ಚಿಕ್ಕಮಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ಅಕ್ರಮ ಕೂಟದ ಮಾಸ್ಟರ್ ಮೈಂಡ್, ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರುನ (Gagan Kadur) ಮನೆ ಸೇರಿದಂತೆ ಹಲವು ಕಡೆ ಮಂಗಳವಾರ ಮಹಜರು (police inquest) ನಡೆಸಲಾಯಿತು.
ಸಿಬಿಸಿ ಬಂಧನದಲ್ಲಿರುವ ಗಗನ್ ಕಡೂರ್‌ನನ್ನು ಪೊಲೀಸರು ಚಿಕ್ಕಮಗಳೂರು, ಕಡೂರು ಮತ್ತು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಿದರು. ಈ ಪ್ರಕರಣದಲ್ಲಿ ಗೋವಿಂದ ಪೂಜಾರಿಯಿಂದ 3.5 ಕೋಟಿ ರೂ. ಸುಲಿಗೆ ಮಾಡುವ ಒಟ್ಟಾರೆ ನಾಟಕದ ಪ್ರಧಾನ ಸೂತ್ರಧಾರಿ ಕಡೂರು. ಕಡೂರಿನ ಆತನ ಮನೆಯಲ್ಲೇ ಎಲ್ಲ ರೀತಿಯ ಪ್ಲ್ಯಾನಿಂಗ್‌ಗಳು ನಡೆದಿದ್ದು. ಹೀಗಾಗಿ ಕಡೂರ್ ಈ ಪ್ರಕರಣದಲ್ಲಿ ಅತಿ ದೊಡ್ಡ ಪಾತ್ರವನ್ನು ವಹಿಸುತ್ತಾನೆ ಎಂಬ ನೆಲೆಯಲ್ಲಿ ಮಹಜರಿಗೆ ಪ್ರಾಮುಖ್ಯತೆ ಬಂದಿದೆ. ಈ ಮಹಜರಿನ ಸಂದರ್ಭದಲ್ಲಿ ವಂಚನೆಗೊಳಗಾದ ದೂರುದಾರ ಗೋವಿಂದ ಪೂಜಾರಿಯನ್ನು ಕೂಡಾ ಕರೆದೊಯ್ಯಲಾಗಿದೆ.
ಚಿಕ್ಕಮಗಳೂರಿನ ಕಡೂರಿನ ಮನೆಯಲ್ಲಿ ಮಹಜರು
ಕಡೂರಿನ ಹೊಸಳ್ಳಿಯಲ್ಲಿರುವ ಗಗನ್ ಕಡೂರು ಮನೆ ಎಲ್ಲ ಕಾರಸ್ಥಾನಗಳ ಕೇಂದ್ರವಾಗಿ ಕೆಲಸ ಮಾಡಿದೆ. ಗೋವಿಂದ ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವುದು ಹೇಗೆ ಎಂಬುದರಿಂದ ಹಿಡಿದು, ಗೋವಿಂದ ಪೂಜಾರಿ ಜತೆ ಮಾತುಕತೆ ನಡೆದಿದ್ದೂ ಇಲ್ಲೇ. ವಿಶ್ವನಾಥ್‌ಜಿ ಎಂಬ ಆರೆಸ್ಸೆಸ್ ಪ್ರಚಾರಕರ ಪಾತ್ರ ಸೃಷ್ಟಿಯಾಗಿದ್ದು ಕೂಡಾ ಇಲ್ಲೆ.
ಆವತ್ತು ವಿಶ್ವನಾಥ್ ಜಿ ಎಂಬ ಪಾತ್ರ ಸೃಷ್ಟಿಗೆ ಸಂಬಂಧಿಸಿ ಧನರಾಜ್ ಮತ್ತು ರಮೇಶ್ ಜತೆ ಗಗನ್ ಮಾತುಕತೆ ನಡೆಸಿದ್ದ. ವಿಶ್ವನಾಥ್‌ಜಿ ಎಂಬ ಪ್ರಚಾರಕ ಹೇಗಿರುತ್ತಾರೆ, ಅವರ ನಡವಳಿಕೆ ಹೇಗೆ ಎಂಬುದರ ಪ್ರಾತ್ಯಕ್ಷಿಕೆಯನ್ನು ರಮೇಶ್ ಮುಂದೆ ನೀಡಿದ್ದು ಇಲ್ಲೇ.
