Site icon Vistara News

Datta Jayanti : ದತ್ತಪೀಠದ ಅರ್ಚಕರು, ಮುಜಾವರ್‌ ಸಹಿತ ಐವರಿಗೆ ಗನ್‌ ಮ್ಯಾನ್‌ ಸೆಕ್ಯುರಿಟಿ

Gunman security to five people related to datta peeta

ಚಿಕ್ಕಮಗಳೂರು: ಕಾಫಿನಾಡಿನ ವಿವಾದಿತ ಬಾಬಾ ಬುಡನ್‌ ಗಿರಿಯ (Bababudan giri hills) ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Dattatreya bababudan swami dargah) ಡಿಸೆಂಬರ್‌ 17ರಿಂದ ಆರಂಭಗೊಂಡಿರುವ ದತ್ತ ಜಯಂತಿ (Datta Jayanti) ಡಿಸೆಂಬರ್‌ 26ರವರೆಗೆ ನಡೆಯಲಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಅತ್ಯಂತ ಕಟ್ಟೆಚ್ಚರದಿಂದ ದತ್ತ ಜಯಂತಿ ಆಚರಣೆಗೆ ಪ್ಲ್ಯಾನ್‌ ಮಾಡಿಕೊಂಡಿದ್ದು, ಇದರ ಭಾಗವಾಗಿ ಮುಂಜಾಗ್ರತಾ ಕ್ರಮವಾಗಿ ಅರ್ಚಕರು, ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್‌ ಇಲಾಖೆ ಈಗಿನಿಂದಲೇ ಗನ್ ಮ್ಯಾನ್ (Gun Mans appointed for five people) ನೇಮಕ ಮಾಡಿದೆ.

ದತ್ತಪೀಠದಲ್ಲಿ ಈ ಬಾರಿ ಹೋಮ ನಡೆಸಲು ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಮರು ತಮಗೆ ನಮಾಜ್‌ ಮಾಡಲು ಅವಕಾಶ ಕೊಡಿ ಎಂದು ಕೂಡಾ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಲ್ಪ‌ ತಿಕ್ಕಾಟ ಈ ಬಾರಿ ನಡೆಯುವ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಡಿಸೆಂಬರ್‌ 17ರಂದು ಚಿಕ್ಕಮಗಳೂರಿನ ಮಾಜಿ ಶಾಸಕ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಬೆಂಬಲಿಗರ ಜತೆ ದತ್ತ ಮಾಲೆ ಧಾರಣೆ ಮಾಡಿದ್ದಾರೆ. ಜಿಲ್ಲೆಯಾದ್ಯಂತ 5000ಕ್ಕೂ ಹೆಚ್ಚು ಮಂದಿ ಮಾಲಾ ಧಾರಣೆ ಮಾಡುವ ಸಾಧ್ಯತೆ ಇದೆ. ಅತ್ತ ಈಗ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್‌ನ ನಾಯಕ ಮಾಜಿ ಮುಖ್ಯಮಂ‌ತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ತಾನು ದತ್ತ ಮಾಲೆ ಹಾಕಲು ಸಿದ್ಧ ಎಂದು ಘೋಷಿಸಿದ್ದಾರೆ.

Datta peeta

ಈ ಎಲ್ಲ ಕಾರಣಗಳಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಬಿಗಿಬಂದೋಬಸ್ತ್‌ ಏರ್ಪಡಿಸಿದೆ. ಚಿಕ್ಕಮಗಳೂರು ಪ್ರವಾಸ ಮುಂದೂಡಿ ಎಂದು ಪ್ರವಾಸಿಗರಿಗೆ ಸೂಚನೆ ನೀಡಿದೆ. ಇದರ ಮುಂದಿನ ಭಾಗವಾಗಿ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದೇವಸ್ಥಾನ/ ದರ್ಗಾದ ನಿತ್ಯ ಕಾಯಕ ಮಾಡುವವರಿಗೆ ಭದ್ರತೆ ನೀಡಲಾಗಿದೆ.

ಇಬ್ಬರು ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಮ್, ವ್ಯವಸ್ಥಾಪನ ಸಮಿತಿಯ ಮುಸ್ಲಿಂ ಸದಸ್ಯ ಎಸ್‌.ಎಂ ಬಾಷಾ, ಇಬ್ಬರು ಮುಜಾವರ್‌ಗಳಾದ ಸೈಯದ್ ಅಖಿಲ್ ಪಾಷ ಹಾಗೂ ಇಸ್ಮಾಯಿಲ್‌ ಅವರಿಗೆ ಗನ್ ಮ್ಯಾನ್‌ ಭದ್ರತೆ ನೀಡಲಾಗಿದೆ. 15 ದಿನಗಳ ಕಾಲ ಐವರ ಭದ್ರತೆಗಾಗಿ ಅಂಗರಕ್ಷಕರ ನೇಮಕ ಮಾಡಲಾಗಿದೆ.

ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರು ಈ ಆದೇಶ ನೀಡಿದ್ದು, ಮುಂದಿನ ಹದಿನೈದು ದಿನಗಳ ಕಾಲ ದಿನದ 24 ಗಂಟೆಗಳ ಕಾಲ‌ವೂ ಐವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ.

