ಚಿಕ್ಕಬಳ್ಳಾಪುರ: ಆಟೋ ಹಾಗು ಕ್ಯಾಂಟರ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿ ಆರು ಜನ ಕಾಲೇಜು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಗೌರಿಬಿದನೂರಿನ ನಾಗಪ್ಪ ಬ್ಲಾಕ್ ಬಳಿ ಸಂಭವಿಸಿದೆ. ಈ ಪೈಕಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ (Three Girl students serious).
ವಿಧುರಾಶ್ವಥದಿಂದ ಗೌರಿಬಿದನೂರಿಗೆ ಬರುವ ಮಾರ್ಗ ಮದ್ಯೆ ಅಪಘಾತ ಸಂಭವಿಸಿದೆ. ಗೌರಿಬಿದನೂರಿನ ಕಾಲೇಜಿಗೆ ತೆರಳುತಿದ್ದ ವಿದ್ಯಾರ್ಥಿಗಳು ಆಟೋದಲ್ಲಿ ಪ್ರಯಾಣಿಸುತ್ತಿದ್ದು, ತೀವ್ರವಾದ ಗಾಯಗಳಿಗೆ ಒಳಗಾಗಿದ್ದಾರೆ.
ಗಾಯಾಳುಗಳನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಗೌರಿಬಿದನೂರಿನಿಂದ ಬೆಂಗಳೂರಿಗೆ ಕಳುಹಿಸಲಾಗಿದೆ.
ಆಟೋದಲ್ಲಿ ಚಾಲಕ ಸೇರಿ ಒಟ್ಟು ಹನ್ನೊಂದು ಮಂದಿ ಪ್ರಯಾಣಿಸುತಿದ್ದರು. ಅವರಲ್ಲಿ ಚಾಲಕ, ಇಬ್ಬರು ವಿದ್ಯಾರ್ಥಿಗಳು ಸೇರಿ ಎಂಟು ಜನ ವಿದ್ಯಾರ್ಥಿನಿಯರು ಸೇರಿದ್ದಾರೆ.
ದೊಡ್ಡ ಕುರುಗೋಡು ಗ್ರಾಮದ ವಿದ್ಯಾರ್ಥಿಗಳಾಗಿರುವ ಇವರಿಗೆ ಸಾಮಾನ್ಯವಾಗಿ ಬಸ್ ಸಿಗುವುದಿಲ್ಲ. ಹಾಗಾಗಿ ಅವರು ಆಟೋ ಹಿಡಿದೇ ಬರುತ್ತಾರೆ. ಹಾಗೆಯೇ ಗುರುವಾರ ಮನೆಯಿಂದ ಬಂದು ರಸ್ತೆಯಲ್ಲಿ ಆಟೋ ಹಿಡಿದು ಹೊರಟಿದ್ದರು. ಎಲ್ಲ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾರೆ. ಆಟೋ ಚಾಲಕನನ್ನು ಲೋಕೇಶ್ (19) ಎಂದು ಗುರುತಿಸಲಾಗಿದೆ. ಶ್ರೀನಿವಾಸ್, ವೆನ್ನೆಲಾ, ಸಹನ, ತ್ರಿವೇಣಿ, ಪವಿತ್ರ, ರೋಷಿಣಿ ಗಾಯಗೊಂಡವರಲ್ಲಿ ಸೇರಿದ್ದಾರೆ.
ಇದನ್ನೂ ಓದಿ : Video Viral: ವೇಗವಾಗಿ ಬರುತ್ತಿದ್ದ ಲಾರಿಗೆ ಆಟೋ ಡಿಕ್ಕಿ, ಗಾಳಿಯಲ್ಲಿ ಹಾರಿಬಿದ್ದ ಶಾಲಾ ಮಕ್ಕಳು!
ಇವರಲ್ಲಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಛಿಧ್ರ ಛಿದ್ರವಾಗಿದ್ದು, ಅದನ್ನು ಸಾರ್ವಜನಿಕರು ಸೇರಿ ಬದಿಗೆ ಸರಿಸಿದರು. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ 11 ವಿದ್ಯಾರ್ಥಿಗಳ ಮನೆಯವರು ಓಡೋಡಿ ಬಂದಿದ್ದು ತಮ್ಮ ಮಕ್ಕಳ ಸ್ಥಿತಿ ಕಂಡು ಗೋಳಾಡುತ್ತಿದ್ದಾರೆ. ವಾಹನಗಳ ಅತಿಯಾದ ವೇಗವೇ ಇದಕ್ಕೆ ಕಾರಣವೆಂದು ಜನರು ಆಕ್ಷೇಪಿಸುತ್ತಿದ್ದಾರೆ.
ಈ ಭಾಗದಲ್ಲ ಸರಿಯಾದ ವಾಹನ ವ್ಯವಸ್ಥೆಗಳು ಇಲ್ಲದೆ ಇರುವುದು, ಸರ್ಕಾರಿ ಬಸ್‌ಗಳಲ್ಲಿ ಜಾಗ ಇಲ್ಲದೆ ಇರುವುದು ವಿದ್ಯಾರ್ಥಿಗಳ ಓಡಾಟಕ್ಕೆ ಭಾರಿ ಸಮಸ್ಯೆ ಉಂಟು ಮಾಡಿದೆ ಎನ್ನುವುದು ಇಲ್ಲಿನವರ ಆಕ್ಷೇಪ. ಹೀಗಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಅವಧಿಯಲ್ಲಿ ಬಸ್ ವ್ಯವಸ್ಥೆ ಮಾಡಬೇಕು ಎಂಬ ಕೂಗು ಕೂಡಾ ಕೇಳಿಬಂದಿದೆ.
ಇದನ್ನೂ ಓದಿ: Road Accident : ಯಮನಂತೆ ಬಂದ ಗೂಡ್ಸ್ ವಾಹನಕ್ಕೆ ತಾಯಿ-ಮಗ ಬಲಿ!