ಅದರ ಜತೆಗೆ ಬೆಂಗಳೂರಿನಲ್ಲಿ ಬಿಜೆಪಿಯ ಹಿರಿಯ ನಾಯಕ ʻನಾಯಕ್ʼ ಎಂಬ ಪಾತ್ರ ವಹಿಸಲು ಚನ್ನಾನಾಯಕ್ ಎಂಬಾತನನ್ನು ಕರೆಸಿಕೊಂಡಿದ್ದು ಇದೇ ಮನೆಗೆ.
ಹೀಗಾಗಿ ಈ ಮನೆ ಎಲ್ಲ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದು ಅದರ ಮಹಜರು ನಡೆದಿದೆ. ಗಗನ್ ಮತ್ತು ಗೋವಿಂದ ಪೂಜಾರಿಯನ್ನು ಈ ಮನೆಗೆ ಕರೆದುಕೊಂಡು ಬಂದ ತಂಡ ಮನೆಯವರ ಸಮ್ಮುಖದಲ್ಲೇ ವಿಚಾರಣೆಗೆ ಒಳಪಡಿಸಿತು. ಮನೆಯವರಿಂದಲೂ ಸಾಕಷ್ಟು ಮಾಹಿತಿಯನ್ನು ಪಡೆಯಿತು. ಕಡೂರಿನ ಕೆ.ಎಂ. ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲೂ ಮಹಜರು ಮಾಡಲಾಯಿತು.
ಇದೇ ವೇಳೆ, ನಗರದ ದೊಡ್ಡಪೇಟೆಯಲ್ಲಿರುವ ಕಟಿಂಗ್ ಶಾಪ್‌ನಲ್ಲೂ ಪರಿಶೀಲನೆ ನಡೆಸಲಾಯಿತು. ರಮೇಶ್ ಎಂಬಾತನಿಗೆ ವಿಶ್ವನಾಥ್‌ಜಿ ರೂಪ ಕೊಟ್ಟಿದ್ದು ಇದೇ ಜಾಗದಲ್ಲಿ.
ಅದಕ್ಕಿಂತ ಮೊದಲು ಚಿಕ್ಕಮಗಳೂರಿನ ಐಬಿಯಲ್ಲಿ ಮಹಜರು ಮಾಡಲಾಯಿತು. ಇದೇ ಅತಿಥಿಗೃಹದಲ್ಲಿ ಗಗನ್ ಮತ್ತು ಚೈತ್ರಾ ವಿಶ್ವನಾಥ್‌ಜೀ ಪಾತ್ರಧಾರಿಯನ್ನು ಗೋವಿಂದ ಪೂಜಾರಿಯವರಿಗೆ ಪರಿಚಯ ಮಾಡಿಸಿದ್ದರು.
ಚಿಕ್ಕಮಗಳೂರು, ಕಡೂರಿನಲ್ಲಿ ಮಹಜರು ನಡೆಯುವುದನ್ನು, ಇವರ ಓಡಾಟವನ್ನು ನೂರಾರು ಜನರು ನಿಂತು ವೀಕ್ಷಿಸಿದರು.
ಕಡೂರಿನ ಬಳಿಕ ಗಗನ್‌ನನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ಎನ್.ಟಿ.ರಸ್ತೆ 1ನೇ ಕ್ರಾಸ್ ನಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು ಬಳಿಕ ಬೆಂಗಳೂರಿಗೆ ಕರೆದೊಯ್ದರು. ಇಲ್ಲಿ ಗೋವಿಂದ ಪೂಜಾರಿಯ ಹುಡುಗರು ಚೈತ್ರಾ ಟೀಮಿಗೆ 50 ಲಕ್ಷ ರೂ. ಹಸ್ತಾಂತರ ಮಾಡಿದ್ದರು.