Site icon Vistara News

Tiger Nail : ಹುಲಿಯುಗುರು ಇರುವ ಡಾಲರ್‌ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಅರೆಸ್ಟ್‌!

priests arrested in Chikkamagaluru

ಚಿಕ್ಕಮಗಳೂರು: ಹುಲಿಯ ಉಗುರು (Tiger Nail) ರಾಜ್ಯದಲ್ಲಿ ರಾದ್ಧಾಂತವನ್ನೇ ಸೃಷ್ಟಿ ಮಾಡಿದೆ. ಬಿಗ್‌ ಬಾಸ್‌ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur santhosh Arrest) ಅವರನ್ನು ದೊಡ್ಮನೆಗೇ ಹೋಗಿ ಅರಣ್ಯಾಧಿಕಾರಿಗಳು ಅರೆಸ್ಟ್‌ ಮಾಡಿದ ಬಳಿಕ ಸಾರ್ವಜನಿಕರು ಅರಣ್ಯಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ಕೊಡಲು ಆರಂಭ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಕೂಡಾ ತಕ್ಷಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇದರ ಫಲವಾಗಿ ನಾಲ್ವರು ಸೆಲೆಬ್ರಿಟಿಗಳ ಮನೆ ಮೇಲೆ ಬುಧವಾರ ದಾಳಿ ನಡೆದಿದೆ. ಅದೇ ವೇಳೆ ಚಿಕ್ಕಮಗಳೂರಿನಲ್ಲಿ (Chikkamagaluru News) ಇಬ್ಬರು ಅರ್ಚಕರ ಬಂಧನವೂ (Two priests arrested) ನಡೆದಿದೆ.

ಹುಲಿ ಉಗುರಿನ ಡಾಲರ್‌ ಹಾಕಿಕೊಂಡಿದ್ದ ಚಿಕ್ಕಮಗಳೂರಿನ ಇಬ್ಬರು ಅರ್ಚಕರನ್ನು ಬುಧವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದು, ಅವರಿಂದ ಮೂರು ಹುಲಿಯುಗುರಿನ ಪೆಂಡೆಂಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರಿನ ಬಹು ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಅವರೇ ಬಂಧನಕ್ಕೆ ಒಳಗಾದವರು. ಇವರಿಂದ ಮೂರು ಹುಲಿ ಉಗುರನ್ನು ಪಡೆದುಕೊಳ್ಳಲಾಗಿದೆ. ಇನ್ನಿಬ್ಬರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಇಬ್ಬರು ಅರ್ಚಕರು ಹುಲಿಯುಗುರಿನ ಪೆಂಡೆಂಟ್‌ ಧರಿಸುತ್ತಿದ್ದಾರೆ ಎಂದು ಈಮೇಲ್‌ ಮೂಲಕ ದೂರು ನೀಡಲಾಗಿತ್ತು. ಇದನ್ನು ಪರಿಗಣಿಸಿದ ಬಾಳೆಹೊನ್ನೂರು ವಲಯ ಅರಣ್ಯ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಮೇಲ್ನೋಟಕ್ಕೆ ಅದು ಹುಲಿಯುಗುರು ಎಂದು ತಿಳಿಯುತ್ತಿದ್ದಂತೆಯೇ ಅವರು ಪ್ರಕರಣ ದಾಖಲಿಸಿಕೊಂಡು ಬಂಧನವನ್ನೂ ಮಾಡಿದ್ದಾರೆ.

ತುಂಗಾ ತೀರದಲ್ಲಿರುವ ಖಾಂಡ್ಯ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಮಾರ್ಕಾಂಡೇಶ್ವರ ದೇಗುಲ ಇದಾಗಿದ್ದು, ಸಾಕಷ್ಟು ಭಕ್ತರು ಬರುತ್ತಾರೆ. ಈ ಅರ್ಚಕರು ಕೂಡಾ ಸಾಕಷ್ಟು ಜನಪ್ರಿಯರು.

ಇವರು ತಮ್ಮ ಅಜ್ಜ-ಮುತ್ತಜ್ಜನ ಕಾಲದಿಂದಲೇ ಹುಲಿ ಉಗುರನ್ನು ಹೊಂದಿದ್ದು, ಪೆಂಡೆಂಟ್‌ ಆಗಿ ಈಗಲೂ ಬಳಸುತ್ತಿದ್ದರು. ಆದರೆ, ಈಗ ವರ್ತೂರು ಸಂತೋಷ್‌ ಪ್ರಕರಣ ಎದ್ದು ಬಂದ ಹಿನ್ನೆಲೆಯಲ್ಲಿ ಎಲ್ಲ ಕಡೆಯಿಂದಲೂ ಅವರ ಮೇಲೆ ಕಣ್ಣು ಬಿದ್ದಿದೆ.

ಈ ಹುಲಿಯುಗುರಿನ ಕಾಲಮಾನ, ಅದು ಅವರ ಕೈಗೆ ಸಿಕ್ಕಿದ ಬಗೆಗಳನ್ನು ಅರಣ್ಯಾಧಿಕಾರಿಗಳು ತನಿಖೆಗೆ ಒಳಪಡಿಸಲಿದ್ದಾರೆ. ಮೂಲತಃ ಇದನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಒಳಪಡಿಸಿ ಅದು ನಿಜಕ್ಕೂ ಹುಲಿಯುಗುರೇ ಎಂದು ನೋಡಬೇಕಾಗಿದೆ.

ಇದನ್ನೂ ಓದಿ : Tiger Nail: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ: ತಾಯಿಯ ಕಾಣಿಕೆ ಕೈತಪ್ಪಿದ್ದಕ್ಕೆ ನಟ ಜಗ್ಗೇಶ್‌ ಬೇಸರ

ಇಂದು ಸಂತೋಷ್‌ ಅರ್ಜಿ ವಿಚಾರಣೆ

ಈ ನಡುವೆ ಬಿಗ್‌ ಬಾಸ್‌ ಮನೆಯಿಂದ ಕಳೆದ ಭಾನುವಾರ ಬಂಧಿತರಾದ ಕೃಷಿಕ ವರ್ತೂರು ಸಂತೋಷ್‌ ಅವರ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಗರದ ನ್ಯಾಯಾಲಯದಲ್ಲಿ ನಡೆಯಲಿದೆ. ಕಳೆದ ಭಾನುವಾರ ಬಂಧಿತರಾದ ಅವರನ್ನು ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದರ ನಡುವೆ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.

ಸಂತೋಷ್‌ ಅವರ ಬಂಧನಕ್ಕೆ ಸಂಬಂಧಿಸಿ ಪ್ರಕ್ರಿಯೆಗಳನ್ನು ಸರಿಯಾಗಿ ನಡೆಸಿಲ್ಲ. ಅವರಿಗೆ ಮೊದಲು ನೋಟಿಸ್‌ ಕೊಟ್ಟು, ಅದು ಹುಲಿಯುಗುರೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಬಂಧನಕ್ಕೆ ಅವಸರ ಮಾಡಲಾಗಿದೆ ಎಂದು ವಕೀಲರು ವಾದಿಸುವ ಸಾಧ್ಯತೆಗಳಿವೆ.

Exit mobile version