ಚಿಕ್ಕಬಳ್ಳಾಪುರ: ಮಳೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಕೃಷಿಗೆ ಬಿಡಿ ಕುಡಿಯುವ ನೀರಿಗೇ ಸಮಸ್ಯೆಯಾಗಿದೆ (water Scarcity). ರಾಜ್ಯದ ಶೇಕಡಾ 80 ಅಂದರೆ 236 ತಾಲೂಕುಗಳ ಪೈಕಿ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ (Drought situation) ಪರಿಸ್ಥಿತಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ವರುಣ ದೇವನೋ, ಇನ್ಯಾವ ದೇವರನ್ನೋ ಬೇಡಿಕೊಳ್ಳುವುದಷ್ಟೇ ಉಳಿದಿರುವ ದಾರಿ ಎಂಬಂತಿದೆ ಸ್ಥಿತಿ. ಹೀಗಾಗಿ ಜನರು ತಮಗೆ ಕಂಡಂತೆ, ತಾವು ತಿಳಿದಂತೆ, ನಂಬಿಕೆಗಳಂತೆ ದೇವರನ್ನು ಪೂಜಿಸಿ, ಕೆಲವೊಂದು ಆಚರಣೆಗಳ ಮೂಲಕ ಒಲಿಸಿ ಮಳೆ ಬರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ನೀವು ಮಳೆಗಾಗಿ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಮಾಡುವುದನ್ನು ಕೇಳಿದ್ದೀರಿ. ಇಲ್ಲೀಗ ಮಳೆಗಾಗಿ ಮಕ್ಕಳ ಮದುವೆಯ (Children marriage for rain) ಕಥೆಯನ್ನು ಕೇಳಲಿದ್ದೀರಿ.
ಚಿಕ್ಕಬಳ್ಳಾಪುರ ತಾಲೂಕಿನ ಮಗಳಕೊಪ್ಪೆ ಗ್ರಾಮದಲ್ಲಿ ಮಕ್ಕಳಿಗೆ ಮದುವೆ ಮಾಡಿ ದೇವರನ್ನು ಒಲಿಸುವ ಪ್ರಯತ್ನ ನಡೆಸಲಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ ಕಂಗಾಲಾಗಿರುವ ಗ್ರಾಮಸ್ಥರು ಮಕ್ಕಳಿಗೆ ಮದುವೆ ಮಾಡಿದ್ರೆ ಮಳೆ ಬರುತ್ತೆ ಅನ್ನೋ ನಂಬಿಕೆಯ ಚುಂಗು ಹಿಡಿದು ಈ ಕಲ್ಯಾಣೋತ್ಸವ ಏರ್ಪಡಿಸಿದ್ದಾರೆ.
ಹಾಗಂತ ಯಾವುದೋ ಕಲ್ಯಾಣ ಮಂಟಪದಲ್ಲಿ ಮನೆಯ ಒಳಗೆ ಈ ಮದುವೆ ನಡೆದಿಲ್ಲ. ಗ್ರಾಮದ ಬೀದಿಯಲ್ಲೇ ಗಂಡು ಹೆಣ್ಣನ್ನು ಕೂರಿಸಿ ಮದುವೆ ಮಾಡಲಾಗಿದೆ.
ಒಂದು ಮದುವೆಯಲ್ಲಿರುವ ಎಲ್ಲ ಸಂಪ್ರಾಯಗಳನ್ನು ಪಾಲನೆ ಮಾಡಲಾಗಿದೆ. ಹುಡುಗನಿಗೆ ಚೆನ್ನಾಗಿ ಪೇಟ, ಬಾಸಿಂಗ ಕಟ್ಟಲಾಗಿದೆ. ಹುಡುಗಿಗೆ ಜರತಾರಿ ಸೀರೆ ಉಡಿಸಿ ಅಲಂಕಾರ ಮಾಡಲಾಗಿದೆ.
