ಚಿಕ್ಕಬಳ್ಳಾಪುರ: ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಚಿಕ್ಕಬಳ್ಳಾಪುರದ ನೆಲದಲ್ಲಿ ನಿಂತು, ತಾವೂ ಇದೇ ಮಣ್ಣಿನ ಮಗ ಎಂದು ಪ್ರಧಾನಿ ನರೇಂದ್ರ ಮೋದಿ (Modi in Karnataka) ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ರಾಜೇಶ್ವರಿ ಮೆಮೋರಿಯಲ್ ಬ್ಲಾಕ್ ಉದ್ಘಾಟನೆ ನೆರವೇರಿಸಿದ ನಂತರ ಮೋದಿ ಈ ಮಾತನ್ನು ಹೇಳಿದ್ದಾರೆ.
ನನಗೆ ಭಗವಾನ್ ಸಾಯಿಬಾಬಾ ಅವರ ಜತೆಗೆ ನನ್ನ ನಿಕಟ ಸಂಪರ್ಕವಿತ್ತು. ಕೆ. ಶ್ರೀನಿವಾಸ್ ಅವರ ಜತೆಗೆ ಸುಮಾರು 40 ವರ್ಷಗಳ ಬಾಂಧವ್ಯವಿದೆ. ಹಾಗಾಗಿ ನಾನು ಇಲ್ಲಿಗೆ ಅತಿಥಿ, ಸಂದರ್ಶಕ ಅಲ್ಲ. ನಾನಂತೂ ಇದೇ ಭೂಮಿಯ ಪುತ್ರ. ನಿಮ್ಮ ನಡುವೆ ಆಗಮಿಸಿದಾಗಲೆಲ್ಲ ಈ ಸಂಬಂಧ ನವೀಕರಣಗೊಳ್ಳುತ್ತದೆ, ಹಳೆಯ ನೆನಪುಗಳು ಮರುಕಳಿಸುತ್ತವೆ. ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಿಂದಾಗ್ಗೆ ಆಗಮಿಸುತ್ತಿದ್ದಾರೆ. ಕರ್ನಾಟಕವು ಸಂಕಷ್ಟದಲ್ಲಿದ್ದಾ ಆಗಮಿಸದ ಪ್ರಧಾನಿ ಇದೀಗ ಚುನಾವಣೆಗಾಗಿ ಆಗಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಅನೇಕ ಬಾರಿ ವಾಗ್ದಾಳಿ ನಡೆಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 2014ರಲ್ಲಿ ನಮ್ಮ ದೇಶದಲ್ಲಿ 380ಕ್ಕೂ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು. ಇಂದು ದೇಶದಲ್ಲಿ 650 ಕ್ಕೂ ಹೆಚ್ಚಾಗಿವೆ. ಇದರಲ್ಲಿ 40 ಮೆಡಿಕಲ್ ಕಾಲೇಜುಗಳು, ಹಿಂದುಳಿದ ಜಿಲ್ಲೆಗಳಲ್ಲಿ ನಿರ್ಮಾಣವಾಗಿವೆ. ಮೆಡಿಕಲ್ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಎಷ್ಟು ವೈದ್ಯರು ಹೊರಬಂದರೋ ಅಷ್ಟು ವೈದ್ಯರು ಮುಂದಿನ ಹತ್ತು ವರ್ಷದಲ್ಲಿ ಸೇವೆಗೆ ಲಭಿಸಲಿದ್ದಾರೆ ಎಂದು ಮೋದಿ ಪ್ರಾರಂಭದಲ್ಲಿ ತಿಳಿಸಿದರು.
ಕರ್ನಾಟಕದಲ್ಲೂ ಇಂದು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಡಬಲ್ ಇಂಜಿನ್ ಸರ್ಕಾರದ ಕಾರಣಕ್ಕೆ ನಿರ್ಮಾಣವಾದ ಮೆಡಿಕಲ್ ಕಾಲೇಜುಗಳಲ್ಲಿ ಒಂದು ಚಿಕ್ಕಬಳ್ಳಾಪುರದಲ್ಲೂ ಇದೆ. 150 ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಆಗಲಿದೆ.
ನಮ್ಮ ಸರ್ಕಾರವು ಎಲ್ಲ ಯೋಜನೆಗಳಲ್ಲಿ ಮಹಿಳೆಯರ ಕುರಿತು ಕಾಳಜಿ ವಹಿಸುತ್ತದೆ. ಶೌಚಾಲಯದಿಂದ ಸ್ತನ ಕ್ಯಾನ್ಸರ್‌ವರೆಗೆ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ 9 ಸಾವಿರಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ನಿರ್ಮಾಣ ಆಗಿರುವುದಕ್ಕೆ ಬೊಮ್ಮಾಯಿ ಹಾಗೂ ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದರು.
ಕಳೆದ ಕೆಲವು ವರ್ಷಗಳಲ್ಲಿ ಎಎನ್‌ಎಂ ಹಾಗೂ ಆಶಾ ಕಾರ್ಯಕರ್ತರನ್ನು ಮತ್ತಷ್ಟು ಸಶಕ್ತವಾಗಿಸಿದೆ. ಆಧುನಿಕ ಉಪಕರಣ ನೀಡಲಾಗಿದೆ, ಅವರ ಕೆಲಸವನ್ನು ಸುಲಭವಾಗಿಸಿದೆ. ರಾಜ್ಯದಲ್ಲಿ ಇಂದು 50 ಸಾವಿರ ಎಎನ್‌ಎಂ ಹಾಗೂ ಆಶಾ ಕಾರ್ಯಕರ್ತರಿದ್ದಾರೆ, ಸುಮಾರು 1 ಲಕ್ಷ ನೋಂದಾಯಿತ ನರ್ಸ್‌ಗಳಿದ್ದಾರೆ. ಈ ವರ್ಗಕ್ಕೆ ಎಲ್ಲ ಸೌಲಭ್ಯ ನೀಡಲು ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ಸಿದ್ಧವಿದೆ. ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ ಸರ್ಕಾರ ಮುನ್ನಡೆಯುತ್ತಿದೆ.
ಪಶುಗಳ ಆರೋಗ್ಯಕ್ಕೂ ಸರ್ಕಾರ ಒತ್ತು ನೀಡುತ್ತಿದೆ. ಉಚಿತ ಲಸಿಕೆ ನೀಡಲು ಸಾವಿರಾರು ಕೋಟಿ ರೂ, ವ್ಯಯಿಸುತ್ತಿದೆ. ಗ್ರಾಮದ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಮತ್ತಷ್ಟು ಶಕ್ತಿಯನ್ನು ಡಬಲ್ ಇಂಜಿನ್ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.