Site icon Vistara News

Transfer Scam : ನಂಗೆ ಏನಾದ್ರೂ ಆದ್ರೆ ಕಡೂರು MLA ಕಾರಣ; ವರ್ಗಾವಣೆ ವಿರುದ್ಧ ಸಿಡಿದ Lady Constable

Kadur police constable transfer

ಚಿಕ್ಕಮಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ (Transfer Scam) ನಡೆಯುತ್ತಿದೆ ಎಂಬ ಆರೋಪಗಳು ಜೋರಾಗಿರುವ ನಡುವೆಯೇ ರಾಜಕಾರಣಿಗಳು ದ್ವೇಷದಿಂದ ವರ್ಗಾವಣೆಗೆ (Political vengence) ಒತ್ತಡ ಹೇರುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸಾಮಾನ್ಯವಾಗಿ ರಾಜಕಾರಣಿಗಳು ಎಸ್‌ಐ, ಪಿಎಸ್‌ಐ, ತಹಸೀಲ್ದಾರ್‌ ಮಟ್ಟದ ಅಧಿಕಾರಿಗಳ ವರ್ಗಾವಣೆ ಅಥವಾ ತಮಗೆ ಬೇಕಾದವರನ್ನು ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಕಾನ್‌ಸ್ಟೇಬಲ್‌, ಪಿಡಿಒ, ಬಸ್‌ ಚಾಲಕ, ಕಂಡಕ್ಟರ್‌ಗಳನ್ನು ವರ್ಗ ಮಾಡಿಸುವ ಹಂತಕ್ಕೂ ಬಂದಿದೆ! ಚಿಕ್ಕಮಗಳೂರಿನಲ್ಲಿ ಕೂಡಾ ಇಂಥಹುದೊಂದು (Constable transfer) ಆರೋಪ ಕೇಳಿಬಂದಿದೆ.

ಕಡೂರು ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಲೇಡಿ ಕಾನ್‌ಸ್ಟೇಬಲ್‌ (Lady Constable transfer) ಒಬ್ಬರು ತಮ್ಮ ವರ್ಗಾವಣೆ ವಿರೋಧಿಸಿ ಸಮರಕ್ಕೆ ಇಳಿದಿದ್ದಾರೆ. ತಮ್ಮ ವರ್ಗಾವಣೆಗೆ ಕಡೂರಿನ ಕಾಂಗ್ರೆಸ್‌ ಶಾಸಕ ಕೆ.ಎಸ್‌. ಆನಂದ್‌ (Kadur MLA KS Anand) ಅವರೇ ಕಾರಣ ಎಂದು ಕಾನ್‌ಸ್ಟೇಬಲ್‌ ಲತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಂತ ಅವರು ಹೊರಗೆ ಬಂದು, ಬೀದಿಗಿಳಿದು ಪ್ರತಿಭಟನೆ ನಡೆಸಿಲ್ಲ. ತಮ್ಮ ವಾಟ್ಸ್‌ ಆಪ್‌ ಸ್ಟೇಟಸ್‌ ಮೂಲಕ ಮೌನ ಸಮರ ಸಾರಿದ್ದಾರೆ.

ʻʻಕಡೂರು ಎಂ.ಎಲ್.ಎ.ಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದ್ರು ತೊಂದರೆ ಆದ್ರೆ ಎಂ.ಎಲ್.ಎ.ನೇ ಕಾರಣʼʼ ಎಂದು ವಾಟ್ಸ್‌ ಆಪ್‌ ಸ್ಟೇಟಸ್‌ನಲ್ಲಿ ಎಂ.ಎಲ್.ಎ. ವಿರುದ್ಧ ಸಮರಕ್ಕಿಳಿದಿದ್ದಾರೆ.

ಲತಾ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಡೂರಿನಿಂದ ತರೀಕೆರೆಗೆ ವರ್ಗಾವಣೆ ಮಾಡಲಾಗಿತ್ತು. ನನ್ನನ್ನು ಯಾಕೆ ವರ್ಗಾವಣೆ ಮಾಡುತ್ತಿದ್ದೀರಿ ಎಂದು ಲತಾ ಅವರು ಸಬ್‌ ಇನ್ಸ್‌ಪೆಕ್ಟರ್‌ ಅವರನ್ನು ಪ್ರಶ್ನೆ ಮಾಡಿದ್ದರು. ಅವರ ಉತ್ತರದಿಂದ ತೃಪ್ತರಾಗದ ಅವರು ಅವರ ಜತೆಗೆ ಜಗಳವಾಡಿದ್ದರು.

ಲತಾ ಅವರಿಗೆ ಇದೊಂದು ದ್ವೇಷದ ವರ್ಗಾವಣೆ ಎಂದು ಲತಾ ಅವರಿಗೆ ಅನಿಸಿದೆ. ಅವರಿಗೆ ಈ ಸಂಶಯ ಬರಲು ಕಾರಣವಾದ ಅಂಶಗಳು ಯಾವುದು ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಇದು ದ್ವೇಷದ ವರ್ಗಾವಣೆ ಎಂದು ಶಾಸಕ ಆನಂದ್‌ ವಿರುದ್ಧ ಅಸಮಾಧಾನವನ್ನು ತೋರ್ಪಡಿಸಿದ್ದಾರೆ.

ಲತಾ ಅವರು ವಾಟ್ಸ್‌ ಆಪ್‌ನಲ್ಲಿ ಹಾಕಿಕೊಂಡಿರುವ ಸ್ಟೇಟಸ್‌ ಕಡೂರಿನಲ್ಲಿ ಭಾರಿ ಸದ್ದು ಮಾಡಿದೆ. ಇದನ್ನು ಗಮನಿಸಿದ ಎಸ್‌ಪಿ ಅವರು ಕಾನ್‌ಸ್ಟೇಬಲ್‌ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ ಮತ್ತು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ. ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Transfer controversy ; ಜೆಡಿಎಸ್‌ ಪರ ಲೈನ್‌ಮ್ಯಾನ್‌ ವರ್ಗ; ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆರೋಪ

ರಾಜ್ಯದಲ್ಲಿ ಕೆಲವು ಶಾಸಕರ ಮೇಲೆ ವರ್ಗಾವಣೆ ದಂಧೆ ಮತ್ತು ದ್ವೇಷದ ವರ್ಗಾವಣೆಯ ಆರೋಪಗಳಿವೆ. ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಬಸ್‌ ಚಾಲಕರೊಬ್ಬರನ್ನು ವರ್ಗಾಯಿಸುವ ಮೂಲಕ ಸುದ್ದಿ ಮಾಡಿದ್ದರು. ಇನ್ನು ಕೆಲವು ಶಾಸಕರು ತಮಗೆ ಕನಿಷ್ಠ ಕೆಲವು ವರ್ಗಾವಣೆಗೂ ಅವಕಾಶ ಕೊಡುತ್ತಿಲ್ಲ ಎಂಬ ನೋವನ್ನೂ ತೋಡಿಕೊಳ್ಳುತ್ತಿದ್ದಾರೆ. ಇದೀಗ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್‌ ಮತ್ತು ಜೆಡಿಎಸ್‌ನ ವೈಎಸ್‌ವಿ ದತ್ತಾ ಅವರನ್ನು ಸೋಲಿಸಿ ಗೆದ್ದ ಆನಂದ್‌ ಅವರ ಮೇಲೆ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.

Exit mobile version