ಬೆಳಗಾವಿ/ಚಿಕ್ಕಮಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕರಡಿ ದಾಳಿಗೆ (Bear attack) ರೈತರೊಬ್ಬರು ಬಲಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಆನೆಗಳ ದಾಂಧಲೆ (Elephant attack) ಜೋರಾಗಿದೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳ ಸಮಸ್ಯೆಯಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಘೋಶೆ ಬುದ್ರುಕ ಗ್ರಾಮದಲ್ಲಿ ರೈತ ಭೀಕಾಜಿ ಮಿರಾಶಿ (63) ಎಂಬುವರು ಕರಡಿ ದಾಳಿಗೆ ಬಲಿಯಾಗಿದ್ದಾರೆ. ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ದಾಳಿ ಮಾಡಿದೆ. ದಾಳಿ ಮಾಡಿದ ಬಳಿಕ ಅವರನ್ನು ಎತ್ತಿಕೊಂಡು ಹೋಗಿರುವ ಕರಡಿ ಅವರ ಶವವನ್ನು ದಾಳಿ ಮಾಡಿದ ಜಾಗದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಬಿಟ್ಟು ಹೋಗಿದೆ.
ಹೊಲದಿಂದ ಸುಮಾರು ಎರಡು ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ. ಹೊಲದಲ್ಲಿ ಅವರ ಜತೆಗೆ ಬೇರೆಯವರೂ ಕೆಲಸ ಮಾಡುತ್ತಿದ್ದರು. ಆದರೆ, ಯಾವುದನ್ನೂ ಲೆಕ್ಕಿಸದೆ ಕರಡಿ ದಾಳಿ ಮಾಡಿದೆ. ಅದು ಮಿರಾಶಿ ಅವರನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಎಸೆದು ಹೋಗಿದೆ. ಈ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಾಣ ಕಳೆದುಕೊಂಡಿರುವ ರೈತನ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಗಜ ಪಡೆ ಎಂಟ್ರಿ!
ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದಕ್ಕೆ ಬೆಳಗ್ಗೆಯೇ ಆನೆಗಳು ಲಗ್ಗೆ ಇಟ್ಟಿವೆ. ಕಾಡಿನ ಅಂಚಿನ ಮೂಲಕ ರಸ್ತೆ ದಾಟಿ ಬಂದಿರುವ ಈ ಆನೆಗಳು ಸಿಕ್ಕಸಿಕ್ಕ ತೋಟಗಳನ್ನು ಧ್ವಂಸ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಆರೇಳು ಕಾಡಾನೆಗಳ ಗುಂಪು ರಸ್ತೆಯಲ್ಲಿ ಓಡಾಟ ಮಾಡುತ್ತಿದೆ. ಇದು ವಾಹನ ಸವಾರರು ಹಾಗೂ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾನುವಾರ ರಾತ್ರಿಯಿಂದಲೂ ಕಣತಿ ಸುತ್ತಮುತ್ತ ಬೀಡು ಬಿಟ್ಟಿರುವ ಕಾಡಾನೆಗಳು ಬೆಳಗ್ಗೆ ತೋಟಗಳಿಗೆ ನುಗ್ಗಿವೆ.
ಇದನ್ನೂ ಓದಿ: Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ
ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಇನ್ನೂ ಆಗಮಿಸದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಮತ್ತಷ್ಟು ಹೆಚ್ಚಳವಾಗುವ ಅಪಾಯ ಎದುರಾಗಿದೆ.