Site icon Vistara News

Charmadi Ghat : ಚಾರ್ಮಾಡಿ ಘಾಟಿಯಲ್ಲಿ ಮಂಜು; ದಾರಿ ಕಾಣದೆ 120 ಅಡಿ ಪ್ರಪಾತಕ್ಕೆ ಉರುಳಿದ ಲಾರಿ, ಪ್ರಾಣ ರಕ್ಷಿಸಿದ ಮರ!

Charmadi Ghat accident

ಚಿಕ್ಕಮಗಳೂರು: ಅತ್ಯಂತ ಕಡಿದಾದ ತಿರುವುಗಳನ್ನು ಹೊಂದಿರುವ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಈಗ ಮಳೆ ಮತ್ತು ಮಂಜಿನಾಟ (Rain and dew) ಜೋರಾಗಿದೆ. ಹೀಗಾಗಿ ದಾರಿ ಕಾಣದೆ ಹಲವಾರು ಅಪಘಾತಗಳು (Accident at Charmadi Ghat) ನಡೆಯುತ್ತಿವೆ. ಇವುಗಳ ಪೈಕಿ ಕೆಲವೊಂದು ಅತ್ಯಂತ ಭಯಾನಕವಾಗಿರುತ್ತದೆ. ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಶನಿವಾರ ಬೆಳಗ್ಗೆ ಲಾರಿಯೊಂದು 120 ಆಳದ ಪ್ರಪಾತಕ್ಕೆ ಉರುಳಿದೆ (Lorry jumps into 120 feet gorge in Charmadi Ghat).

ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿ ಸಾಗಿಸುತ್ತಿದ್ದ ಲಾರಿಯೊಂದು ಸೋಮನಕಾಡು ಪ್ರದೇಶದಲ್ಲಿ ಬಂದಾಗ ದಾರಿ ಕಾಣದೆ ತಡೆಗೋಡೆಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ಕಳೆದುಕೊಂಡು ಆಳ ಕಮರಿಗೆ ಉರುಳಿದೆ.

ಲಾರಿಯಲ್ಲಿದ್ದವರ ರಕ್ಷಣೆಗೆ ಮಾಡುತ್ತಿರುವುದು.

ಲಾರಿ ತಡೆಗೋಡೆಯನ್ನು ದಾಟಿದ ಬಳಿಕ ಕೆಳಗೆ ಇರುವುದು ಮಹಾಪ್ರಪಾತ. ಸುಮಾರು 500 ಅಡಿಗಿಂತಲೂ ಹೆಚ್ಚು ಆಳದ ಕಮರಿ. ಲಾರಿ ರಸ್ತೆ ಬಿಟ್ಟು ತಡೆಗೋಡೆಯನ್ನು ದಾಟಿ ಇಳಿಜಾರಿನಲ್ಲಿ ಜಾರಿ ಹೋಗಿತ್ತು. ಇನ್ನೇನು ದೊಡ್ಡ ಕಂದರಕ್ಕೆ ಬೀಳುತ್ತಿದ್ದಂತೆಯೇ ಅಲ್ಲೊಂದು ರಕ್ಷಣೆ ಸಿಕ್ಕಿತ್ತು. ಅದುವೇ ಒಂದು ದೊಡ್ಡ ಮರ.

ಜಾರಿಕೊಂಡು ಹೋಗುತ್ತಿದ್ದ ಲಾರಿಯನ್ನು ಒಂದು ದೊಡ್ಡ ಮರ ತಡೆದು ನಿಲ್ಲಿಸಿದೆ. ಈ ಕಾರಣದಿಂದಾಗಿ ಲಾರಿ ಕಣ್ಣಿಗೆ ಕಾಣದಷ್ಟು ಆಳದ ಕಮರಿಗೆ ಬೀಳುವುದರಿಂದ ಸ್ವಲ್ಪದರಲ್ಲಿ ಬಚಾವಾಗಿದೆ. ಹಾಗಂತ ಇದೇನೂ ಕಡಿಮೆ ಆಳವಲ್ಲ. ಅಲ್ಲಿಂದ ಮೇಲೆ ಬರುವುದು, ಲಾರಿಯನ್ನು ಮೇಲೆ ತರುವುದು ಭಾರಿ ಸಾಹಸದ ಕೆಲಸವೇ ಸರಿ.

