Site icon Vistara News

Chaitra Kundapura : ನಕಲಿ ಆರೆಸ್ಸೆಸ್‌ ಪ್ರಚಾರಕನ ಬಣ್ಣ ಬಯಲು ಮಾಡಿದ ಹಿಂದು ಕಾರ್ಯಕರ್ತ ತುಡುಕೂರು ಮಂಜುಗೆ ನೋಟಿಸ್‌

tudukooru Manju in Chaitra Case

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಟೀಮ್‌ ಮಾಡಿದ್ದ ಐದು ಕೋಟಿ ರೂಪಾಯಿ ವಂಚನೆಯನ್ನು (Five crore rupees Fraud) ಬಯಲಿಗೆಳೆಯುವಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Poojari) ಅವರಿಗೆ ಸಹಾಯ ಮಾಡಿದ್ದ ಚಿಕ್ಕಮಗಳೂರಿನ ಕಡೂರಿನ ತುಡುಕೂರು ಮಂಜು (Tudukooru Manju) ಅವರಿಗೆ ಸಿಸಿಬಿ ನೋಟಿಸ್‌ (CCB Notice) ಜಾರಿ ಮಾಡಿದೆ.‌

ತುಡುಕೂರು ಮಂಜು ಅವರು ಹಿಂದು ಸಂಘಟನೆ ಕಾರ್ಯಕರ್ತರಾಗಿದ್ದು, ಗೋವಿಂದ ಪೂಜಾರಿಗೆ ಗಗನ್‌ ಕಡೂರು ಹಿನ್ನೆಲೆ ಮತ್ತು ಇತರ ಹಲವು ವಿಚಾರಗಳನ್ನು ತಿಳಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಕಡೂರಿನ ಸೆಲೂನಿನಲ್ಲಿ (Saloon in Kaduru) ರಮೇಶ್‌ ಎಂಬಾತನನ್ನು ಬಳಸಿಕೊಂಡು ನಕಲಿ ಆರೆಸ್ಸೆಸ್‌ ಪ್ರಚಾರಕನನ್ನು (RSS Pracharak) ಸೃಷ್ಟಿಸಿದ ಕುತಂತ್ರವನ್ನು ಬಯಲಿಗೆಳೆದದ್ದು ಇದೇ ಮಂಜು. ಇದೀಗ ತುಡುಕೂರು ಮಂಜು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.

ಗೋವಿಂದ ಬಾಬು ಪೂಜಾರಿ ಅವರು ಮೊದಲು ಚೈತ್ರಾ ಕುಂದಾಪುರ ಅವರನ್ನು ಭೇಟಿ ಮಾಡಿ ಟಿಕೆಟ್‌ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದರು. ಬಳಿಕ ಅವರ ಸಲಹೆಯಂತೆ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಬಿಜೆಪಿ ಟಿಕೆಟ್‌ಗಾಗಿ 1.5 ಕೋಟಿ ರೂ.ಗಳ ಡೀಲ್‌ ಮಾಡಿದ್ದರು.

ಇದಾದ ಬಳಿಕ ಚೈತ್ರಾ ಕುಂದಾಪುರ ಅವರು ಒಬ್ಬ ಆರೆಸ್ಸೆಸ್‌ ಪ್ರಚಾರಕರನ್ನು ಗೋವಿಂದ ಪೂಜಾರಿ ಅವರಿಗೆ ಚಿಕ್ಕಮಗಳೂರಿನ ಅತಿಥಿ ಗೃಹದಲ್ಲಿ ಭೇಟಿ ಮಾಡಿಸಿದ್ದರು. ಅವರ ಹೆಸರಿನಲ್ಲಿ ಒಟ್ಟಾರೆಯಾಗಿ 3.5 ಕೋಟಿ ರೂ. ಸಂದಾಯವಾಗಿತ್ತು. ಈ ನಡುವೆ, ಗೋವಿಂದ ಪೂಜಾರಿ ಅವರಿಗೆ ಟಿಕೆಟ್‌ ಸಿಗಲಿಲ್ಲ. ಅದಷ್ಟೇ ಅಲ್ಲ, ಆರೆಸ್ಸೆಸ್‌ ಪ್ರಚಾರಕರು ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನು ಗೋವಿಂದ ಪೂಜಾರಿಗೆ ನೀಡಲಾಗುತ್ತದೆ. ಆಗ ಅವರು ಅವರು ತನಿಖೆಗೆ ಇಳಿಯುತ್ತಾರೆ.

ಚೈತ್ರಾ ಕುಂದಾಪುರ ಅವರು ಆರೆಸ್ಸೆಸ್‌ ಪ್ರಚಾರಕರು ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದರಿಂದ ತಮ್ಮ ಸಂಪರ್ಕ ಬಳಸಿ ಅಲ್ಲಿ ಜಾಲಾಡುತ್ತಾರೆ. ಅಲ್ಲಿನ ಸೇನಾಧಿಕಾರಿಯೊಬ್ಬರು ಅಂಥ ವ್ಯಕ್ತಿಯೇ ಆರೆಸ್ಸೆಸ್‌ನಲ್ಲಿ ಇಲ್ಲ ಎಂದಿದ್ದರು. ಇದರಿಂದ ಮೊದಲ ಬಾರಿಗೆ ಗೋವಿಂದ ಪೂಜಾರಿಗೆ ತಾನು ಮೋಸ ಹೋಗಿದ್ದು ಗೊತ್ತಾಗುತ್ತದೆ.

