ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಇಂದು ಬಿಜೆಪಿ ತನ್ನ ಜನ ಸಂಕಲ್ಪ ಯಾತ್ರೆಯ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದೆ. ಕಾಫಿನಾಡಿಗೆ ಸಿಎಂ ಬಸವರಾಜ್ ಬೊಮ್ಮಾಯಿ (Jana Sankalpa Yatre) ಆಗಮಿಸಲಿದ್ದಾರೆ. ಶಿವಮೊಗ್ಗಕ್ಕೂ ಅವರು ಭೇಟಿ ನೀಡಲಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಕ್ಷೇತ್ರದಲ್ಲಿ ಸಿಎಂ ಸವಾರಿ ನಡೆಯಲಿದೆ.
ಕೊಪ್ಪದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆಯ ಸಮಾವೇಶವನ್ನೂ ಆಯೋಜಿಸಲಾಗಿದೆ. ಬೆಳಿಗ್ಗೆ 10.30ಕ್ಕೆ ಕಾಫಿನಾಡಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಸಿಎಂಗೆ ಮಾಜಿ ಸಿಎಂ ಬಿ.ಎಸ್.ವೈ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಸಾಥ್ ನೀಡಲಿದ್ದಾರೆ.
ಬೆಳಗ್ಗೆ 9ಕ್ಕೆ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೊರಡಲಿರುವ ಸಿಎಂ ಅವರು, 10:40 ಕ್ಕೆ ಕೊಪ್ಪದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12:45ಕ್ಕೆ ತೀರ್ಥಹಳ್ಳಿ ತಾಲೂಕಿನ ಬಾಳೆ ಬೈಲುನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.
ಅಡಿಕೆ ಮರದ ಎಲೆ ಚುಕ್ಕಿ ರೋಗದ ತಪಾಸಣೆ ಕುರಿತು ಹೊಸಹಳ್ಳಿ ಗ್ರಾಮದ ತೋಟಕ್ಕೆ ಭೇಟಿ ನೀಡಲಿದ್ದಾರೆ. ರೋಗದ ಬಗ್ಗೆ ಅಡಿಕೆ ಬೆಳೆಗಾರರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಶರಾವತಿ ಸಂತ್ರಸ್ತರ ಮನವಿ ಸ್ವೀಕರಿಸಲಿದ್ದಾರೆ.
2:30ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30 ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.