Accident at Charmadi ghat

ಲಾರಿಯೊಂದು ಹೀಗೆ ಬಿದ್ದಿರುವುದನ್ನು ಗಮನಿಸಿದ ಆ ಮಾರ್ಗದಲ್ಲಿ ಸಾಗುವ ವಾಹನಿಗರು ಕೂಡಲೇ ಸ್ಥಳೀಯ ರಕ್ಷಕರ ಗಮನಕ್ಕೆ ತಂದರು. ಅವರು ಬಂದು ದೊಡ್ಡ ಹಗ್ಗಗಳ ಮೂಲಕ ಅಪಾಯಕಾರಿಯಾದ ಲಾರಿ ಬಿದ್ದ ಜಾಗವನ್ನು ತಲುಪಿದ್ದಾರೆ.

ಲಾರಿಯಲ್ಲಿ ಚಾಲಕ ಮತ್ತು ಕ್ಲೀನರ್‌ ಇದ್ದು, ಅವರು ಅಪಘಾತ ಮತ್ತು ಆಘಾತಗಳಿಂದ ಚೇತರಿಸಿಕೊಳ್ಳಲಾಗದೆ, ಏನೂ ಮಾಡಲಾಗದೆ ಕಂಗಾಲಾಗಿ ಕುಳಿತಿದ್ದರು. ಅವರನ್ನು ರಕ್ಷಕರ ತಂಡ ಹಗ್ಗದ ಸಹಾಯದಿಂದ ಮೇಲಕ್ಕೆ ತಂದು ಆಸ್ಪತ್ರೆಗೆ ಸೇರಿಸಿದೆ.

Accident at Charmadi ghat

ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮನ್ನು ರಕ್ಷಿಸಿದ ಮರ ಮತ್ತು ಹಗ್ಗದ ಮೂಲಕ ಮೇಲೆ ಬರಲು ಸಹಾಯ ಮಾಡಿದ ರಕ್ಷಕರಿಗೆ ಕೃತಜ್ಞತೆ ಹೇಳಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಗೆ ಈ ಪ್ರದೇಶ ಬರುತ್ತದೆ.

ಇದನ್ನೂ ಓದಿ: Road Accident : ಚಾರ್ಮಾಡಿಯಲ್ಲಿ ಆವರಿಸಿದ ದಟ್ಟ ಮಂಜು; ಕಾಣಿಸದೆ ಗುದ್ದಿಕೊಂಡ ಸರ್ಕಾರಿ ಬಸ್‌ಗಳು!

ಘಾಟಿ ರಸ್ತೆಯಲ್ಲಿ ಹುಷಾರಾಗಿರಿ

ಈಗ ಸ್ವಲ್ಪ ಮಳೆ ಮತ್ತು ದಟ್ಟ ಮಂಜು ಬೀಳುವ ಸಮಯ. ಕೆಲವೊಮ್ಮೆ ಈ ಮಂಜು ತಕ್ಷಣವೇ ಮಾಯವಾಗುತ್ತದೆ. ಕೆಲವೊಮ್ಮೆ ತುಂಬಾ ಹೊತ್ತು ಇರುತ್ತದೆ. ಈ ಸಂದರ್ಭದಲ್ಲಿ ವಾಹನ ಚಲಾಯಿಸುವುದು ಭಾರಿ ಕಷ್ಟ. ಯಾಕೆಂದರೆ, ವಾಹನದಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ಏನಿದೆ, ವಾಹನವಿದೆಯೆ? ರಸ್ತೆಯೋ, ಪ್ರಪಾತವೋ ಎಂದು ಗೊತ್ತಾಗುವುದಿಲ್ಲ. ಈ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕಾಗುತ್ತದೆ. ವಾಹನಗಳಲ್ಲಿ ಹಳದಿ ಲೈಟ್‌ ಇದ್ದರೆ ಅದು ಮಂಜನ್ನು ಬೇಧಿಸಿಕೊಂಡು ಸ್ವಲ್ಪ ದೂರದವರೆಗೆ ದಾರಿ ತೋರಿಸುತ್ತದೆ.

ಹೀಗೆ ಮಳೆಯಂತೆ ಮಂಜು ಸುರಿಯುವಾಗ ರಸ್ತೆಯೂ ಜಾರುತ್ತದೆ. ಹೀಗಾಗಿ ಇನ್ನಷ್ಟು ಎಚ್ಚರ ಬೇಕಾಗುತ್ತದೆ. ಈ ಮಾರ್ಗಗಳಲ್ಲಿ ಅತ್ಯಂತ ನಿಧಾನವಾಗಿ ಸಾಗುವುದು ಮತ್ತು ವಿಪರೀತ ಮಂಜು ಇರುವಾಗ ವಾಹನವನ್ನು ಸೈಡಿಗೆ ಹಾಕುವುದು ಸ್ವಲ್ಪ ಮಟ್ಟಿಗಾದರೂ ಸೇಫ್‌ ಅನಿಸುತ್ತದೆ.

Exit mobile version