Site icon Vistara News

Hiremagaluru Kannan : ಹೆಚ್ಚುವರಿ ವೇತನ; ಹಿರೇಮಗಳೂರು ಕಣ್ಣನ್ ತಪ್ಪಿಲ್ಲ, ತಹಸೀಲ್ದಾರ್‌ರಿಂದ ಹಣ ವಸೂಲಿ: ಸಿದ್ದರಾಮಯ್ಯ

Hiremagaluru Kannan and CM Siddaramaiah

ಬೆಂಗಳೂರು: ಕನ್ನಡದ ಪಂಡಿತ, ಸಾಹಿತಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್‌ಗೆ (Hiremagaluru Kannan) ಅವರಿಗೆ ನೀಡುತ್ತಿದ್ದ ತಸ್ತೀಕ್ ಹಣ (Tastiq Money) ವಾಪಸ್ ನೀಡುವ ಕುರಿತಂತೆ ನೋಟಿಸ್‌ ನೀಡಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟೀಕರಣ ನೀಡಿದ್ದಾರೆ. ಈ ವಿಚಾರದಲ್ಲಿ ಕಣ್ಣನ್‌ ಅವರ ತಪ್ಪೇನೂ ಇಲ್ಲ ಎಂದಿರುವ ಸಿಎಂ, ಹೆಚ್ಚುವರಿ ಹಣವನ್ನು ತಹಸೀಲ್ದಾರ್‌ ಅವರಿಂದಲೇ ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಸ್‌ ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಸೀಲ್ದಾರ್ ತಪ್ಪಿದೆಯೇ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಸೀಲ್ದಾರರು, ಹೀಗಾಗಿ ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

ಏನಿದು ಪ್ರಕರಣ?

ಹಿರೇಮಗಳೂರು ಕಣ್ಣನ್‌ ಅವರು ಹಿರೇಮಗಳೂರು ಗ್ರಾಮದಲ್ಲಿರುವ ಕೊಂದಡರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ. ಕಣ್ಣನ್‌ಗೆ ವೇತನ ತಡೆಹಿಡಿದು ಚಿಕ್ಕಮಗಳೂರು ಜಿಲ್ಲಾಡಳಿತವು ನೋಟಿಸ್ ನೀಡಿತ್ತು. ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು.

ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂ. ಅಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು. ಸದ್ಯ ಪ್ರತಿ ತಿಂಗಳು ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದರು.

ಕನ್ನಡದ ಪಂಡಿತ, ಸಾಹಿತಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ಅವರು 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಈ ನೋಟಿಸ್ ಕಂಡು ಹಿರೇಮಗಳೂರು ಕಣ್ಣನ್ ಆತಂಕ ಗೊಂಡಿದ್ದರು.

ಇದನ್ನೂ ಓದಿ: Winter Skin Care: ಚಳಿಗಾಲದಲ್ಲಿ ಒಣಕಲು ಚರ್ಮ ನಯವಾಗಬೇಕಿದ್ದರೆ ಇವುಗಳನ್ನು ಕುಡಿಯಿರಿ!

ಸ್ಪಷ್ಟೀಕರಣ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಇದರಲ್ಲಿ ಕಣ್ಣನ್‌ ಅವರದು ಯಾವುದೇ ತಪ್ಪಿಲ್ಲ. ಅವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದರು. ಪ್ರತಿ ವರ್ಷ ತಸ್ತೀಕ್ ಹಣವನ್ನು ದೇವಾಲಯಗಳಿಗೆ ನೀಡಲಾಗುತ್ತದೆ. ಕಣ್ಣನ್ ಅವರ ವಿಚಾರದಲ್ಲಿ 24 ಸಾವಿರ ಬದಲು 90 ಸಾವಿರ ರೂ. ನೀಡಲಾಗಿದೆ. ಇದರಲ್ಲಿ ತಹಸೀಲ್ದಾರ್‌ರವರ ತಪ್ಪಿನಿಂದ ಈ ರೀತಿ ಆಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಕಣ್ಣನ್ ಅವರ ತಪ್ಪಲ್ಲ. ಇಲಾಖೆಯ ಆಯುಕ್ತರ ಗಮನಕ್ಕೆ ತಂದು ನೋಟಿಸ್ ವಾಪಸ್‌ ಪಡೆಯುವಂತೆ ಸೂಚಿಸುತ್ತೇನೆ. ಹೆಚ್ಚುವರಿ ಪಾವತಿ ಮಾಡಿರೋ ಹಣವನ್ನು ತಹಸೀಲ್ದಾರ್‌ರಿಂದ ವಸೂಲು ಮಾಡಬೇಕು. ಕಣ್ಣನ್ ಅವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದರು.

Exit mobile version