#image_title

ಹೋಮ ನಡೆಸುವುದಕ್ಕೆ ಕಾಂಗ್ರೆಸ್ ಆಕ್ಷೇಪ

ದತ್ತ ಜಯಂತಿ ಸಂದರ್ಭದಲ್ಲಿ ಈ ಬಾರಿಯೂ ಹೋಮ ನಡೆಸಲು ಅವಕಾಶ ನೀಡಿರುವುದನು ಕಾಂಗ್ರೆಸ್‌ ಆಕ್ಷೇಪಿಸಿದೆ. ಇದು ರಾಜಕೀಯ ಪ್ರೇರಿತ ಉತ್ಸವ. ದತ್ತಜಯಂತಿ ಉತ್ಸವದಲ್ಲಿ ಡಿಸಿ, ಎಸ್ಪಿ ಮತೀಯ ಸಂಘಟನೆಗಳ ಜೊತೆ ಕೈಜೋಡಿಸಿದರೆ ಮುಖ್ಯಮಂತ್ರಿಗಳಿಗೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ದೇವರಾಜ್ ಹೇಳಿದ್ದಾರೆ. ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದು, ಅವರಿಗೆ ಬೇಕಾದಂತೆ ಉತ್ಸವ ಮಾಡಿಕೊಂಡಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಬಾಬಾಬುಡನ್ ಗಿರಿ ಹೋರಾಟ ಸಮಿತಿ ಸದಸ್ಯ ಸಿರಾಜ್ ಮಾತನಾಡಿ, “ಕೋರ್ಟ್ ಆದೇಶವಿಲ್ಲದೆ ಅಲ್ಲಿದ್ದ ದತ್ತಪಾದುಕೆಗಳನ್ನು ಸ್ಥಳಾಂತರಿಸಿದ್ದಾರೆ. ದತ್ತಪೀಠ ಆಡಳಿತ ಸಂವರ್ದನಾ ಸಮಿತಿ ವಿರುದ್ಧ ಕ್ರಮಕೈಗೊಳ್ಳಿ ಅಂದರೆ ಆಗಲ್ಲ. ನಾವು ನಮ್ಮ ಉರುಸ್ ಸಂದರ್ಭದಲ್ಲಿ ಹಸಿರು ಬಟ್ಟೆ ಕೊಡಿ ಅಂತ ಕೇಳಿದ್ದೆವು. ಗುಹೆಯೊಳಗೆ ಕಾಣಿಕೆ ಡಬ್ಬವಿದ್ದು, ಕಾಣಿಕೆಯನ್ನು ಹುಂಡಿಯಲ್ಲಿ ಹಾಕಬೇಕು. ಆದರೆ, ಅರ್ಚಕರು ಹಣ ವಸೂಲಿ ಮಾಡುವ ವ್ಯವಹಾರ ಮಾಡುತ್ತಿದ್ದಾರೆ” ಎಂದು ದೂರಿದರು. “ಜಿಲ್ಲಾಡಳಿತ ಕಾನೂನು ಪ್ರಕಾರ ಕ್ರಮ ಕೈಗೊಂಡಿಲ್ಲ. ತುಳಸಿಕಟ್ಟೆ ಪಕ್ಕ ಹೋಮ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಕೊಡಲಿ, ನಮಗೂ ಅದರ ಪಕ್ಕದಲ್ಲಿರುವ ಗೋರಿಗಳಿಗೆ ಪೂಜೆ ಮಾಡಲು ಅವಕಾಶ ನೀಡಲಿ. ಅದಕ್ಕೆ ಕೋರ್ಟ್ ಆದೇಶವಿಲ್ಲ ಎನ್ನುತ್ತಾರೆ. ಜಿಲ್ಲಾಡಳಿತ ಒಂದು ಧರ್ಮದ ಪರ ಕೆಲಸ ಮಾಡುತ್ತಿರುವುದು ತಪ್ಪು” ಎಂದು ಹೇಳಿದ್ದಾರೆ.

ಇದನ್ನು ಓದಿ: Datta jayanti | ದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್‌

ಶಾಸಕ ಎಚ್.ಡಿ ತಮ್ಮಯ್ಯ ದತ್ತ ಮಾಲೆ ಹಾಕುತ್ತಾರಾ?

ಈ ನಡುವೆ ಚಿಕ್ಕಮಗಳೂರಿನಲ್ಲಿ ಚರ್ಚೆಯೊಂದು ಎದ್ದಿದೆ. ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರು ದತ್ತ ಮಾಲೆ ಹಾಕುತ್ತಾರಾ ಎನ್ನುವುದು. ಯಾಕೆಂದರೆ, ಇಷ್ಟು ವರ್ಷ ಬಿಜೆಪಿಯಲ್ಲಿದ್ದ ಅವರು ದತ್ತ ಮಾಲೆ ಹಾಕುವುದರಲ್ಲಿ ಮುಂಚೂಣಿಯಲ್ಲಿದ್ದರು.

ದತ್ತಜಯಂತಿ ಆಚರಣೆ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇನೆ. ಸರ್ಕಾರ, ಕೋರ್ಟ್ ಆದೇಶದಂತೆ ದತ್ತಜಯಂತಿ ನಡೆಯುತ್ತದೆ ನಾನು ಈ ಬಾರಿ ದತ್ತಮಾಲೆ ಹಾಕುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ದೇವರು ಯಾವ ರೀತಿ ಮನಸ್ಸು ಕೊಡುತ್ತಾನೋ ನೋಡೋಣ ಎಂದಿದ್ದಾರೆ ಶಾಸಕ ಎಚ್.ಡಿ. ತಮ್ಮಯ್ಯ.

Exit mobile version