ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ (Chikkamagaluru news) ಕಾಡಾನೆ ದಾಳಿಗೆ (Elephant attacK) ಮತ್ತೊಂದು ಜೀವ ಬಲಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇಪ್ಪತ್ತು ದಿನದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾದಂತಾಗಿದೆ. ಈ ಬಾರಿ ಮೃತಪಟ್ಟಿರುವುದು ಆನೆ ನಿಗ್ರಹ ಪಡೆಯ (Elephant Control team) ಸದಸ್ಯನೇ ಆಗಿರುವುದರಿಂದ ಆತಂಕ ಹೆಚ್ಚಾಗಿದೆ.
ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿರುವ ಕಾರ್ತಿಕ್ ಮೃತಪಟ್ಟವರು. ಕಾರ್ತಿಕ್ ಅವರು ಸರ್ಕಾರ ರಚಿಸಿದ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು.
ಕೇವಲ 20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎಂಬವರು ಮೃತಪಟ್ಟಿದ್ದರು. ಒಂದುವರೆ ತಿಂಗಳ ಹಿಂದೆ ಆಲ್ದೂರು ಸಮೀಪವೇ ಚಿನ್ನಿ ಎಂಬವರು ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದರು. ಇದೀಗ 45 ದಿನದಲ್ಲಿ ಮೂರನೇ ಸಾವು ಸಂಭವಿಸಿದೆ.
ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ಕಾಡಾನೆಗಳ ದಾಳಿ ತೀವ್ರವಾಗಿದೆ. ಒಂದೆರಡು ಆನೆಗಳಲ್ಲ, ನಾಲ್ಕೈದು ಆನೆಗಳು ಗುಂಪು ಗುಂಪಾಗಿ ತೋಟಗಳಿಗೆ ಲಗ್ಗೆ ಇಟ್ಟು ನಾಶ ಮಾಡುತ್ತಿವೆ. ಕಾಡಿನಂಚಿನಲ್ಲಿರುವ ಕಾಫಿ ತೋಟಕ್ಕೆ ನುಗ್ಗುತ್ತಿವೆ. ಇವುಗಳ ನಿಯಂತ್ರಣಕ್ಕಾಗಿ ಈ ಭಾಗದಲ್ಲಿ ಆನೆ ನಿಗ್ರಹ ದಳವನ್ನು ರಚಿಸಲಾಗಿತ್ತು.
ಈ ಆನೆ ನಿಗ್ರಹ ದಳದಲ್ಲಿ ಕಾರ್ತಿಕ್ ಕೆಲಸ ಮಾಡುತ್ತಿದ್ದರು. ಬುಧವಾರ ಕಾರ್ತಿಕ್ ಮತ್ತು ಇತರ ಕೆಲವು ಮಂದಿ ಸರ್ಕಾರಿ ಆನೆ ನಿಗ್ರಹ ದಳದ ಭಾಗವಾಗಿ ಭೈರಾಪುರ ಭಾಗದಲ್ಲಿ ಆನೆ ಓಡಿಸುವ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆನೆಗಳು ತಿರುಗಿ ನಿಂತಿವೆ. ಅದರಲ್ಲಿ ಒಂದು ಆನೆ ಈ ತಂಡದ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಕಾರ್ತಿಕ್ ಮೃತಪಟ್ಟರೆ, ಇತರ ಇಬ್ಬರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.