Site icon Vistara News

Tiger Nail : ದತ್ತಪೀಠದ ಶಾ ಖಾದ್ರಿ ಕುಟುಂಬಕ್ಕೂ ಹುಲಿ ಚರ್ಮ ಸಂಕಟ ; ಕ್ರಮಕ್ಕೆ ಶ್ರೀರಾಮ ಸೇನೆ ಆಗ್ರಹ

Datta peeta Shah Khadri and tiger Skin

ಚಿಕ್ಕಮಗಳೂರು: ಹುಲಿಯ ಉಗುರು (Tiger Nail) ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಿಗ್‌ ಬಾಸ್‌ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur santhosh Arrest) ಅವರ ಬಂಧನದ ಬೆನ್ನಿಗೇ ಹಲವು ಚಿತ್ರನಟರ ಮನೆಗೆ ದಾಳಿ ನಡೆದಿದೆ. ಇದೀಗ ಸಾರ್ವಜನಿಕ ವಲಯದಲ್ಲಿ ಹುಲಿಯ ಉಗುರು ಹೊಂದಿರುವ ವ್ಯಕ್ತಿಗಳು, ಹುಲಿ ಚರ್ಮದ ಮೇಲೆ ಕುಳಿತ ಧಾರ್ಮಿಕ ವ್ಯಕ್ತಿಗಳ ಚರ್ಚೆ ಹೆಚ್ಚಾಗಿದೆ. ಅದರಲ್ಲಿ ಈಗ ಹೊಸದಾಗಿ ಕೇಳಿಬಂದಿರುವ ಹೆಸರು ಚಿಕ್ಕಮಗಳೂರು ದತ್ತ ಪೀಠದ ಶಾ ಖಾದ್ರಿ (Datta peeta) ಅವರ ಕುಟುಂಬ.

ಶಾ ಖಾದ್ರಿ ಅವರದು ಬಾಬಾ ಬುಡನ್‌ ಗಿರಿ ದತ್ತಪೀಠದ (Bababudan giri Datta peeta) ಮುಸ್ಲಿಂ ವಿಭಾಗದ ಕುಟುಂಬವಾಗಿದ್ದು, ಪೂಜಾ ಕಾರ್ಯಗಳಲ್ಲಿ ಭಾಗಿಯಾಗುತ್ತದೆ. ಇವರ ಕುಟುಂಬದ ಬಳಿ ಹುಲಿ ಚರ್ಮ ಇತ್ತು ಎಂಬುದಕ್ಕೆ ಹಲವಾರು ಫೋಟೊಗಳು ಸಾಕ್ಷ್ಯ ಹೇಳುತ್ತಿವೆ. ಹೀಗಾಗಿ ಈಗಿನ ಗೌಸ್‌ ಮೊಹಿದ್ದೀನ್‌ ಶಾ ಖಾದ್ರಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಚಿಕ್ಕಮಗಳೂರಿನ ಕೊಪ್ಪ ಸಮೀಪದ ಗೌರಿ ಗದ್ದೆಯ ಶ್ರೀ ವಿನಯ್‌ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಚಿತ್ರ ವೈರಲ್‌ ಆದ ಹಿನ್ನೆಲೆಯಲ್ಲಿ ಅವರ ವಿಚಾರಣೆ ನಡೆದಿತ್ತು. ಇದೇ ರೀತಿ ಶಾ ಖಾದ್ರಿ ಕುಟುಂಬದವರೂ ಹುಲಿ ಚರ್ಮದ ಮೇಲೆ ಕುಳಿತಿರುವ ಚಿತ್ರಗಳು ಸಾಕ್ಷ್ಯವಾಗಿ ಸಿಕ್ಕಿವೆ. ಹೀಗಾಗಿ ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಎದ್ದಿದೆ.

ʻʻದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರುವ ಶಾ ಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಶ್ರೀರಾಮಸೇನೆ ಜಿಲ್ಲಾ ಘಟಕ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದೆ. ಡಿ.ಎಫ್.ಓ.ಗೆ ದೂರು ನೀಡಲಾಗುವುದು ಎಂದು ಶ್ರೀರಾಮಸೇನೆ ಜಾಲತಾಣ ಮತ್ತು ವಿಡಿಯೊ ಮೂಲಕ ತಿಳಿಸಿದೆ.

ದತ್ತ ಪೀಠದ ಶಾ ಖಾದ್ರಿ ಕುಟುಂಬ

ದೇವಸ್ಥಾನದ ಅರ್ಚಕರ ಬಂಧನಕ್ಕೆ ಆಕ್ರೋಶ

ಹುಲಿ ಉಗುರಿನ ಡಾಲರ್‌ ಹಾಕಿಕೊಂಡಿದ್ದ ಕಾರಣಕ್ಕಾಗಿ ಚಿಕ್ಕಮಗಳೂರಿನ ಇಬ್ಬರು ಅರ್ಚಕರನ್ನು ಬುಧವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದರಿಂದ ಇದೊಂದು ಹಿಂದೂ ದ್ವೇಷದ ಪ್ರಕರಣ ಎಂಬಂತೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೇ ಉಲ್ಲೇಖಿಸಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಅವರು ಕೆಲವು ಮುಸ್ಲಿಂ ಮೌಲ್ವಿಗಳು ನವಿಲುಗರಿಯ ಗುಚ್ಛ ಹಿಡಿದುಕೊಂಡಿರುತ್ತಾರೆ, ಅವರನ್ನೂ ಬಂಧಿಸಿ ಎಂದು ಸವಾಲು ಹಾಕಿದ್ದರು.

ಚಿಕ್ಕಮಗಳೂರಿನ ಬಹು ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಅವರನ್ನು ಬಂಧಿಸಿದ್ದು ಮಾತ್ರವಲ್ಲ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Tiger Nail : ನವಿಲು ಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿ ಮೇಲೂ ದಾಳಿ ಮಾಡಿ ಮೌಲ್ವಿಗಳ ಬಂಧಿಸಿ ಎಂದ ಬಿಜೆಪಿ

ಮೈಸೂರಿನಲ್ಲಿ ಆನೆ ಹಲ್ಲು ಹೊಂದಿದ್ದವನ ಬಂಧನ

ಮೈಸೂರು: ಹುಲಿ ಹಲ್ಲು ಆಯ್ತು, ಈಗ ಆನೆ ಹಲ್ಲು ಸರದಿ ಬಂದಿದೆ. ಮೈಸೂರಿನಲ್ಲಿ ಆನೆ ಹಲ್ಲು ಸಂಗ್ರಹಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉದಯಗಿರಿ ನಿವಾಸಿ ಅಭಿರಾಮ ಸುಂದರಂ ಬಂಧಿತ ಆರೋಪಿ..

Elephant tusk found

ಡಿಸಿಎಫ್ ಡಾ. ಬಸವರಾಜ್, ಎಸಿಎಫ್ ಲಕ್ಷ್ಮಿಕಾಂತ್, ಮಾರ್ಗದರ್ಶನದಲ್ಲಿ ಆರ್ ಎಫ್ ಓ ಸುರೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಆತನನ್ನು ಸೆರೆ ಹಿಡಿಯಲಾಗಿದೆ. ಆರೋಪಿಗೆ ಆನೆ ಹಲ್ಲು ಎಲ್ಲಿ ದೊರೆಯಿತು, ಯಾವ ಕಾರಣಕ್ಕೆ ಸಂಗ್ರಹಿಸಿಟ್ಟಿದ್ದ ಅನ್ನುವ ಬಗ್ಗೆ ತನಿಖೆ‌ ನಡೆಸಲಾಗುತ್ತಿದೆ. ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Exit mobile version