ಅವರು ಆರೆಸ್ಸೆಸ್‌ ಪ್ರಚಾರದ ಕಡೂರು ಮೂಲವನ್ನು ಪತ್ತೆ ಹಚ್ಚಬೇಕು ಎಂಬ ಉದ್ದೇಶದಿಂದ ಕರೆ ಮಾಡುವುದೇ ತುಡುಕೂರು ಮಂಜು ಅವರಿಗೆ. ಹಿಂದಿನ ಪರಿಚಯವಿದ್ದ ತುಡುಕೂರು ಮಂಜು ನೋಡಿ ಹೇಳುತ್ತೇನೆ ಎಂದು ಹೇಳುತ್ತಾರೆ. ಒಂದೆರಡು ದಿನದ ಬಳಿಕ ಸೆಲೂನ್‌ನಲ್ಲಿ ಆರೆಸ್ಸೆಸ್‌ ಪ್ರಚಾರಕರ ವೇಷ ಹಾಕಿಸಿದ ಕಥೆ ನೆನಪಾಗಿ ಗೋವಿಂದ ಪೂಜಾರಿಗೆ ಅವರಿಗೆ ತಿಳಿಸುತ್ತಾರೆ.

ಬಳಿಕ ಗೋವಿಂದ ಪೂಜಾರಿ ಅವರು ಕಡೂರಿಗೆ ಬಂದು ಈ ನಕಲಿ ಆರೆಸ್ಸೆಸ್‌ ಪ್ರಚಾರಕನ ಪಾತ್ರ ಮಾಡಿದ ರಮೇಶ್‌ ಮತ್ತು ಬೆಂಬಲ ನೀಡಿದ ಧನರಾಜ್‌ನನ್ನು ಭೇಟಿ ಮಾಡಿಸುತ್ತಾರೆ. ಆಗ ಎಲ್ಲ ವಿಚಾರಗಳೂ ಸ್ಪಷ್ಟವಾಗುತ್ತವೆ. ಹೀಗೆ ಮಂಜು ನೀಡಿದ ಬೆಂಬಲದಿಂದ ಈ ಪ್ರಕರಣ ಈ ಮಟ್ಟಕ್ಕೆ ತಲುಪಿದೆ.

ಈಗ ಮಂಜು ಬಳಿ ಇನ್ನಷ್ಟು ಮಾಹಿತಿಗಳಿರಬಹುದೇ ಎಂದು ತಿಳಿಯುವುದಕ್ಕಾಗಿ ಸಿಸಿಬಿ ನೋಟಿಸ್‌ ನೀಡಿದೆ.

ಇದನ್ನೂ ಓದಿ: Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ಸಿಸಿಬಿಗೆ ಬಂದ ಪ್ರಣವ್‌ ಪ್ರಸಾದ್‌, ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ಗೆ ನೋಟಿಸ್‌

ಈ ನಡುವೆ, ಬುಧವಾರ ಹಿರೇಹಡಗಲಿ ಮಠದಲ್ಲಿ 56 ಲಕ್ಷ ರೂ. ಇಟ್ಟುಬಂದಿದ್ದ ಮೈಸೂರಿನ ವಕೀಲ ಪ್ರಣವ್‌ ಪ್ರಸಾದ್‌ ಅವರು ಗುರುವಾರ ಸಿಸಿಬಿ ಕಚೇರಿಗೆ ಬಂದಿದ್ದಾರೆ. ಪ್ರಣವ್‌ ಅವರು ಹಣ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರ ಸತ್ಯಾಸತ್ಯತೆಯನ್ನು ಅರಿಯಲು ಈಗ ಕರೆಸಿಕೊಳ್ಳಲಾಗಿದೆ.

ಇದೇ ವೇಳೆ, ಈ ಹಿಂದೆ ಚೈತ್ರಾ ಕುಂದಾಪುರ ಕೇಸ್ ಬಗ್ಗೆ ಪ್ರೆಸ್ ಮೀಟ್ ಮಾಡಿದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗೆ ಸಿಸಿಬಿ ನೋಟಿಸ್‌ ನೋಡಿದೆ. ಲಕ್ಷ್ಮಣ್‌ ಅವರು ಕೇಸ್ ನಲ್ಲಿ ಇದುವರೆಗೆ ಇಲ್ಲದ ಹೆಚ್ಚಿನ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಬೇರೆ ಬೇರೆ ವ್ಯಕ್ತಿಗಳ ಹೆಸರುಗಳನ್ನು ಪ್ರಸ್ತಾಪ ಮಾಡಿದ್ದರು. ಹೀಗಾಗಿ ಪ್ರಕರಣ ಬಗ್ಗೆ ಮಾಹಿತಿ ನೀಡುವಂತೆ ಅವರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

Exit mobile version