Site icon Vistara News

KSRTC Bus : ಚಾರ್ಮಾಡಿ ಘಾಟಿಯಲ್ಲಿ ಬ್ರೇಕ್‌ಫೇಲ್‌: ಮೋರಿಗೆ ಡಿಕ್ಕಿ ಹೊಡೆಸಿ ಪ್ರಯಾಣಿಕರ ಜೀವ ಉಳಿಸಿದ ‌ಚಾಲಕ

KSRTC Bus Charmadi New

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ (Charmadi Ghat) ಎಂದರೆ ಸುಮಾರು 11 ಭಯಾನಕ ತಿರುವುಗಳಿವೆ. ಹೇರ್‌ ಪಿನ್‌ನಂತೆ ಕಡಿದಾದ ತಿರುವಿನಲ್ಲಿ ಸಾಗಬೇಕು ಎಂದರೆ ವಾಹನಗಳು ಅಷ್ಟು ಸದೃಢವಾಗಿರಬೇಕು, ಚಾಲಕನಿಗೆ ಎಂಟೆದೆ ಬೇಕು. ಅದರಲ್ಲಿಯೂ ಚಿಕ್ಕಮಗಳೂರು ಕಡೆಯಿಂದ ಮಂಗಳೂರು (Chikkamagaluru to Mangalore) ಕಡೆಗೆ ಹೋಗುವಾಗ ಇಳಿಜಾರಿನಲ್ಲಿ ತುಂಬಾ ಎಚ್ಚರಿಕೆ ಬೇಕು. ಹೀಗೆ ಸಾಗುವಾಗ ಬ್ರೇಕ್‌ ತುಂಬಾ ಮುಖ್ಯ. ಬ್ರೇಕ್‌ ಒಂದು ಕ್ಷಣ ಕೈಕೊಟ್ಟಿತು ಎಂದರೆ ಪ್ರಪಾತಕ್ಕೆ ಬೀಳುವುದೇ ಎಂಬ ಪರಿಸ್ಥಿತಿ ಇರುತ್ತದೆ. ಇಂಥ ಅಪಾಯಕಾರಿ ದಾರಿಯಲ್ಲೇ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಒಂದು ಬ್ರೇಕ್‌ ಫೇಲ್‌ (KSRTC Bus Brake fail) ಆಗಿದೆ. ಆದರೂ ಈ ಬಸ್ಸಿನ ಚಾಲಕ ಭಾರಿ ಸಮಯಪ್ರಜ್ಞೆ‌ (Drivers Time Sense), ತನ್ನ ನೈಪುಣ್ಯತೆಯನ್ನು ಮೆರೆದು ಪ್ರಯಾಣಿಕರ ಜೀವ (Driver Saves passengers life) ಉಳಿಸಿದ್ದಾನೆ.

ಇದು ಚಾರ್ಮಾಡಿ ಘಾಟಿಯ ಆರನೇ ತಿರುವಿನಲ್ಲಿ ನಡೆದ ಘಟನೆ. ಕೆಎಸ್ಆರ್‌ಟಿಸಿ ಬಸ್ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಅಂದರೆ ಇಳಿಜಾರು ಮಾರ್ಗದಲ್ಲಿ ಸಾಗುತ್ತಿತ್ತು. ಚಾಲಕ ಸಂತೋಷ್‌ ಅವರು ಬಸ್ಸನ್ನು ಓಡಿಸುತ್ತಿದ್ದರು. ಬಸ್ಸಿನಲ್ಲಿ ನಿರ್ವಾಹಕ ಮತ್ತು ಸುಮಾರು 30ರಷ್ಟು ಪ್ರಯಾಣಿಕರು ಇದ್ದರು.

KSRTC Bus Brake fail Charmadi

ಬಸ್ಸು ಇಳಿಜಾರಿನಲ್ಲಿ ಇಳಿದು ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ಒಮ್ಮಿಂದೊಮ್ಮೆಗೇ ಬ್ರೇಕ್‌ ಫೇಲ್‌ ಆಯಿತು. ಚಾಲಕ ಸಂತೋಷ್‌ ಒಂದು ಕ್ಷಣ ಅವಾಕ್ಕಾದರು. ಯಾಕೆಂದರೆ ಬಸ್ಸು ತಿರುವಿನಲ್ಲಿ ಸಾಗುತ್ತಿದೆ. ಎದುರಿನಿಂದ ವಾಹನಗಳು ಬರುತ್ತಿವೆ. ತಿರುವಿನಲ್ಲಿ ಸ್ಲೋ ಮಾಡಿಯೇ ತಿರುಗಿಸಬೇಕು. ಬ್ರೇಕ್‌ ಇಲ್ಲದಿದ್ದರೆ ಏನು ಮಾಡುವುದು ಎಂದು ದಿಗಿಲುಗೊಂಡರು. ಆದರೂ ಸಾವರಿಸಿಕೊಂಡು ಈ ಹೊತ್ತಿನಲ್ಲಿ ಏನು ಮಾಡಬಹುದು ಎಂದು ಯೋಚಿಸಿದರು.

