ಚಿಕ್ಕಮಗಳೂರು : ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ (Hijab Row), ಕ್ಲಾಸ್ ರೂಮಿನಲ್ಲಿ ಕುಳಿತಿರುವ, ಬುರ್ಕಾ ಧರಿಸಿ ಕಾರಿಡಾರಿನಲ್ಲಿ ಅಡ್ಡಾಡುತ್ತಿರುವ (Hijab wearing students in Class Room) ದೃಶ್ಯಗಳು ವೈರಲ್ ಆಗಿ ವಿವಾದಕ್ಕೆ ಒಳಗಾದ ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ (College in Chikkamagaluru) ಸಮವಸ್ತ್ರ ನಿಯಮ (Uniform rules) ಕಡ್ಡಾಯಗೊಳಿಸಿ ಹೊಸ ಆದೇಶ ಜಾರಿಗೊಳಿಸಲಾಗಿದೆ.
ಚಿಕ್ಕಮಗಳೂರು ನಗರದಲ್ಲಿರುವ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಬೆಳಗ್ಗೆ 10.21ರ ಹೊತ್ತಿಗೆ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಈ ವಿಡಿಯೊಗಳಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ತರಗತಿಯಲ್ಲಿ ಕುಳಿತಿರುವ, ಓಡಾಡುತ್ತಿರುವ ದೃಶ್ಯಗಳು ಹಾದು ಹೋಗುತ್ತವೆ. ಇದರ ಜತೆಗೆ ಕೆಲವು ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಕಾಲೇಜಿನ ಅಂಗಳಲ್ಲಿ, ಕಾರಿಡಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಭಾರಿ ವಿವಾದ ಸೃಷ್ಟಿಸಿ, ಜಾಲ ತಾಣದಲ್ಲಿ ಚರ್ಚೆ ಶುರುವಾದಾಗ ಪೊಲೀಸರು ಕಾಲೇಜಿಗೆ ಬಿಗಿ ಭದ್ರತೆಯನ್ನು ಒದಗಿಸಿದ್ದರು. ಜತೆಗೆ ಪ್ರತಿಭಟನೆಯ ಧ್ವನಿಗಳು ಕೂಡಾ ಕೇಳಿಬಂದಿದ್ದವು.
ಈ ಘಟನೆಗಳಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಕಾಲೇಜಿನಲ್ಲಿ ಸಮವಸ್ತ್ರ ನಿಯಮಾವಳಿಗಳನ್ನು ಕಡ್ಡಾಯವಾಗಿ ಜಾರಿ ಮಾಡಿ ಆದೇಶ ಹೊರಡಿಸಿದೆ. ವಾರದ 6 ದಿನವೂ ಸಮವಸ್ತ್ರ ಧರಿಸಬೇಕೆಂದು ಆದೇಶ ಹೊರಡಿಸಲಾಗಿದ್ದು, ಸಮವಸ್ತ್ರ ಧಾರಣೆಗೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಗುರುವಾರ ಮೊದಲ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಳು. ಜತೆಗೆ ಕೆಲವರು ಬುರ್ಕಾ ಧರಿಸಿ ಬಂದಿದ್ದರು. ಇದನ್ನು ಗಮನಿಸಿದ ಶಿಕ್ಷಕರು ಆಕೆಗೆ ಹಿಜಾಬ್ ತೆಗೆಯುವಂತೆ ಸೂಚಿಸಿದ್ದರು. ಬಳಿಕ ಆಕೆ ಅದನ್ನು ತೆಗೆದು ವಿವಾದ ಬಗೆಹರಿದಿತ್ತು ಎನ್ನಲಾಗಿದೆ. ಆದರೆ, ವಿಚಾರ ಹೊರಗಡೆ ಪ್ರಚಾರ ಪಡೆದು ವಿವಾದದ ರೂಪ ತಳೆದಿತ್ತು.
ಏನೇನು ನಿಯಮಗಳು ಕಡ್ಡಾಯ?
- ವಾರದ ಎಲ್ಲಾ ಆರು ದಿನಗಳೂ ಸಮವಸ್ತ್ರ ಧರಿಸುವುದು ಕಡ್ಡಾಯ.
- ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.
- ಸಮವಸ್ತ್ರ ಧರಿಸಿ ಐಡಿ ಕಾರ್ಡ್ ತೋರಿಸಿಯೇ ತರಗತಿಗೆ ಹಾಜರಾಗಬೇಕೆಂದು ಸೂಚನೆ
- ಸಮವಸ್ತ್ರ ನಿಯಮಾವಳಿಯಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ. ಹೀಗಾಗಿ ಹಿಜಾಬ್ ಧರಿಸುವಂತಿಲ್ಲ.
ಹಿಂದಿನ ಸುದ್ದಿ : Hijab Row: ಚಿಕ್ಕಮಗಳೂರು ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ವಿಡಿಯೊ ವೈರಲ್; ಭುಗಿಲೆದ್ದ ಆಕ್ರೋಶ
ಏನಿದು ಹಿಜಾಬ್ ವಿವಾದ?
2022ರಲ್ಲಿ ಉಡುಪಿಯ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿಯೇ ಪಾಠ ಕೇಳಲು ಅವಕಾಶ ನೀಡಬೇಕು ಎಂದು ಕೋರಿದ ಮತ್ತು ಅದಕ್ಕೆ ಎದುರಾದ ವಿರೋಧಗಳ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂಕೋರ್ಟ್‌ವರೆಗೂ ಹೋಗಿ ಅಂತಿಮವಾಗಿ ಹಿಜಾಬ್ ನಿಷೇಧ ಇರುವ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗಳಿಗೆ ಹೋಗುವಂತಿಲ್ಲ ಎಂದು ತೀರ್ಪು ನೀಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಹಿಜಾಬ್ ಧಾರಣೆಯ ಬಗ್ಗೆ ಒಂದು ಸ್ಪಷ್ಟತೆ ಬಂದಿತ್ತು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ಸರ್ಕಾರ ಆದೇಶಿಸಿತ್ತು.