ಚಿಕ್ಕೋಡಿ: ಸೇನೆ ಸೇರುವ ಕನಸು (Dream of joining Military) ಕಾಣುತ್ತಿದ್ದು, ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದ ಯುವಕನೊಬ್ಬ ತನ್ನ ಕನಸು ಈಡೇರುತ್ತಿಲ್ಲ ಎಂಬ ಬೇಸರದಿಂದ ಜೀವನವನ್ನೇ ಕೊನೆಗೊಳಿಸಿಕೊಂಡ (Self Harming) ಘಟನೆ ನಿಪ್ಪಾಣಿ ತಾಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ (Belagavi News) ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದ ಯುವಕ ಅಪ್ಪಾಸೋ ಶಿವಾಜಿ ಪಣದೆ (24) ಆತ್ಮಹತ್ಯೆ ಮಾಡಿಕೊಂಡವನು.
ಅಪ್ಪಾಸೋ ಶಿವಾಜಿ ಪಣದೆ ಸೇನೆಗೆ ಸೇರುವ ಕನಸು ಕಟ್ಟಿಕೊಂಡಿದ್ದ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿದ್ದ ಎನ್ನಲಾಗಿದೆ. ಕಳೆದ 2 ವರ್ಷಗಳಿಂದ ಮಹಾರಾಷ್ಟ್ರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆತನಿಗೆ ಇನ್ನೂ ಸೇನೆ ಸೇರುವ ಅವಕಾಶ ಸಿಕ್ಕಿರಲಿಲ್ಲ.
ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರದಿಂದ ಆತ ನಿಪ್ಪಾಣಿಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ನಿಪ್ಪಾಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Agniveer Recruitment: ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಏನಿದು?
ಕಳೆದ ಕೆಲವು ವರ್ಷಗಳಿಂದ ಭಾರತೀಯ ಸೇನೆ ಸೇರ್ಪಡೆಯ ಅವಕಾಶಗಳು ಹೆಚ್ಚಾಗಿವೆ ಮತ್ತು ಸರಳವಾಗಿದೆ. ಅದರಲ್ಲೂ ಕಳೆದ ವರ್ಷದಿಂ ಅಗ್ನಿವೀರರ ನೇಮಕಾತಿ ನಡೆಯುತ್ತಿದ್ದು, ಎಲ್ಲ ಕಡೆ ಸಂದರ್ಶನ ಮತ್ತು ತರಬೇತಿಗಳು ನಡೆಯುತ್ತಿವೆ. ಅಪ್ಪಾಸೋ ಶಿವಾಜಿಗೆ ಈ ಕುರಿತ ಮಾಹಿತಿಗಳ ಕೊರತೆ ಇತ್ತೋ ಅಥವಾ ಅವರ ದೇಹಪ್ರಕೃತಿ ಮತ್ತಿತರ ಸಂಗತಿಗಳಿಂದಾಗಿ ಅವಕಾಶ ಸಿಗಲಿಲ್ಲವೋ ಗೊತ್ತಿಲ್ಲ. ಅಂತೂ ಸೈನಿಕನಾಗುವ ಕನಸು ಈಡೇರದ ಬೇಸರದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಕಾಫಿ ತೋಟದ ಮ್ಯಾನೇಜರ್ ಮೃತದೇಹ ಕೆರೆಯಲ್ಲಿ ಪತ್ತೆ, ಕೊಲೆ ಶಂಕೆ
ಚಿಕ್ಕಮಗಳೂರು: ಇಲ್ಲಿನ ಕಾಫಿ ತೋಟದ (Coffee Plantation) ಮ್ಯಾನೇಜರ್ ಒಬ್ಬರ ಮೃತದೇಹ (Death Case) ಪ್ಲಾಂಟೇಷನ್‌ನ ಕೆರೆಯಲ್ಲಿ ಪತ್ತೆಯಾಗಿದ್ದು ಕುಟುಂಬಿಕರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಳೆಹೊನ್ನೂರು ಸಮೀಪದ ಖಾನ್ಗೋಡು ನಲ್ಲಿ ಘಟನೆ ನಡೆದಿದೆ. ಮ್ಯಾನೇಜರ್ ಕಾಶಿ ಬೊಪ್ಪಯ್ಯ (59) ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮ್ಯಾನೇಜರ್ ಚಪ್ಪಲಿ, ಪರ್ಸ್ ಕೆರೆಯ ದಡದಲ್ಲಿ ಪತ್ತೆಯಾಗಿದೆ.
ಕಾಶಿ ಬೊಪ್ಪಯ್ಯ ಅವರು ಕೊಡಗು ಸಮೀಪದ ಟಿ ಶೆಟ್ಟಿಗೇರಿ ಗ್ರಾಮದವರಾಗಿದ್ದು, ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಮನೆಯವರು ದೂರು ನೀಡಿದ್ದರು. ಇದೀಗ ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೊಂದು ಅನುಮಾನಾಸ್ಪದ ಸಾವು ಎಂದು ಮನೆಯವರು ಹೇಳಿದ್ದಾರೆ. ಅವರಿಗೆ ಅತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಕಾರಣಗಳು ಇರಲಿಲ್ಲ. ಅವರನ್ನು ಯಾರೋ ಕೊಲೆ ಮಾಡಿರಬಹುದು ಎಂಬ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದಾರೆ.