Site icon Vistara News

Datta Jayanti : ದರ್ಗಾದಲ್ಲಿ ದತ್ತ ಜಯಂತಿಗೆ ಶ್ರೀರಾಮ ಸೇನೆ ಪ್ಲ್ಯಾನ್‌!: ಚಿಕ್ಕಮಗಳೂರಲ್ಲಿ ಮತ್ತೊಂದು ವಿವಾದ

Nagenahalli Bababudan dargah

ಚಿಕ್ಕಮಗಳೂರು: ಬಾಬಾಬುಡನ್‌ ಗಿರಿಯ ದತ್ತಾತ್ರೇಯ ಪೀಠದಲ್ಲಿ (Datta Peeta) ಮುಸ್ಲಿಮರು ಉರೂಸ್‌, ನಮಾಜ್‌ ಮಾಡಬಹುದಾದರೆ ಮುಸ್ಲಿಮರ ದರ್ಗಾದಲ್ಲಿ ದತ್ತ ಜಯಂತಿ (Datta Jayanti) ಯಾಕೆ ಆಚರಿಸಬಾರದು ಎಂದು ಪ್ರಶ್ನೆ ಮಾಡುವ ಮೂಲಕ ಶ್ರೀರಾಮಸೇನೆ (Sriramasene) ಚಿಕ್ಕಮಗಳೂರಿನಲ್ಲಿ ಮತ್ತೊಂದು ವಿವಾದ ಹುಟ್ಟು ಹಾಕಿದೆ. ಚಿಕ್ಕಮಗಳೂರಿನ ನಾಗೇನಹಳ್ಳಿ ದರ್ಗಾದಲ್ಲಿ (Nagenahalli Dargah) ಶ್ರೀರಾಮ ಸೇನೆ ನೇತೃತ್ವದಲ್ಲಿ ದತ್ತಜಯಂತಿಗೆ ನಿರ್ಧಾರ ಮಾಡಲಾಗಿದ್ದು, ಡಿಸೆಂಬರ್‌ 26ರಂದು ಎಲ್ಲ ಹಿಂದುಗಳು ಆಗಮಿಸಬೇಕು ಎಂದು ಮನವಿ ಬೇರೆ ಮಾಡಲಾಗಿದೆ.

ಬಜರಂಗದಳ , ವಿ‌ಶ್ವ ಹಿಂದು ಪರಿಷತ್‌ ನೇತೃತ್ವದಲ್ಲಿ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ನಡೆದರೆ ನಾಗೇನಹಳ್ಳಿಯಲ್ಲಿ ಶ್ರೀರಾಮ ಸೇನೆ ದತ್ತ ಜಯಂತಿ ಆಚರಿಸುವುದು ಈಗಿನ ಪ್ಲ್ಯಾನ್‌.

ನಾಗೇನಹಳ್ಳಿ ದರ್ಗಾದಲ್ಲಿ ಯಾಕೆ?

ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿ ಆಚರಣೆ ನಡೆಸುವುದರಿಂದ ಹಿಂದು ಮುಸ್ಲಿಮರ ನಡುವೆ ಉತ್ತಮ ಬಾಂಧವ್ಯ ಸ್ಥಾಪನೆ ಮಾಡಿದಂತಾಗುತ್ತದೆ, ಇದು ನಿಜವಾದ ಸಾಮರಸ್ಯ ಎಂಬ ವಾದವನ್ನು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮುಂದಿಟ್ಟಿದ್ದಾರೆ.

ಗಂಗಾಧರ ಕುಲಕರ್ಣಿ ಅವರ ಪ್ರಕಾರ ಬಾಬಾ ಬುಡನ್‌ ಅವರ ನಿಜವಾದ ದರ್ಗಾ ಇರುವುದು ನಾಗೇನ ಹಳ್ಳಿಯಲ್ಲಿ. ಇದೇ ಕಾರಣಕ್ಕಾಗಿ ಇಲ್ಲಿ ರಾಜ್ಯ. ಹೊರರಾಜ್ಯದಿಂದ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಬಂದು ಪ್ರಾರ್ಥನೆ ಮಾಡುತ್ತಾರೆ. ಬಾಬಾ ಬುಡನ್‌ ಅವರು ಗುರು ದತ್ತಾತ್ರೇಯರ ಪರಮ ಭಕ್ತರಾಗಿದ್ದರು.‌ ಹೀಗಾಗಿ ಅವರು ದತ್ತಾತ್ರೇಯರ ಗುಡಿಯಲ್ಲೇ ಇದ್ದರು. ಹೀಗಾಗಿ ಅಲ್ಲಿ ದತ್ತಾತ್ರೇಯರ ಪೂಜೆಯೊಂದಿಗೆ ಬಾಬಾ ಬುಡನ್‌ ಅವರಿಗೂ ಪ್ರಾರ್ಥನೆ, ಉರೂಸ್‌ ಸಲ್ಲುತ್ತದೆ. ನಮಾಜ್‌ ಕೂಡಾ ನಡೆಯುತ್ತದೆ.

