Site icon Vistara News

Shivananda Pateel : ರೈತರಿಗೆ ಅಪಮಾನ; ಸಚಿವ ಪಾಟೀಲ್‌ ವಿರುದ್ಧ ಬಿಜೆಪಿ ಆಕ್ರೋಶ; ಪದಚ್ಯುತಿಗೆ ಆಗ್ರಹ

BJP Karnataka leaders

ಚಿಕ್ಕಮಗಳೂರು: ರೈತರು ಬರಗಾಲ ಬರಲು ಕಾಯುತ್ತಾರೆ ಎಂಬರ್ಥದಲ್ಲಿ ಅನ್ನದಾತರಿಗೆ ಅಪಮಾನ ಆಗುವ ಹೇಳಿಕೆ ನIಡಿದ ಕೃಷಿ ಮಾರುಕಟ್ಟೆ (Agricultural Marketing Minister) ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ (Shivananda Pateel) ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ (BJP Karnataka) ವ್ಯಕ್ತಪಡಿಸಿದೆ. ಜತೆಗೆ ಇಂಥ ಸೂಕ್ಷ್ಮ ಸಂವೇದನೆ ಕಳೆದುಕೊಂಡಿರುವ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ಅವರನ್ನು ಕೂಡಲೇ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದೆ. ಶಿವಾನಂದ ಪಾಟೀಲ್‌ ಅವರ ಹಿಂದಿನ ಹೇಳಿಕೆಗಳು, ಅವರು ಹಣದ ರಾಶಿಯಲ್ಲಿ ಕುಣಿದದ್ದನ್ನು ನೆನಪಿಸಿಕೊಂಡಿದೆ.

ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದ ಆರ್‌. ಅಶೋಕ್‌

ʻʻಸಿದ್ದರಾಮಯ್ಯನವರ ಸರ್ಕಾರದ ಮಂತ್ರಿಯೊಬ್ಬರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ‌. ಬರಗಾಲ ಬಂದಿದೆ ಪರಿಹಾರ ಕೊಡಲಿ ಎಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಇಂಥ ಹೇಳಿಕೆಗಳಿಂದ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆʼʼ ಎಂದು ವಿರೋಧ ಪಕ್ಷದ ನಾಯಕಾಗಿರುವ ಆರ್‌. ಅಶೋಕ್‌ ಚಿಕ್ಕಮಗಳೂರಿನಲ್ಲಿ ಹೇಳಿದರು.

ʻʻಇದೇ ಶಿವನಂದ ಪಾಟೀಲ್‌ ಅವರು ಹಿಂದೆ ಜಾಸ್ತಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಪ್ರೇಮ ಪ್ರಕರಣಗಳನ್ನೂ ರೈತರ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಮೊದಲು ಒಂದು ಲಕ್ಷ ಪರಿಹಾರ ಇತ್ತು. ಈವಾಗ 5 ಲಕ್ಷ ರೂ. ಕೊಡ್ತಾರೆ. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರುʼʼ ಎಂದು ನೆನಪಿಸಿದರು.

ʻʻಶಿವಾನಂದ ಪಾಟೀಲರು ಹಿಂದೆ ರೈತರ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಾದರೂ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದ್ರೆ ರೈತರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲʼʼ ಎಂದು ಅವರು ಹೇಳಿದರು.

