Site icon Vistara News

Nag Panchami : ಚಿಕ್ಕಬಳ್ಳಾಪುರದ ನಾಗ ಮಂಟಪದಲ್ಲಿ ಇಂದು ಸದ್ಗುರು ಸಮ್ಮುಖದಲ್ಲಿ ನಾಗಮಂಡಲ

Nagamandala sadguru

ಬೆಂಗಳೂರು: ನಾಗರ ಪಂಚಮಿಯ (Nag Panchami 2023) ದಿನವಾದ ಸೋಮವಾರ (ಆಗಸ್ಟ್‌ 21) ಸಂಜೆ 5 ಗಂಟೆಯಿಂದ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿರುವ ನಾಗ ಮಂಟಪದಲ್ಲಿ (Chikkaballapura Naga Mantapa) ಉಡುಪಿಯ ನಾಗಪಾತ್ರಿಗಳಿಂದ ನಾಗಾರಾಧನೆಯು (Nagamandala at Chikkaballapur) ನಡೆಯಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಸರ್ಪ ದೋಷ ನಿವಾರಣೆಗಾಗಿ ಸಾಂಪ್ರದಾಯಿಕವಾದ ಆಶ್ಲೇಷಬಲಿ ಪೂಜೆಯೂ ನಡೆಯಲಿದೆ. ಈ ಪೂಜೆಯಲ್ಲಿ (Nag Panchami) ಪಾಲ್ಗೊಳ್ಳಲು ಯಾವುದೇ ನೋಂದಣಿ ಅಗತ್ಯವಿಲ್ಲ. ಭಕ್ತರು ಮುಕ್ತವಾಗಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನಾಗರ ಪಂಚಮಿಯ ಪ್ರಯುಕ್ತವಾಗಿ ಆಗಸ್ಟ್ 19ರಿಂದಲೇ ಇಲ್ಲಿ ಇಲ್ಲಿ ಹಳ್ಳಿ ಜಾತ್ರೆ ನಡೆಯುತ್ತಿವೆ. ಇದರ ಅಂತಿಮ ಚರಣದಲ್ಲಿ ಸಂಜೆ 5 ಗಂಟೆಗೆ ದೈವಿಕವಾದ ನಾಗನನ್ನು ಸಂಭ್ರಮಿಸುವ ನಾಗರ ಪಂಚಮಿಯ ವಿಶೇಷ ಕಾರ್ಯಕ್ರಮ ಸಂಜೆ ನಡೆಯಲಿದೆ. ನಾಗಮಂಡಲದ ಸಂದರ್ಭದಲ್ಲಿ ಸದ್ಗುರುಗಳು (Sadguru Jaggi Vasudev) ಉಪಸ್ಥಿತರಿದ್ದು ನಾಗನಿಗೆ ಆರತಿಯನ್ನು ಅರ್ಪಿಸುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.

ನಾಗರ ಪಂಚಮಿಯ ವೈಜ್ಞಾನಿಕ ಅಂಶಗಳು

ನಾಗಮಂಡಲವು ನಾಗನ ಅನುಗ್ರಹವನ್ನು ಪಡೆಯುವ ಸಾಂಪ್ರದಾಯಿಕ ಆಚರಣೆಯಾಗಿದ್ದು, ಆಧ್ಯಾತ್ಮಿಕ ಬೆಳವಣಿಗೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ತರುತ್ತದೆ ಎಂಬ ನಂಬಿಕೆಯಿದೆ. ಜ್ಯಾಮಿತೀಯ ವಿನ್ಯಾಸದ ಮಂಡಲದ ರೇಖಾಚಿತ್ರ ಬಿಡಿಸುವುದು, ಸ್ತೋತ್ರ ಮತ್ತು ಮಂತ್ರಗಳ ಪಠಣ ಹಾಗು ಅರ್ಪಣೆ ಸಲ್ಲಿಸುವುದು ಈ ನಾಗಾರಾಧನೆಯಲ್ಲಿದೆ. ಇದರಿಂದ ಜೀವನದಲ್ಲಿರುವ ಅಡೆತಡೆಗಳು ನಿವಾರಣೆಗೊಂಡು, ಸಾಮರಸ್ಯ, ಶಾಂತಿ, ಸಮೃದ್ಧಿ ಉಂಟಾಗಿ, ಒಬ್ಬರ ಪ್ರಯತ್ನದಲ್ಲಿ ಯಶಸ್ಸು ಮೂಡಿ, ಆಧ್ಯಾತ್ಮಿಕ ಪ್ರಗತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಇಂದು ನಾಗರ ಪಂಚಮಿ; ಹಾವಿಗೆ ಹಾಲೆರೆಯುವ ಜತೆಗೆ ತಿಳಿದುಕೊಳ್ಳಬೇಕಾದ 4 ಸಂಗತಿಗಳು

