗ್ಗೆ ಮಾಜಿ ಶಾಸಕ, ಮಾಜಿ ಸಚಿವ ಡಾ. ಕೆ. ಸುಧಾಕರ್‌ (Dr. K Sudhakar) ಅವರು ಆಡಿದ ಮಾತಿದು.

Exit mobile version