ವಿಧಾನಸಭೆ (ಬೆಳಗಾವಿ): ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆಗಳಿಗೆ ತಮ್ಮನ್ನು ಆಹ್ವಾನ ಮಾಡುತ್ತಿಲ್ಲ, ಇದರಿಂದ ತಮ್ಮ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಹಕ್ಕುಚ್ಯುತಿ ಮಂಡನೆಗೆ (Privilege Motion) ಮುಂದಾದರು.
ಸದನದಲ್ಲಿ ಹಕ್ಕು ಚ್ಯುತಿ ಮಂಡನೆ ಪ್ರಸ್ತಾಪ ಮಾಡಿದ ಶಾಸಕ ರಾಜೇಗೌಡ, ಸ್ಥಳೀಯ ಮಾಜಿ ಶಾಸಕ ಜೀವರಾಜ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ತಮ್ಮನ್ನು ಆಹ್ವಾನ ಮಾಡುತ್ತಿಲ್ಲ ಎಂಬ ಕುರಿತು ಗಮನಕ್ಕೆ ತಂದರು.
ನನ್ನ ಹೆಸರಿಗೆ ಬಂದ ಸರ್ಕಾರಿ ಆದೇಶಗಳು ನಂತರ ಬೇರೆಯವರ ಹೆಸರಿಗೆ ಬದಲಾಗುತ್ತವೆ. ಸರ್ಕಾರಿ ಆದೇಶಗಳಲ್ಲಿ ಜೀವರಾಜ್ ಹೆಸರು ಪ್ರಸ್ತಾಪ ಮಾಡಲಾಗುತ್ತಿದೆ. ನನ್ನ ಹಕ್ಕುಚ್ಯುತಿ ಆಗಿದೆ. ನನಗೆ ನೋವಾಗಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ ರಾಜೇಗೌಡ, ಸೋತ ಅಭ್ಯರ್ಥಿಗೆ ಶೃಂಗೇರಿ ಕ್ಷೇತ್ರದ ಶಾಸಕ ಎಂದು ಅನುದಾನ ಕೊಡುತ್ತಾರೆ. ನಾನು ಶಾಸಕ ಹೌದೇ ಅಲ್ಲವೇ ಎಂದು ತಾವು ತೀರ್ಮಾನ ಮಾಡಬೇಕು. ಇಲ್ಲವೆಂದರೆ ನಾನು ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇನೆ.
ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇನೆ ಎಂದ ರಾಜೇಗೌಡ ಬೆಂಬಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಬಂದರು. ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಒಂದು ಕೆಟ್ಟ ಸಂಪ್ರದಾಯ, ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ. ಬಜೆಟ್‌ಗೆ ಅನುಮೋದನೆ ನೀಡುವವರು ಯಾರು? ಚುನಾವಣೆಯಲ್ಲಿ ಸೋತವರು ಬಂದು ಚರ್ಚಿಸಿ ಬಜೆಟ್ ಪಾಸ್ ಮಾಡಿ ಕೊಡುತ್ತಾರ? ಸೋತವರ ಹೆಸರಿಗೆ ಅನುದಾನ ನೀಡಿ ನೀವು ಜನರ ಜತೆ ಹೋಗಿ ಕೆಲಸ ಮಾಡಿ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಇದನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು, ಇದು ಮುಂದುವರೆಯಲೂಬಾರದು. ಸೋತವರು ಮತ್ತೆ ಗೆದ್ದು ಬಂದು ಜನರ ಜತೆ ನಿಂತು ಕೆಲಸ ಮಾಡಲಿ. ನಾನು ಮುಖ್ಯಮಂತ್ರಿಯಾಗಿರುವಾಗ ಈ ರೀತಿ ಸೋತವರಿಗೆ ಅನುದಾನ ನೀಡಿದ ನೆನಪಿಲ್ಲ ಎಂದರು.
