Site icon Vistara News

Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

snake bite

ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ (Snake Bite) 3 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೀಕ್ಷಿತ್ (3) ಮೃತ ದುರ್ದೈವಿ.

ಮಾಲತಿ-ಸುರೇಶ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಕಾಂಪೌಂಡ್‌ನ ಮುಂದೆ ಮಲಗಿದ್ದಾಗ ನಾಗರಹಾವು ಕಚ್ಚಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ದೀಕ್ಷಿತ್‌ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಪೋಷಕರು ಗೋಳಾಡಿದ್ದಾರೆ.

ಮೀನು ಹಿಡಿಯಲು ನದಿಗೆ ಇಳಿದವನು ನಾಪತ್ತೆ

ಕೃಷ್ಣ ನದಿಯಲ್ಲಿ ಮೀನುಗಾರಿಕೆಗೆ ಇಳಿದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಾವುಸಾಬ್ ಗಬಾಡೆ ನಾಪತ್ತೆಯಾದವರು.

ನಾಪತ್ತೆಯಾಗಿರುವ ಬಾವುಸಾಬ್‌ಗಾಗಿ ಹುಡುಕಾಟ

ನದಿಯಲ್ಲಿ ನಾಪತ್ತೆಯಾದ ಮೀನುಗಾರ ಬಾವುಸಾಬ್‌ ಗಬಾಡೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಶೋಧಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

ಉಡುಪಿ: ಕಾರು ಪಲ್ಟಿಯಾಗಿ ಗಾಯ

ಉಡುಪಿ: ಡಿವೈಡರ್ ಕಲ್ಲುಗಳಿಗೆ ಬಡಿದ ಕಾರು ಪಲ್ಟಿಯಾದ ಘಟನೆ ಉಡುಪಿ-ಮಣಿಪಾಲ ಮಧ್ಯದ ಇಂದ್ರಾಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದ ಫೋರ್ಡ್ ಫಿಗೊ ಕಾರು ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.

ಬೈಕ್‌ಗೆ ಹಾನಿ

ಆರಂಭದಲ್ಲಿ ಕಾರು ಡಿವೈಡರ್ ಕಲ್ಲಿಗೆ ಡಿಕ್ಕಿ ಹೊಡೆದಿತ್ತು. ತಕ್ಷಣ ಕಲ್ಲಿನ ತುಂಡು ಹಾರಿ ಸಮೀಪದಲ್ಲಿದ್ದ ಬೈಕ್‌ ಮೇಲೆ ಬಿದ್ದಿದೆ. ಇದರಿಂದ ಬೈಕಿಗೂ ತೀವ್ರ ಹಾನಿಯಾಗಿದ್ದು, ಅದೃಷ್ಟವಶಾತ್‌ ಬೈಕ್‌ ಸವಾರ ಬಚಾವಾಗಿದ್ದಾನೆ. ರಸ್ತೆ ಮಧ್ಯೆ ವಿಭಜಕವಾಗಿ ಬಳಸುತ್ತಿದ್ದ ಕಲ್ಲುಗಳು ಎಗರಿದ್ದು, ಟ್ರಾಫಿಕ್ ಪೊಲೀಸ್ ಮತ್ತು ಹೈವೇ ಅಥಾರಿಟಿ ನಿರ್ಲಕ್ಷ್ಯದಿಂದ ಇಂತಹ ಘಟನೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ನಾಲ್ಕು ಮಂದಿ ಸಾವು

ಚಿತ್ರದುರ್ಗ: ಶನಿವಾರ ಮುಂಜಾನೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಹಾದು ಹೋಗುವ NH 4 ರಲ್ಲಿ ಭೀಕರ ಅಪಘಾತ ನಡೆದಿದೆ. ನ್ಯಾಷನಲ್​ ಹೈವೇನಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಂದ ಲಾರಿಯೊಂದು ರಭಸದಿಂದ ಗುದ್ದಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಇರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಶನಿವಾರವಾಗಿದ್ದ ಕಾರಣ ಮುಂಜಾನೆ ತಮ್ಮ ಪ್ರಯಾಣ ಆರಂಭಿಸಿರಬಹುದು ಎಂದು ಹೇಳಲಾಗಿದೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version