ಚಿಕ್ಕಬಳ್ಳಾಪುರ: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ (Murder Case) ನಡೆದಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಸಮೀಪವೇ ಈ ಕೃತ್ಯ ನಡೆದಿದೆ. ಶೇಖರ್ ಎಂಬಾತ ಕೊಲೆಯಾದವನು. ಶಿವಕುಮಾರ್ (35) ಕೊಲೆಗೈದ ಆರೋಪಿಯಾಗಿದ್ದಾನೆ.
ಅನೈತಿಕ ಸಂಬಂಧ, ಕಿರುಕುಳ, ಹಳೆ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಡುರಸ್ತೆಯಲ್ಲಿ ಶೇಖರ್ ಮೇಲೆ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆ ನಿವಾಸಿ ಶಿವಕುಮಾರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೇಖರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಶಿವಕುಮಾರ್ ಪತ್ತೆಗೆ ಚಿಕ್ಕಬಳ್ಳಾಪುರ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Darshan Arrested: ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?
ಬೆಳಗಾವಿಯಲ್ಲಿ ನಕಲಿ ವೈದ್ಯನಿಂದ ಭ್ರೂಣಗಳ ಹತ್ಯೆ; ಜಮೀನಲ್ಲಿ ಸಿಕ್ಕಿತು ಶಿಶುವಿನ ಶವ
ಬೆಳಗಾವಿ: ಬೆಂಗಳೂರು ಹಾಗೂ ಮಂಡ್ಯದಲ್ಲಿ ಕೆಲ ತಿಂಗಳ ಹಿಂದೆ ಹೆಣ್ಣು ಭ್ರೂಣಹತ್ಯೆಯ ಬೃಹತ್ ಜಾಲವೊಂದು ಪತ್ತೆಯಾದ ಬೆನ್ನಲ್ಲೇ ಬೆಳಗಾವಿ (Belagavi) ಜಿಲ್ಲೆಯಲ್ಲೂ ನಕಲಿ ವೈದ್ಯನು ಭ್ರೂಣ ಹತ್ಯೆ (Foeticide) ಮಾಡಿರುವ ಪ್ರಕರಣವು ಬಯಲಾಗಿದೆ. ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎಂಬಾತನು ಭ್ರೂಣಹತ್ಯೆ ಮಾಡಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಭ್ರೂಣದ ಶವವೊಂದು ಪತ್ತೆಯಾಗಿದೆ. ಇನ್ನಷ್ಟು ಭ್ರೂಣಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್‌ನ ಸಹಾಯಕನಾಗಿರುವ ರೋಹಿತ್ ಕುಪ್ಪಸಗೌಡರ್ ಎಂಬಾತನನ್ನು ಕರೆದುಕೊಂಡು ಹೋಗಿರುವ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನಕಲಿ ವೈದ್ಯನ ಜಮೀನಿನಲ್ಲಿ ಭ್ರೂಣದ ಶವ ಪತ್ತೆಯಾಗಿದೆ. ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಡಿಎಎಸ್‌ಪಿ ರವಿ ನಾಯ್ಕ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಭ್ರೂಣಗಳನ್ನು ಹೂಳುತ್ತಿದ್ದ ರೋಹಿತ್ ಕುಪ್ಪಸಗೌಡರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆತ ತೋರಿಸಿದ ಜಾಗದಲ್ಲಿ ಶೋಧ ನಡೆಸಲಾಗುತ್ತಿದೆ.
ಕಿತ್ತೂರು ಪಟ್ಟಣದಲ್ಲಿ ಭ್ರೂಣ ಲಿಂಗ ಪತ್ತೆ, ಭ್ರೂಣಗಳನ್ನು ಹತ್ಯೆ ಕೃತ್ಯದಲ್ಲಿ ತೊಡಗಿರುವ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್‌ಗೆ ರೋಹಿತ್ ಕುಪ್ಪಸಗೌಡರ್ ಹಲವು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ತಿಗಡೊಳ್ಳಿ ಗ್ರಾಮದ ಬಳಿ ಇರುವ ಫಾರ್ಮ್‌ಹೌಸ್‌ನಲ್ಲಿ ಭ್ರೂಣಗಳನ್ನು ಹೂಳುವುದೇ ರೋಹಿತ್ ಕುಪ್ಪಸಗೌಡರ ಕೆಲಸವಾಗಿತ್ತು ಎಂದು ತಿಳಿದುಬಂದಿದೆ. ಈತನನ್ನು ಫಾರ್ಮ್‌ಹೌಸ್‌ಗೆ ಕರೆದುಕೊಂಡು ಹೋಗಿರುವ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ. ರೋಹಿತ್ ತೋರಿಸಿದ ಜಾಗದಲ್ಲಿಯೇ ಒಂದು ಭ್ರೂಣ ಪತ್ತೆಯಾಗಿರುವ ಕಾರಣ ಇನ್ನಷ್ಟು ಭ್ರೂಣಗಳು ಇರಬಹುದು ಎಂಬ ಶಂಕೆಯಿಂದ ಶೋಧ ಕಾರ್ಯ ಮುಂದುವರಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಬ್ದುಲ್ ಗಫಾರ್ ಲಾಡಖಾನ್ ಹಿಂದೆ ಯಾರಿದ್ದಾರೆ? ಜಾಲದಲ್ಲಿ ಯಾರೆಲ್ಲ ತೊಡಗಿಸಿಕೊಂಡಿದ್ದಾರೆ? ಫಾರ್ಮ್‌ಹೌಸ್ ಸೇರಿ ಇನ್ನೂ ಹಲವು ಪ್ರದೇಶಗಳಲ್ಲಿ ಭ್ರೂಣಗಳನ್ನು ಹೂಳಲಾಗಿದೆಯೇ ಎಂಬುದು ಸೇರಿ ಹತ್ತಾರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಾಗಲಕೋಟೆಯಲ್ಲೂ ಭ್ರೂಣ ಹತ್ಯೆ ಪ್ರಕರಣಗಳು ಬಯಲಾಗಿದ್ದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