ಈ ವಿಚಾರ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ನಿರಾಕರಿಸಿದ ಸ್ಪೀಕರ್ ಕಾಗೇರಿ, ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಇದು ಶಾಸಕರ ಸವಲತ್ತುಗಳ ಉಲ್ಲಂಘನೆ ಆಗುವುದಿಲ್ಲ. ಪಾರ್ಲಿಮೆಂಟರಿ ಡೆಮಾಕ್ರಸಿ ಒಪ್ಪಿಕೊಂಡು ನಿಯಮ ರೂಪಿಸಿದಾಗ ಎಂಎಲ್‌ಎಗಳು ಎಕ್ಸಿಕ್ಯುಟಿವ್ ಆಗುತ್ತಾರೆ ಎಂದು ಇರಲಿಲ್ಲ. ನೇರವಾಗಿ ಭಾಗಿಯಾಗುತ್ತೇವೆ ಎಂದು ಭಾವಿಸಿರಲಿಲ್ಲ. ಕಾಲ ಕಳೆದಂತೆ ನಾವು ಬಾಗಿಯಾದೆವು. ಎಂಎಲ್‌ಎ ಕೇಳಿ ಅನುದಾನ ನೀಡಬೇಕು. ನೂರಕ್ಕೆ ನೂರು ಬಳಸುವುದಕ್ಕೆ ಆಗುವುದಿಲ್ಲ. ಯಾರೋ ಉದ್ಯಮಿಗಳು, ಸ್ವಾಮೀಜಿ ಬಂದು ಕೇಳಿದಾಗ ಅನುದಾನ ಕೊಡುತ್ತೇವೆ. ಯಾರೂ ಕಾಣದ ವ್ಯಕ್ತಿ ಸಾಯಿಬಾಬಾ ಟ್ರಸ್ಟ್‌ಗೆ ಡಾ. ಜಿ. ಪರಮೇಶ್ವರ್ ಒಂದು ಕೋಟಿ ರೂ. ಅನುದಾನ ನೀಡಿದ್ದರು. ನಾನು ಅದನ್ನು ತಡೆ ಹಿಡಿದಿದ್ದೆ. ನಾನು ವಿಪಕ್ಷಗಳಿಗೆ ಗೌರವ ಕೊಡುತ್ತೇನೆ. ಎಂಎಲ್‌ಎಗಳು ಎಂಎಲ್‌ಎಗಳೆ. ಅವರಿಗೆ ಅಪಮಾನ ಮಾಡುವ ಮಾತೇ ಇಲ್ಲ ಎಂದರು.
ಮತ್ತೆ ಮಾತನಾಡಿದ ಸ್ಪೀಕರ್ ಕಾಗೇರಿ, ಈ ವಿಷಯ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಘೋಷಣೆ ಮಾಡುತ್ತಿದ್ದೇನೆ. ಶಿಷ್ಟಾಚಾರದಲ್ಲಿ ಪಾಲಿಸಬೇಕಾದ ಎಲ್ಲ ನಿಯಮಾವಳಿಯನ್ನೂ ಪಾಲಿಸಬೇಕು. ರಾಜೇಗೌಡರು ಕೊಟ್ಟಿರುವ ವಿಷಯದಲ್ಲೂ ಕೂಡ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಮಾಧುಸ್ವಾಮಿ ಅವರು ಹೇಳಿದಂತೆ, ಅವರ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ ಬಂದಿದೆ ಎನ್ನುವುದನ್ನು ಬಿಟ್ಟರೆ ಬೇರೆ ಏನೂ ಆಗಿಲ್ಲ. ಈ ವ್ಯವಸ್ಥೆ ದೃಷ್ಟಿಯಿಂದ ಶಾಸಕರ ಗೌರವ ಹೆಚ್ಚಿಸುವ ಕೆಲಸ ಮಾಡಬೇಕು ಎಂದು.
ಈ ಮಾತನ್ನು ಒಪ್ಪದ ಶಾಸಕ ರಾಜೇಗೌಡ, ಸ್ಪೀಕರ್ ಪೀಠದ ಎದುರು ಸಾಗಿ ಪ್ರತಿಭಟನೆ ನಡೆಸಿದರು ಅಲ್ಲಿಂದ ಹೊರಕ್ಕೆ ಬರುವಂತೆ ಕಾಗೇರಿ ಸೂಚಿಸಿ, ಈ ವಿಚಾರವನ್ನು ಬಿಎಸಿ ಸಭೆಯಲ್ಲಿ ಚರ್ಚೆ ಮಾಡೋಣ ಎಂದರು.
