Site icon Vistara News

Jain muni Murder: ಕಣ್ಮರೆಯಾದ ಜೈನಮುನಿ ಹತ್ಯೆಯಾಗಿರುವುದು ಪತ್ತೆ, ಇನ್ನೂ ಸಿಗದ ಶವ, ಕಾರಣ ನಿಗೂಢ

Nandiparvata Jain Basadi missing

ಚಿಕ್ಕೋಡಿ: ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿ ಬರ್ಬರ ಹತ್ಯೆಯಾಗಿರುವುದು (Jain muni Murder) ಗೊತ್ತಾಗಿದೆ. ಆಪ್ತರೇ ಕೊಲೆ (murder case) ಮಾಡಿರುವುದು ಗೊತ್ತಾಗಿದ್ದು, ಹತ್ಯೆಗೆ ಕಾರಣ ಹಾಗೂ ಶವ ಇನ್ನೂ ಪತ್ತೆಯಾಗಬೇಕಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಬಳಿಕ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ಅವರು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು‌ ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿದೆ.

ತನಿಖೆ ಸಂದರ್ಭದಲ್ಲಿ ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಹತ್ಯೆ ಮಾಡಿ ಶವ ಎಲ್ಲಿ ಬಿಸಾಕಿದ್ದೇವೆ ಎಂದು ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು. ಒಂದು ಬಾರಿ ಕೊಲೆ ಮಾಡಿ ಮೃತದೇಹ ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಇಂದು ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯ ಮತ್ತೆ ನಡೆಯಲಿದೆ.

ಇದನ್ನೂ ಓದಿ: Missing Case : ಇದ್ದಕ್ಕಿದ್ದಂತೆ ಬಸದಿಯಿಂದ ಜೈನ ಮುನಿ ನಾಪತ್ತೆ! ಭಕ್ತರಲ್ಲಿ ಆತಂಕ

Exit mobile version