ರೈತರನ್ನು ಅಪಮಾನಿಸುವ ಸರ್ಕಾರ : ಸುನಿಲ್‌ ಕುಮಾರ್‌

ʻʻಸಹಜವಾಗಿ ಈ ಸರ್ಕಾರ ರೈತರ ಪರವಾದ ಸರ್ಕಾರವಲ್ಲ. ಬರಗಾಲಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ರೈತರನ್ನ ಅಪಮಾನ ಮಾಡುವಂತ ಕೆಲಸ ಮಾಡುತ್ತಲೇ ಬರುತ್ತಿದೆ. ಬರಗಾಲ ಘೋಷಣೆಯಾದ ನಂತರ ರೈತರ ಖಾತೆಗೆ ಒಂದು ರೂಪಾಯಿ ಹಣವನ್ನು ಹಾಕಿಲ್ಲ. ಒಬ್ಬ ಜವಾಬ್ದಾರಿಯುತ ಸಚಿವರು ಬರಗಾಲ ಬರುವುದೇ ರೈತರ ಪರಿಹಾರ ಕೇಳುವುದಕ್ಕೆ ಎಂದಿದ್ದಾರೆ. ರೈತರ ಬಗೆಗಿನ ಅಸಂಬದ್ಧ ಹೇಳಿಕೆಯನ್ನು ನಾವು ಖಂಡಿಸುತ್ತೇವೆʼʼ ಎಂದು ಬಿಜೆಪಿಯ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಹೇಳಿದರು.

ಸರ್ಕಾರದ ಅಹಂಕಾರಕ್ಕೆ ಇದು ಉದಾಹರಣೆ ಎಂದ ಸಿ.ಟಿ. ರವಿ

ʻʻಶಿವಾನಂದ ಪಾಟೀಲರು ಹಿರಿಯರು, ಸರ್ಕಾರದಲ್ಲಿ ಬಹಳ ವರ್ಷ ಕೆಲಸ ಮಾಡಿದ ಅನುಭವಿ ಮಂತ್ರಿ. ಅವರ ಬಾಯಲ್ಲಿ ಬರುವ ಇಂತಹಾ ಮಾತು ಸಹನೀಯವಲ್ಲ. ಶಿವಾನಂದ ಪಾಟೀಲರು ಈ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಹಣ ತೂರಿದ್ದನ್ನು ನಾವು ನೋಡಿದ್ದೇವೆ. ಇಂಥವರು ರೈತರು ಬರ ಬರಲಿ ಎಂದು ಕಾಯುತ್ತಾರೆ ಎಂದು ಹೇಳಿರುವುದು ರೈತರಿಗೆ ಮಾಡಿರುವ ಅಪಮಾನ. ಇದು ಸರ್ಕಾರದ ಅಹಂಕಾರಕ್ಕೆ ಉದಾಹರಣೆʼʼ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದರು.

ʻʻಪಿತ್ತ ನೆತ್ತಿಗೇರಿ ಅಹಂಕಾರದಿಂದ ಸ್ಥಿತಪ್ರಜ್ಞೆ ಕಳೆದುಕೊಂಡವರು ಆಡುವ ಮಾತು ಇದು. ಒಂದು ಕ್ಷಣಕ್ಕೂ ಅವರು ಸಚಿವರಾಗಿ ಇರಲು ಯೋಗ್ಯರಲ್ಲ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಖ್ಯಮಂತ್ರಿಗಳೇ ಒಂದೋ ನೀವೇ ಅವರ ಮದ ಇಳಿಸಿ, ಇಲ್ಲವೇ ಜನರೇ ನಿಮ್ಮ ಸರ್ಕಾರದ ಮದ ಇಳಿಸುತ್ತಾರೆʼʼ ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದರು.

ʻʻರೈತ ಮಳೆಗಾಗಿ ಕಾಯುತ್ತಾನೆ, ಇವರ ಭಿಕ್ಷೆಗೆ ಕಾಯುವುದಿಲ್ಲ. ಒಂದು ಬೆಳೆ ಬೆಳೆಸಲು ಬದುಕನ್ನು ತಪಸ್ಸಿನ ರೀತಿಯಲ್ಲಿ ಮಾಡುತ್ತಾನೆ. ರಕ್ತವನ್ನು ಬೆವರಿನಂತೆ ಹರಿಸುತ್ತಾನೆ. ಅಂತಹಾ ರೈತರಿಗೆ ಅಪಮಾನ ಮಾಡಿದ್ದನ್ನು ಸಹಿಸಲಾಗದು. ಇಂಥವರು ಸಚಿವ ಸ್ಥಾನದಲ್ಲಿ ಇರಲು ಅರ್ಹರಲ್ಲ. ಅವರನ್ನು ಕಿತ್ತು ಹಾಕಬೇಕುʼʼ ಎಂದು ಒತ್ತಾಯಿಸಿದರು.

Exit mobile version