ಮತ್ತೊಮ್ಮೆ ಮಧ್ಯಪ್ರವೇಶಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ್ ಅವರಿಗೆ ಹಿಂದೆ ನಾನು ಅನುದಾನ ನೀಡಿದ್ದೆನಾ ಎಂದು ಸ್ಪೀಕರ್ ಅವರನ್ನೇ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು. ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿ ನಡವಳಿಕೆಗೆ ಅವಕಾಶ ಇಲ್ಲ. ಇದು ರಾಜೇಗೌಡರಿಗೆ ಮಾತ್ರವಲ್ಲ, ಖಾದರ್ ಅವರಿಗೆ ಸೇರಿದಂತೆ ಬಹಳಷ್ಟು ಜನರಿಗೆ ಈ ರೀತಿ ಅನ್ಯಾಯ ಆಗಿದೆ. ಮಾಧುಸ್ವಾಮಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಭಾವಿಸಿದ್ದೇನೆ, ಅವರು ಹಿರಿಯ ಸದಸ್ಯರು ಕೂಡ ಹೌದು. ಇದನ್ನು ಪ್ರಿವಿಲೇಜ್ ಕಮಿಟಿಗೆ ಕಳಿಸುವ ಬದಲು ಇನ್ನು ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಸರ್ಕಾರ ಉತ್ತರ ನೀಡಲಿ. ಈಗಾಗಲೇ ಸೋತ ಅಭ್ಯರ್ಥಿಗಳ ಹೆಸರಿನಲ್ಲಿ ನೀಡಿರುವ ಅನುದಾನವನ್ನು ವಾಪಸ್ ಪಡೆಯಿರಿ. ನೀವು ಅನುದಾನ ನೀಡುತ್ತೀರಿ ಎಂಬ ನಿರೀಕ್ಷೆ ಕೂಡ ನಮಗೆ ಇಲ್ಲ. ನೀವು ಅನುದಾನವನ್ನೇ ಕೊಡದಿದ್ದರೂ ಪರವಾಗಿಲ್ಲ ಆದರೆ ಈ ರೀತಿ ಶಾಸಕರಿಗೆ ಅಗೌರವ ಮಾಡಬೇಡಿ. ಶಾಸಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸಭಾಧ್ಯಕ್ಷರ ಕರ್ತವ್ಯ. ಹಿಂದೆ ಹೀಗೆ ಆಗಿತ್ತು ಎಂದು ಹೇಳುವುದು ಸರಿಯಲ್ಲ, ಇದೊಂದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಈ ಸಂಪ್ರದಾಯ ಇಲ್ಲಿಗೆ ಕೊನೆಯಾಗಬೇಕು.
ಹಾಲಿ ಶಾಸಕರಿಗೆ 100 ಕೋಟಿ ರೂ. ಅನುದಾನ ಕೊಟ್ಟು, ಅದೇ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೆ ಇನ್ನು 100 ಕೋಟಿ ಅನುದಾನ ಬಿಡುಗಡೆ ಮಾಡಲು ಅವಕಾಶ ಇದೆಯಾ? ಸೋತ ಅಭ್ಯರ್ಥಿ ಬಂದು ಬಿಲ್ ಮೇಲೆ ಚರ್ಚೆ ಮಾಡುತ್ತಾರ? ಬಜೆಟ್ ಅನ್ನು ಪಾಸ್ ಮಾಡಿ ಕೊಡುತ್ತಾರ? ಮಾಡಿಕೊಡೋಕೆ ಬರುವುದಾದರೆ ಸರ್ಕಾರ ಅವರಿಂದಲೇ ಬಜೆಟ್‌ಗೆ ಅನುಮೋದನೆ ಪಡೆಯಲಿ ಎಂದರು.
ಇದನ್ನೂ ಓದಿ | ಶೃಂಗೇರಿ ಶಾಸಕ-ಮಾಜಿ ಶಾಸಕರ ಆಸ್ತಿ ವಾಗ್ವಾದ ಧರ್ಮಸ್ಥಳದ ಬಾಗಿಲಿಗೆ: ಆಣೆ ಮಾಡೋಣ ಎಂದ ರಾಜೇಗೌಡ