Site icon Vistara News

ED raid : ಮಾಲೂರು ಶಾಸಕ ನಂಜೇಗೌಡ, ಸಚಿವರ ಆಪ್ತರಿಗೆ ಇ.ಡಿ ಶಾಕ್‌; ಮುಳ್ಳಾಯ್ತೇ ಕೋಚಿಮುಲ್‌ ಹಗರಣ

ED Raid KY Nanjegowda

ಕೋಲಾರ, ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳ್ಳಗ್ಗೆ ಜಾರಿ ನಿರ್ದೇಶನಾಲಯ (Enforcement directorate ED) ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ. ಮಾಲೂರಿನ ಕಾಂಗ್ರೆಸ್‌ ಶಾಸಕ (Maluru Congress MLA) ಕೆ.ವೈ ನಂಜೇಗೌಡ (MLA KY Nanjegowda), ಅವರ ಹಲವು ಆಪ್ತರ ಮನೆಗಳಿಗೆ ಅಧಿಕಾರಿಗಳು ಲಗ್ಗೆ ಇಟ್ಟಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್‌ (Minister Dr. MC Sudhakar) ಅವರ ಆಪ್ತರೇ ಟಾರ್ಗೆಟ್‌ ಆಗಿದ್ದಾರೆ. ಕೋಲಾರ-ಚಿಕ್ಕಮಗಳೂರು ಹಾಲು ಒಕ್ಕೂಟದಲ್ಲಿ (ಕೋಚಿಮುಲ್‌) ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಕೋಲಾರದಲ್ಲಿ ಕೋಚಿಮುಲ್‌ ಅಧ್ಯಕ್ಷ, ಶಾಸಕರ ಮನೆಗೆ ಲಗ್ಗೆ

ಕೋಲಾರ ಜಿಲ್ಲೆಯ ಮಾಲೂರಿನ ಕಾಂಗ್ರೆಸ್‌ ಶಾಸಕರಾಗಿರುವ ಕೆ.ವೈ ನಂಜೇಗೌಡ ಅವರ ಕಚೇರಿ ಮತ್ತು ಮನೆ ಮೇಲೆ ಇಡಿ ದಾಳಿ ನಡೆಸಿದೆ. ಇವರು ಕೋಚಿಮುಲ್‌ ಡೈರಿಯ ಅಧ್ಯಕ್ಷರೂ ಆಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ಕೋಮ್ಮನಹಳ್ಳಿ ಗ್ರಾಮದಲ್ಲಿ ಶಾಸಕರ ನಿವಾಸ ನಿವಾಸವಿದೆ. ಬೆಳಗ್ಗೆ 6 ಗಂಟೆಗೆ ಇ.ಡಿ ತಂಡ ಲಗ್ಗೆ ಇಟ್ಟಿದೆ. ಮನೆಯಲ್ಲಿರುವ ಮಹತ್ವ ದಾಖಲೆ ಪರಿಶೀಲನೆ ನಡೆಸುತ್ತಿದೆ. ಮನೆಯ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ, ಯಾರಿಗೂ ಒಳಗೆ ಹೋಗಲು, ಯಾರಿಗೂ ಒಳಗೆ ಬರಲು ಅವಕಾಶ ನೀಡಲಾಗುತ್ತಿಲ್ಲ.

25 ಜನ ಇಡಿ ಸಿಬ್ಬಂದಿಗಳ ತಂಡದಿಂದ ದಾಳಿ ನಡೆದಿದೆ. ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಕೋಚಿಮುಲ್ ಡೈರಿ ಮೇಲೆ ಇಡಿ ತಂಡ ದಾಳಿಯಿಟ್ಟು, ಡೈರಿ ಕಚೇರಿಯ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದೆ.

ಈ ನಡುವೆ, ಶಾಸಕ ನಂಜೇಗೌಡ ಮನೆ ಮಾತ್ರವಲ್ಲದೆ, ಅವರ ಆಪ್ತ ಅಬ್ಬೇನಹಳ್ಳಿ ಗೋಪಾಲ್‌ ನಿವಾಸ, ಶಾಸಕರ ಪಿಎ ಹರೀಶ್ ದೊಡ್ಡ ಮಲ್ಲೆ ಗ್ರಾಮದ ಮನೆ ಮೇಲೆ ದಾಳಿ ನಡೆದಿದೆ. ಶಾಸಕರ ಮಗನ ಹೆಸರಿನಲ್ಲಿ ಇರುವ ನಂಜುಂಡೇಶ್ವರ ಸ್ಟೋನ್ ಜಲ್ಲಿ ಕ್ರಷರ್ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ED Raid: ಹೀರೋ ಮೋಟೋಕಾರ್ಪ್‌ ಮಾಲಿಕನ ಆಸ್ತಿ ಮುಟ್ಟುಗೋಲು, ಇಡಿ ತನಿಖೆ

ಸಚಿವ ಡಾ. ಎಂ.ಸಿ. ಸುಧಾಕರ್‌ ಬೆಂಬಲಿಗನ ಮೇಲೂ ದಾಳಿ

ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ ಎಂ.ಸಿ ಸುಧಾಕರ್ ಕಟ್ಟಾ ಬೆಂಬಲಿಗನ ಮೇಲೆ ಇಡಿ ದಾಳಿ ನಡೆಸಿದೆ. ಕೋಚಿಮುಲ್ ನಿರ್ದೇಶಕ ಅಶ್ವತ್ ನಾರಾಯಣ (ಊಲವಾಡಿ ಬಾಬು) ನಿವಾಸದ ಮೇಲೆ ದಾಳಿ ನಡೆದಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಆಧಾರದ ಹಿನ್ನೆಲೆಯಲ್ಲಿ ಇ.ಡಿ‌ ದಾಳಿ ನಡೆಸಿದೆ ಎಂದು ಹೇಳಲಾಗಿದ್ದು, ಊಲವಾಡಿ ಬಾಬು ನಿವಾಸದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಚಿಂತಾಮಣಿ ನಗರದ ಪ್ರಭಾಕರ್ ಲೇಔಟ್ ನಲ್ಲಿರುವ ಊಲವಾಡಿ ಬಾಬು ನಿವಾಸಕ್ಕೆ ಬೆಳಗ್ಗೆ ಹಲವಾರು ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಊಲವಾಡಿ ಬಾಬು ಅವರು ಕೂಡಾ ಕೋಚಿಮುಲ್‌ ನಿರ್ದೇಶಕರಲ್ಲಿ ಒಬ್ಬರು.

ಏನಿದು ಕೋಚಿಮುಲ್‌ ಹಗರಣ?

ಇತ್ತೀಚೆಗೆ ಕೋಚಿಮುಲ್ ನೇಮಕಾತಿ ಹಗರಣ ನಡೆದಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟವರು ಒಂದು ಸೀಟಿಗೆ 40ರಿಂದ 50 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಡೈರಿಯ ಒಳಗೆ ಯಾರನ್ನೂ ಬಿಡದಂತೆ ಎಲ್ಲಾ ಗೇಟ್‌ಗಳನ್ನು ಲಾಕ್ ಮಾಡಲಾಗಿದೆ. ಡೈರಿಯಲ್ಲಿರುವ ಮಹತ್ವದ ದಾಖಲೆಗಳನ್ನು ತಂಡ ಪರಿಶೀಲನೆ ನಡೆಸುತ್ತಿದೆ.

Exit mobile version