ಪಂಚೇಂದ್ರಿಯಗಳು ಸೋತಾಗ ನಾಗ ದೋಷ ಕಾಣಿಸುತ್ತದೆ

ನಾಗರ ಪಂಚಮಿಯ ಮಹತ್ವದ ಬಗ್ಗೆ ಸದ್ಗುರುಗಳು ಮಾತನಾಡುತ್ತಾ, “ತಮ್ಮ ಭೌತಿಕತೆಯನ್ನು ಮೀರಿ, ಇಂದ್ರಿಯಗಳನ್ನು ಮೀರಿ ಜೀವನವನ್ನು ಆಳವಾಗಿ ತಿಳಿದುಕೊಳ್ಳಲು ಬಯಸುವವರಿಗೆ ನಾಗರ ಪಂಚಮಿ ಬಹಳ ಮಹತ್ವಪೂರ್ಣವಾದ ದಿನವಾಗಿದೆ. ಎಲ್ಲಿ ಜನರು ಪಂಚೇಂದ್ರಿಯಗಳನ್ನು ಮೀರಿ ವಿಷಯಗಳನ್ನು ಗ್ರಹಿಸುತ್ತಾರೋ ಅಲ್ಲಿ ನಾಗನ ಉಪಸ್ಥಿತಿ ಇರುತ್ತದೆ. ಎಲ್ಲಿ ಪಂಚೇಂದ್ರಿಯಗಳು ಸೋಲುತ್ತವೆಯೋ ಅಲ್ಲಿ ನಾಗನ ಕೆಲಸ ಶುರುವಾಗುತ್ತದೆ. ನಿಮ್ಮ ಜೀವನ ಎಷ್ಟು ಉತ್ಸಾಹಭರಿತವಾಗಿದೆ, ಎಷ್ಟು ಸಂತೋಷದಾಯಕವಾಗಿದೆ, ಎಷ್ಟು ಅದ್ಭುತವಾಗಿದೆ- ಅದು ಮುಖ್ಯವಾದುದು. ಈ ಅನ್ವೇಷಣೆಯಲ್ಲಿ, ನಾಗನಿಗೆ ಬಹಳ ಮಹತ್ವವಿದೆ. ಅವನಂತೆ ಇರುವುದೆಂದರೆ- ನಿಶ್ಚಲತೆ, ಲವಲವಿಕೆ ಮತ್ತು ಉನ್ಮತ್ತತೆ- ಈ ಎಲ್ಲವೂ ಒಬ್ಬರಲ್ಲಿರಬೇಕು. ಜೀವನವು ನಿಮಗೆ ಅತಿ ಉನ್ನತ ರೀತಿಯಲ್ಲಿ ಸಂಭವಿಸುತ್ತದೆ- ಇದನ್ನೇ ನಾಗರ ಪಂಚಮಿ ಪ್ರತಿನಿಧಿಸುತ್ತದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ : Nag Panchami 2023: ನಾಗರ ಪಂಚಮಿ ದಿನ ಜೀವಂತ ಹಾವಿಗೆ ಹಾಲು ಕುಡಿಸಬಹುದೆ?

ಚಿಕ್ಕಬಳ್ಳಾಪುರದಲ್ಲಿ ಮಾನವ ವ್ಯವಸ್ಥೆಯಲ್ಲಿನ ಐದು ಪ್ರಮುಖ ಚಕ್ರಗಳ ಅಭಿವ್ಯಕ್ತಿಯಾಗಿ ಯೋಗೇಶ್ವರ ಲಿಂಗವು 112-ಅಡಿ ಆದಿಯೋಗಿಯ ಬಳಿ ಸದ್ಗುರುಗಳಿಂದ ಪ್ರಾಣಪ್ರತಿಷ್ಠಾಪನೆಯಾಗಿದೆ. ಪ್ರಪಂಚದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯವನ್ನು ನಿರ್ಮಿಸುವ ಸದ್ಗುರುಗಳ ದೂರದೃಷ್ಟಿಯ ಒಂದು ಭಾಗವಾಗಿ, ಸದ್ಗುರು ಸನ್ನಿಧಿಯು, ಮಾನವಕುಲಕ್ಕೇ “ಆಧ್ಯಾತ್ಮಿಕತೆಯ ಒಂದು ಹನಿ” ಯಾಗಿದೆ. ಪ್ರಸ್ತುತದಲ್ಲಿ, ನಾಗ ಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗ ಇಲ್ಲಿವೆ. ಮುಂದೆ, ಲಿಂಗ ಭೈರವಿ ದೇವಿ, ನವಗ್ರಹ, ಎರಡು ತೀರ್ಥಕುಂಡಗಳು ಮತ್ತು ಯೋಗ ಸಭಾಂಗಣಗಳು ಬರಲಿವೆ ಎಂದೂ ಪ್ರಕಟಣೆ ತಿಳಿಸಿದೆ.

ನಾಗಮಂಡಲಕ್ಕೆ ನೋಂದಾಯಿಸಲು ಭೇಟಿ ನೀಡಿ: https://sadhguru.co/nagamandala-kan-ig

ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ: https://www.youtube.com/watch?v=xY5NIi9Tf2w

Exit mobile version