ದತ್ತಾತ್ರೇಯ ಗುರುಗಳ ದೇವಸ್ಥಾನದಲ್ಲಿ ಭಕ್ತ ಬಾಬಾ ಬುಡನ್‌ ಅವರ ಹೆಸರಿನಲ್ಲಿ ಉರೂಸ್‌, ನಮಾಜ್‌ ಮಾಡುವುದು ಸಾಮರಸ್ಯ ಎಂದಾದರೆ ಬಾಬಾಬುಡನ್‌ ಅವರ ಅಧಿಕೃತ ಗೋರಿಯನ್ನು ಹೊಂದಿರುವ ಮುಸ್ಲಿಂರ ಪವಿತ್ರ ಸ್ಥಳವಾಗಿರುವ ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿಯನ್ನು ಆಚರಿಸುವುದು ಕೂಡಾ ಸಾಮರಸ್ಯವೇ ಆಗುತ್ತದೆ. ಹೀಗಾಗಿ ಈ ಬಾರಿ ಡಿಸೆಂಬರ್‌ 26ರಂದು ಸಾಮರಸ್ಯವನ್ನು ಉಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಗಂಗಾಧರ ಕುಲಕರ್ಣಿ ಹೇಳಿದ್ದಾರೆ.

Nagenahalli Dargah2

ʻʻಮುಸ್ಲಿಮರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ಅವರಂತೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡುತ್ತೇವೆ. ದತ್ತಪೀಠದಲ್ಲಿ ಉರುಸ್ ಆಗುವುದಾದ್ರೆ ನಾವು ನಾಗೇನಹಳ್ಳಿ ದರ್ಗಾದಲ್ಲಿ ಯಾಕೆ ಮಾಡಬಾರದುʼʼ ಎಂದು ಪ್ರಶ್ನಿಸುವ ಮೂಲಕ ಇದೇ ಮೊದಲ ಬಾರಿಗೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿ ಆಚರಣೆಯನ್ನು ಘೋಷಿಸಲಾಗಿದೆ.

ಬಾಬಾ ಬುಡನ್‌ಗಿರಿಯಲ್ಲಿರುವ ದತ್ತ ಪೀಠ ಹಲವು ವರ್ಷಗಳಿಂದ ವಿವಾದಿತವಾಗಿದೆ. ಇದೀಗ ಹೈಕೋರ್ಟ್‌ ಸೂಚನೆಯಂತೆ ಇಲ್ಲಿ ಇಬ್ಬರು ಅರ್ಚಕರನ್ನು ನೇಮಿಸಿ ಪೂಜೆ ನಡೆಸಲಾಗುತ್ತಿದೆ. ಆಡಳಿತ ಮಂಡಳಿಯಲ್ಲೂ ಹಿಂದೂ ಮುಸ್ಲಿಂ ಇಬ್ಬರಿಗೂ ಅವಕಾಶ ನೀಡಲಾಗಿದೆ.

ಇಲ್ಲಿ ಕಳೆದ ಡಿಸೆಂಬರ್‌ 17ರಂದು ದತ್ತ ಮಾಲಾಧಾರಣೆ ನಡೆದಿತ್ತು, ಡಿಸೆಂಬರ್‌ 26ರಂದು ದತ್ತಜಯಂತಿ ಅದ್ಧೂರಿಯಾಗಿ ನಡೆಯಲಿದೆ. ಈ ವೇಳೆ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ. ಇದರ ನಡುವೆ ನಾಗೇನಹಳ್ಳಿ ದರ್ಗಾದ ವಿಚಾರ ತಲೆ ಎತ್ತಿದೆ. ಇದು ಪೊಲೀಸರಿಗೆ ತಲೆ ನೋವಾಗಲಿದೆ.

Exit mobile version