Site icon Vistara News

Shobha Karandlaje : ಇದೆಲ್ಲ ಅಹಂಕಾರಿ ಗಂಡಸರ ಕೆಲಸ; ಗೋಬ್ಯಾಕ್‌ ಅಭಿಯಾನಕ್ಕೆ ಶೋಭಾ ಆಕ್ರೋಶ

Shobha Karandlaje

ಚಿಕ್ಕಮಗಳೂರು: ಕೆಲವು ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ಭಾವನೆ ಇದೆ. ಈ ದರ್ಪದಿಂದಲೇ ಕೆಲವರು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ದುಡ್ಡಿನ ಮದ ಅಹಂಕಾರದಿಂದ ಈ ರೀತಿ ಮಾಡ್ತಿದ್ದಾರೆ; ತಮ್ಮ ವಿರುದ್ಧದ ಪತ್ರ ಚಳುವಳಿ (Letter Campaign), ಗೋ ಬ್ಯಾಕ್‌ ಶೋಭಕ್ಕ (Go Back Shobhakka) ಅಭಿಯಾನದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಆಕ್ರೋಶದಿಂದ ಆಡಿದ ಮಾತಿದು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi- Chikkamagaluru Constituency) ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂಬ ನಿಟ್ಟಿನಲ್ಲಿ ದೊಡ್ಡದೊಂದು ಅಭಿಯಾನ ಕ್ಷೇತ್ರದಲ್ಲಿ ನಡೆದಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದ್ದರು. ಜತೆಗೆ ಯಾರು ಏನೇ ಹೇಳಿದರೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ಶೋಭಾ ಕರಂದ್ಲಾಜೆ ಅವರಿಗೇ ಸಿಗಲಿದೆ ಎಂಬ ಸಂದೇಶವನ್ನು ಬಿ.ಎಸ್‌. ಯಡಿಯೂರಪ್ಪ ಅವರು ರವಾನಿಸಿದ್ದರು.

ಬಿ.ಎಸ್‌. ಯಡಿಯೂರಪ್ಪ್‌ ಅವರು ನೇರವಾಗಿ ವಿಷಯವನ್ನು ಪ್ರಸ್ತಾಪ ಮಾಡಿದ್ದರಿಂದ ಧೈರ್ಯ ಹೊಂದಿರುವ ಶೋಭಾ ಕರಂದ್ಲಾಜೆ ಅವರು ತಮ್ಮ ವಿರುದ್ಧದ ಅಭಿಯಾನಗಳ ಬಗ್ಗೆ ಮಾತನಾಡಿದ್ದಾರೆ.

ʻʻಇಲ್ಲಿ ನಡೆಯುತ್ತಿರುವ ಷಡ್ಯಂತ್ರಕ್ಕೆ ಉತ್ತರ ನಾನು ಕೊಡಲ್ಲ, ನಮ್ಮ ನಾಯಕರು, ದೊಡ್ಡವರು ಕೊಡ್ತಾರೆ. ಯಾರು ಬರೆದರು? ಬರೆಸಿದವರು ಯಾರು? ಯಾರ ಹ್ಯಾಂಡ್ ರೈಟಿಂಗ್? ಎಲ್ಲವೂ ಗೊತ್ತಿದೆ. ನನಗೆ ಹಿರಿಯರ ಮೇಲೆ ನಂಬಿಕೆ ಇದೆ, ಅವರು ಉತ್ತರ ನೀಡುತ್ತಾರೆ. ಕೇಂದ್ರ ಕೂಡ ಎಲ್ಲಾ ವರದಿ ತರಿಸಿಕೊಂಡಿದೆʼʼʼ ಎಂದು ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಹೇಳಿದರು.

ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸುವ ಮೊದಲು ತಮ್ಮ ಲೋಕಸಭಾ ಕ್ಷೇತ್ರದ ಟಿಕೆಟ್‌ ಉಳಿಸಿಕೊಳ್ಳಲಿ ಎಂಬ ಸಚಿವ ಎಂ.ಬಿ. ಪಾಟೀಲ್‌ ಅವರಿಗೂ ಸಚಿವೆ ತಿರುಗೇಟು ನೀಡಿದರು.

ʻʻಸಿಎಂ-ಡಿಸಿಎಂ ಮಧ್ಯೆ ಏನು ನಡೆಯುತ್ತಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ. ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಅವರ ಎಂ.ಎಲ್.ಎ. ಉಳಿಸಿಕೊಳ್ಳಲು ಆಗಲ್ಲ ಅಂತ ಬಿಜೆಪಿ ಶಾಸಕರಿಗೆ ಕೈ ಹಾಕಿದೆ. ಚುನಾವಣೆ ಬಳಿಕ ಎಲ್ಲವೂ ಹೊರಬರಲಿದೆʼʼ ಎಂದು ಖಡಕ್ಕಾಗಿ ಉತ್ತರಿಸಿದರು.

ಅಭಿಯಾನದ ಬಳಿಕ ಶೋಭಾ ಫುಲ್‌ ಅಲರ್ಟ್‌, ಜೈಲಿಗೆ ಭೇಟಿ

ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಬಳಿಕ ಶೋಭಾ ಕರಂದ್ಲಾಜೆ ಪುಲ್ ಅಲರ್ಟ್ ಆಗಿರುವಂತೆ ಕಂಡಿದೆ. ಆ ರೀತಿಯ ಕೆಲವು ಘಟನಾವಳಿಗಳು ನಡೆಯುತ್ತಿದೆ. ಕ್ಷೇತ್ರದಲ್ಲಿ ನಡೆದ ಯಾವುದೇ ಘಟನೆಗಳಿಗೂ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನವಾಗಿದ್ದ ಶೋಭಾ ಕರಂದ್ಲಾಜೆ ಅವರು ಇದೀಗ ಚಿಕ್ಕಮಗಳೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಜೈಲು ಸೇರಿರುವ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಮಾತನಾಡಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : Shobha Karandlaje : ಉಡುಪಿಯಲ್ಲಿ ಶೋಭಾ ಕರಂದ್ಲಾಜೇನೇ ಗೆಲ್ಲೋದು ಅಂದ್ರು ಬಿಎಸ್‌ವೈ; ಟಿಕೆಟ್‌ ಫಿಕ್ಸ್‌?

15 ದಿನಗಳ ಹಿಂದೆ ಆಲ್ದೂರು ಪಟ್ಟಣದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿರುವ ಹಿಂದೂ ಸಂಘಟನೆ ಕಾರ್ಯಕರ್ತರು ಅವರನ್ನು ಭೇಟಿಯಾಗಿದ್ದಾರೆ.

ಲವ್ ಜಿಹಾದ್ ಪ್ರಕರಣದಲ್ಲಿ ಆರೋಪಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಏಳು ಮಂದಿ ಹಿಂದೂ ಸಂಘಟಕರಿಗೆ ಕೋರ್ಟ್ ನ್ಯಾಯಂಗ ಬಂಧನ ವಿಧಿಸಿತ್ತು. ಇದೀಗ ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಕಾರಾಗೃಹದಲ್ಲಿರುವ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ಹಾಗೂ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸಿದರು.

Exit mobile version