ಮನೆ ಮಂದಿ ಊರಿನ ಮಂದಿಯೆಲ್ಲ ಕುಳಿತು ಅಲ್ಲಿ ಭಜನೆಗಳನ್ನು ಹೇಳುವುದು, ಹುಡುಗ-ಹುಡುಗಿಗೆ ಮುಂದಿನ ದಿನದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುವುದು ಎಲ್ಲವೂ ನಡೆದಿದೆ.
ಹುಡುಗ ಹುಡುಗಿಗೆ ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿದ್ದಾನೆ. ಪುರೋಹಿತರು ಮಾಂಗಲ್ಯಂ ತಂತುನಾನೇನ ಹೇಳಿದ್ದಾರೆ, ಸಪ್ತಪದಿಯಲ್ಲೂ ಜತೆಯಾಗಿ ಹೆಜ್ಜೆ ಹಾಕಿದ್ದಾರೆ. ಬಳಿಕ ಗಡದ್ದಾದ ಊಟವನ್ನೂ ವ್ಯವಸ್ಥೆ ಮಾಡಲಾಗಿತ್ತು.
ಮದುವೆಯ ಮೂಲಕ ದೇವರನ್ನು ಒಲಿಸುವ ಈ ಪ್ರಯತ್ನಕ್ಕೆ ಫಲ ಸಿಗುತ್ತದಾ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: Weather Report : ನಾಳೆ ಹಲವೆಡೆ ತುಂತುರು ಮಳೆ
ಇನ್ನೂ ಮಕ್ಕಳಿಗೆ ಈ ರೀತಿ ಮದುವೆ ಮಾಡೋದು ತಪ್ಪಲ್ವಾ? ಬಾಲ್ಯ ವಿವಾಹ ಕಾನೂನುಬಾಹಿರ ಅಲ್ವಾ? ಈಗ ಮದುವೆಯಾದ ಮಕ್ಕಳು ಮುಂದೆ ಸಂಸಾರ ಮಾಡ್ತಾರಾ? ಇದು ಮಕ್ಕಳ ಮನಸ್ಸಿನ ಆಘಾತ ಉಂಟು ಮಾಡಿದ ಹಾಗಾಗಲ್ವಾ ಎನ್ನುವ ಹಲವು ಪ್ರಶ್ನೆಗಳು ನಿಮ್ಮನ್ನು ಈಗ ಕಾಡುತ್ತಿರಬಹುದು. ಅದಕ್ಕೆ ಸ್ಪಷ್ಟವಾದ ಉತ್ತರವಿದೆ.
ಇಲ್ಲಿ ಶಾಸ್ತ್ರೋಕ್ತವಾಗಿ ಬಾಲಕ ಮತ್ತು ಬಾಲಕಿಗೆ ಮದುವೆ ಆಗಿದ್ದೇನೋ ನಿಜ. ಆದರೆ, ಇದರಲ್ಲಿ ಗಂಡು ಮಾತ್ರ ನಿಜ. ಹೆಣ್ಣೆಂದರೆ ಹೆಣ್ಣಲ್ಲ. ಮತ್ತೊಬ್ಬ ಹುಡುಗನಿಗೆ ಹೆಣ್ಣು ವೇಷ ತೊಡಿಸಿ ಅಣಕು ಮದುವೆ ಮಾಡಿಸಲಾಗಿದೆ. ಹೀಗಾಗಿ ಇದರಲ್ಲಿ ಕಾನೂನುಬಾಹಿರವಾದ ಯಾವುದೇ ಸಂಗತಿಗಳು ನಡೆದಿಲ್ಲ.
ದೇವರನ್ನು ಒಲಿಸಿಕೊಂಡು ಮಳೆಯ ವರ ಪಡೆಯುವ ಒಂದು ಪ್ರಯತ್ನ ನಡೆದಿದೆ ಅಷ್ಟೆ.