ಚಿಕ್ಕಮಗಳೂರು: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕನೊರ್ವ (Road Accident) ದಾರುಣವಾಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಒಕ್ಕಳ್ಳಿ ಬಳಿ ಘಟನೆ ನಡೆದಿದೆ. ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಸತೀಶ್ (28) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಣಕಲ್‌ನಿಂದ ಸಾರಗೋಡು ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ 50ಕ್ಕೂ ಹೆಚ್ಚು ಗೊಬ್ಬರದ ಚೀಲಗಳನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಇಳಿಜಾರಿನಲ್ಲಿ ಭಾರ ತಡೆಯಲು ಆಗದೆ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಪಲ್ಟಿಯಾದ ರಭಸಕ್ಕೆ ಟ್ರ್ಯಾಕ್ಟರ್ ಸಂಪೂರ್ಣ ಉಲ್ಟಾ ಹೊಡೆದಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತೀಶ್ ಟ್ರ್ಯಾಕ್ಟರ್‌ನಡಿ ಸಿಲುಕಿ ಮೃತಪಟ್ಟಿದ್ದಾನೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೀನುಗಾರಿಕಾ ಬೋಟ್‌ಗೆ ಟೂರಿಸ್ಟ್ ಬೋಟ್ ಡಿಕ್ಕಿ; ಪಾರಾದ ತಂದೆ-ಮಗ
ಮೀನುಗಾರಿಕಾ ಬೋಟ್‌ಗೆ ಟೂರಿಸ್ಟ್ ಬೋಟ್ ಡಿಕ್ಕಿಯಾಗಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ತಂದೆ- ಮಗ ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತನ್ಮಡಗಿಯ ಶರಾವತಿ ನದಿಯಲ್ಲಿ ಘಟನೆ ನಡೆದಿದೆ. ಮೀನುಗಾರಿಕಾ ಬೋಟ್‌ನಲ್ಲಿದ್ದ ಸಮರ್ಥ ಅಂಬಿಗ (16) ಎಂಬಾತ ಎಡಗೈಗೆ ಗಂಭೀರ ಗಾಯವಾಗಿದೆ.
ಸಮರ್ಥ ತನ್ನ ತಂದೆ ವಾಮನ ಅಂಬಿಗ ಜತೆ ಮೀನುಗಾರಿಕೆಗೆ ತೆರಳಿದ್ದ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟೂರಿಸ್ಟ್ ಬೋಟ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡ ಬಾಲಕನಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident : ಬೈಕ್ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಸವಾರ ಮೃತ್ಯು; ಕೆರೆಗೆ ಕಾರು ಹಾರಿಸಿ ಪ್ರಾಣಬಿಟ್ಟ ಚಾಲಕ
ಡಿಸೇಲ್ ಖಾಲಿ ಮಾರ್ಗ ಮಧ್ಯದಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್
ಕುಂದಾಪುರ- ಶಿವಮೊಗ್ಗ- ಬೆಂಗಳೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಹೊಸನಗರ ಘಾಟ್‌ನ ಮಾಸ್ತಿಕಟ್ಟೆ ಬಳಿ ಡಿಸೇಲ್ ಖಾಲಿ ಆಗಿ ಮಾರ್ಗ ಮಧ್ಯದಲ್ಲೇ ನಿಂತು ಹೋದ ಘಟನೆ ನಡೆದಿದೆ. ಡಿಸೇಲ್ ಖಾಲಿ ಆದ ಕಾರಣ ಮಾರ್ಗ ಮಧ್ಯದಲ್ಲೇ ಬಸ್ ನಿಲ್ಲಿಸಿದ ಬಸ್ ಚಾಲಕ, ಪ್ರಯಾಣಿಕರಿಂದ ಬಸ್ ತಳ್ಳಿಸಿದ್ದಾರೆ. ನಂತರ ಪುರುಷರಿಗೆ ಟಿಕೆಟ್‌ನ ಅರ್ಧ ಹಣ ಕೊಟ್ಟು ಖಾಸಗಿ ಬಸ್‌ನಲ್ಲಿ ಕಳುಹಿಸಿದ್ದಾರೆ. ಶಕ್ತಿ ಯೋಜನೆಯಲ್ಲಿ ಪ್ರಯಾಣ ಮಾಡಿದ ಮಹಿಳೆಯರಿಗೆ ತೊಂದರೆಯುಂಟಾಯ್ತು. ಇದರಿಂದಾಗಿ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಸ್ಥಳೀಯ ಜನರ ಸಹಾಯದಿಂದ ಬೇರೆ ಬಸ್‌ನಲ್ಲಿ ಪ್ರಯಾಣಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