Site icon Vistara News

JDSನಲ್ಲಿ ಈಗಲೂ ದೇವೇಗೌಡ, ಮುಂದೆಯೂ ದೇವೇಗೌಡ; ಅದು ಹೆಬ್ಬೆಟ್ಟು ಪಕ್ಷ: HDK ಮಾತಿಗೆ ಆರ್‌. ಅಶೋಕ್‌ ತಿರುಗೇಟು

ಚಿಕ್ಕಬಳ್ಳಾಪುರ: ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಜೆಡಿಎಸ್‌ ರೀತಿ ಅಪ್ಪ ಹಾಕಿದ ಆಲದ ಮರಕ್ಕೆ ನೇಣುಹಾಕಿಕೊಳ್ಳುವವರಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‌ಜಿಲ್ಲಾಧೀಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಚಿಕ್ಕಬಳ್ಳಾಪುರದ ಜರಬಂಡಹಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಅಶೋಕ್‌, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬೆಳಗಾವಿ ಗಡಿ ವಿವಾದ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್‌, ನಮ್ಮದು ರಾಷ್ಟ್ರೀಯ ಪಕ್ಷ. ಜೆಡಿಎಸ್‌ ಎನ್ನುವುದು ಹೆಬ್ಬೆಟ್ಟು ಪಾರ್ಟಿ. ಅವರ ಕುಟುಂಬದವರು ಹೇಳಿದರೆ ಮಾತ್ರ ಹೆಬ್ಬೆಟ್ಟು ಒತ್ತೋದು. ಈಗಲೂ ದೇವೆಗೌಡ ಇನ್ನು ಮಂದೆನೂ ದೇವೇಗೌಡ. ನಮ್ಮಲ್ಲಿ ವಾಜಪೇಯಿ, ಆಡ್ವಾಣಿ, ನರೇಂದ್ರ ಮೋದಿ ಇದ್ದಾರೆ.

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ. ಬಸವರಾಜ್ ಬೊಮ್ಮಾಯಿ ನಿನ್ನೆ ಮೊನ್ನೆ ಬಂದವರಲ್ಲ, ಇಂಜಿನಿಯರಿಂಗ್‌ ಓದಿದ್ದಾರೆ. ಜೆ. ಎಚ್. ಪಟೇಲ್, ದೇವೇಗೌಡ, ರಾಮಕೃಷ್ಣ ಹೆಗಡೆ ಬಳಿ ತರಬೇತಿ ಪಡೆದಿದ್ದಾರೆ. ನಮ್ಮ ಮುಖ್ಯಮಂತ್ರಿ ಸರಳ ಮುಖ್ಯಮಂತ್ರಿ, ಬಡವರ ಕೈಗೆ ಸಿಗುವ ವ್ಯಕ್ತಿ ಎಂದಿದ್ದಾರೆ.‌

ಓಟರ್ ಐಡಿ ಹಗರಣ ಕುರಿತು ಪ್ರತಿಕ್ರಿಯಿಸಿದ ಅಶೋಕ್‌, ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಸುಮ್ ಸುಮ್ಮನೇ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. 2012ರಿಂದಲೂ ಚಿಲುಮೆ ಸಂಸ್ಥೆ ಇದರ ಉಸ್ತುವಾರಿ ಹೊತ್ತಿದೆ. ಆಗಿನಿಂದ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿತ್ತು, ಈಗ ಬಾಯಿಬಿಚ್ತಿದೆ. ಈ ಕುರಿತು ಚುನಾವಣೆ ಆಯೋಗ ತನಿಖೆ ನಡೆಸುತ್ತಿದೆ. ಸಿಎಂ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಎಂದರು.

ಎಸ್‌ಸಿಎಸ್‌ಟಿ ಮೀಸಲಾತಿ ನೀಡಿದ ಮೇಲೆ ಕಾಂಗ್ರೆಸ್‌ಗೆ ಹೊಟ್ಟೆ ಉರಿ ಬಂದಿದೆ. 75ವರ್ಷಗಳಿಂದ ಕಾಂಗ್ರೆಸ್ ಕೆಂಪೇಗೌಡರಿಗೆ ಗೌರವ ನೀಡಿರಲಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದೇಶ ಹಾಗೂ ರಾಜ್ಯದಲ್ಲಿ 50 ವರ್ಷ ಆಡಳಿತದಲ್ಲಿತ್ತು. ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್‌ನ ಯಾವುದೇ ಕೊಡುಗೆ ಇಲ್ಲ. ಮುಂದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ. ಈ ಬಾರಿ ಚುನಾವಣೆಯಲ್ಲಿ‌ ಕಾಂಗ್ರೆಸ್ ಸೋತರೆ ಎಲ್ಲೆಂದರಲ್ಲಿ ಓಡಿ ಹೋಗುತ್ತಾರೆ ಇವರು ಎಂದರು.

ವಾಯುವಿಹಾರ, ಕ್ರಿಕೆಟ್‌

ಬೆಳಗ್ಗೆ ವಾಯುವಿಹಾರ ಮಾಡಿದ ಸಚಿವ ಅಶೋಕ್, ದಿನಪತ್ರಿಕೆ ಓದುತ್ತಾ ಚಹಾ ಸವಿದರು. ಮಕ್ಕಳ ಕರಾಟೆ ವೀಕ್ಷಣೆ ಮಾಡಿದ ಸಚಿವರು ಕೆಲಕಾಲ ಯುವಕರೊಂದಿಗೆ ಕ್ರಿಕೆಟ್‌ ಆಡಿದರು.

ಇದನ್ನೂ ಓದಿ | Border Dispute | ಹೇಗೂ ಏಕರೂಪ ನಾಗರಿಕ ಸಂಹಿತೆ ಎನ್ನುತ್ತಿದ್ದೀರಿ; ಬೆಳಗಾವಿ ಇಲ್ಲಿದ್ದರೇನು? ಮಹಾರಾಷ್ಟ್ರದಲ್ಲಿ ಇದ್ದರೇನು?: ಎಚ್‌ಡಿಕೆ

Exit mobile version