ಬಸ್ಸು ಆಗ ಆರನೇ ತಿರುವಿಗೆ ಬಂದಿತ್ತು. ಬಸ್ಸಿನ ಒಳಗಿದ್ದ ಪ್ರಯಾಣಿಕರಿಗೂ ಬಸ್ಸಿಗೆ ಏನೋ ಸಮಸ್ಯೆ ಆಗಿದೆ ಎನ್ನುವುದು ಅರಿವಾಗಿತ್ತು. ಬಸ್ಸು ಓಲಾಡುತ್ತಿರುವುದನ್ನು ಕಂಡು ಭಯಗೊಂಡು ಬೊಬ್ಬೆ ಹೊಡೆಯಲು ಶುರು ಮಾಡಿದರು.

ಇದನ್ನೂ ಓದಿ : Road Accident : ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ; ಶಿಕ್ಷಕ ಸಾವು, ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

ಆಗ ಚಾಲಕ ಸಂತೋಷ್‌ ಬಸ್‌ ಬ್ರೇಕ್‌ ಫೇಲ್‌ ಆಗಿದೆ ಎಂಬ ವಿಷಯವನ್ನು ತಿಳಿಸಿದರು. ಇದರಿಂದ ಪ್ರಯಾಣಿಕರಲ್ಲಿ ಭಯ ಇನ್ನಷ್ಟು ಹೆಚ್ಚಾಯಿತು. ಆಗ ಸಂತೋಷ್‌, ಯಾರು ಕೂಡಾ ಭಯಪಡಬೇಡಿ, ನಾನು ಹೇಗಾದರೂ ಮಾಡಿ ಎಲ್ಲಾದರೂ ಬಸ್ಸನ್ನು ನಿಲ್ಲಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ಧೈರ್ಯದಿಂದ ಇರಿ ಎಂದು ಸೂಚಿಸಿದರು.

ನಾನು ಬಸ್ಸನ್ನು ಎಲ್ಲಾದರೂ ರಸ್ತೆ ಪಕ್ಕದ ಧರೆ, ಕಾಲುವೆ ಇಲ್ಲವೇ ಕಿರುಸೇತುವೆಗೆ ಡಿಕ್ಕಿ ಹೊಡೆಸಿ ನಿಲ್ಲಿಸುತ್ತೇನೆ. ನೀವು ಎಲ್ಲರೂ ಗಟ್ಟಿಯಾಗಿ ಹಿಡಿದುಕೊಳ್ಳಿ. ಯಾರಿಗೂ ಏನೂ ಆಗುವುದಿಲ್ಲ ಎಂದು ಧೈರ್ಯ ಹೇಳಿದರು. ಪ್ರಯಾಣಿಕರು ಅಪಧೈರ್ಯದ ನಡುವೆಯೂ ಸಂತೋಷ್‌ ಅವರನ್ನು ನಂಬಿದರು.

ಸಂತೋಷ್‌ ಅವರು ವೇಗವಾಗಿಯೇ ಇಳಿಯುತ್ತಿದ್ದ ಬಸ್ಸನ್ನು ತುಂಬ ಕಷ್ಟಪಟ್ಟು ನಿಯಂತ್ರಿಸಿಕೊಳ್ಳುತ್ತಾ ಸೇತುವೆಯಂದರ ಕಟ್ಟೆಗೆ ಡಿಕ್ಕಿ ಹೊಡೆಸಿ ನಿಲ್ಲಿಸಿದರು. ಬಸ್ಸು ದಢಾರನೆ ಡಿಕ್ಕಿ ಹೊಡೆದು ಎಲ್ಲರೂ ಒಮ್ಮೆಗೇ ಮುಗ್ಗರಿಸಿ ಬಿದ್ದಂತೆ ಆದರೂ ಅಲ್ಲಿಗೆ ನಿಂತುಬಿಟ್ಟಿತು.

ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು. ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರಿಂದ ಮೆಚ್ಚುಗೆ ಸೂಚಿಸಿದರಲ್ಲದೆ, ನಮ್ಮೆಲ್ಲರ ಜೀವವನ್ನು ಉಳಿಸಿದರು ಎಂದು ಆಶೀರ್ವಾದ ಮಾಡಿದರು.

Exit mobile version