Site icon Vistara News

ಯಮಕನಮರಡಿಯಲ್ಲಿ ಹುಟ್ಟುಹಬ್ಬ ಪಾಲಿಟಿಕ್ಸ್‌: ಬಿಜೆಪಿ ಒಗ್ಗಟ್ಟಿಗೆ ಭಂಗ?

chikkodi Lakshman savadi umesh katti

ಮಂಜುನಾಥ ಹುಡೇದ, ಚಿಕ್ಕೋಡಿ
ಐದು ದೀಪಗಳನ್ನೂ ಸೇರಿಸಿ ದೀಪ ಹಚ್ಚಿದ್ದೇನೆ, ಅದಕ್ಕೇ ಇಷ್ಟೊತ್ತು ಉರಿಯುತ್ತಿದೆ. ನಾವೂ ಮುಂಬರುವ ಚುನಾವಣೆಗೆ ಇದೇ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ಒಂದೆರಡು ದಿನವೂ ಬಾಳಿಕೆ ಬರಲಿಲ್ಲ. ಕಾಂಗ್ರೆಸ್‌ ವಿರುದ್ಧ ಒಗ್ಗಟ್ಟಿನಿಂದ ಸ್ಪರ್ಧಿಸಬೇಕಿದ್ದ ಬಿಜೆಪಿ ಮನೆಯಲ್ಲಿ ಈಗ ಎರಡು ಬಾಗಿಲಾಗಿದೆ.

ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನಕ್ಕೇರಿದ ಮಾರುತಿ ಅಷ್ಟಗಿಯವರ ಕೈ ಬಲಪಡಿಸಬೇಕು, ಅವರಿಗೆ ಶಕ್ತಿ ತುಂಬಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು.

ಜನಸಾಗರದ ಮಧ್ಯೆ ಹುಟ್ಟುಹಬ್ಬ

ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಪರಾರ್ಜಿತ ಅಭ್ಯರ್ಥಿ ಮಾರುತಿ ಅಷ್ಟಗಿ ಪರವಾಗಿ ಆಯೋಜನೆ ಮಾಡಲಾದ ಅಭಿನಂದನಾ ಸಮಾವೇಶ ಸಮಾರಂಭದಲ್ಲಿ ಸವದಿಯವರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ನಾನು ಇಂದಿನ ಕಾರ್ಯಕ್ರಮದ ಐದು ದೀಪಗಳನ್ನು ಕೂಡಿಸಿ ಎಣ್ಣೆ ಹೆಚ್ಚಿದ್ದೇನೆ. ಹೀಗಾಗಿ ಹಣತೆಯಲ್ಲಿನ ಎಣ್ಣೆ ಮುಗಿಯುವವರೆಗೂ ಸಹ ದೀಪ ಉರಿಯಿತು. ಹಾಗೆಯೇ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ನಾವೂ ಒಗ್ಗಟ್ಟಿನಿಂದ ಇದ್ದೇವೆ. ನಿಮ್ಮಲ್ಲಿ ಗೊಂದಲಗಳು ಬೇಡ ಎಂದು ಸವದಿ ಹಾಗೂ ಸಚಿವ ಉಮೇಶ್ ಕತ್ತಿ ಒಗ್ಗಟ್ಟಿನ ಮಂತ್ರ ಜಪಿಸಿದ್ದರು.

ಇದನ್ನೂ ಓದಿ | ನಾನು 65 ವರ್ಷದ ಯುವಕ, 75ರವರೆಗೂ Young: CM ಆಗುವ ಅವಕಾಶವಿದೆ ಎಂದ ಉಮೇಶ್‌ ಕತ್ತಿ

ಇದರ ಬೆನ್ನಲ್ಲೇ ಈಗ ಯಮಕನಮರಡಿ ಕ್ಷೇತ್ರದಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮವೊಂದು ಈ ಒಗ್ಗಟ್ಟಿಗೆ ಭಂಗ ತರುವ ಲಕ್ಷಣಗಳು ಕಾಣುತ್ತಿವೆ. ಗುತ್ತಿಗೆದಾರ ಬಸವರಾಜ್ ಉಂದ್ರಿ ಎನ್ನುವವರ ಹುಟ್ಟು ಹಬ್ಬದ ಕಾರ್ಯಕ್ರಮ ಆಯೋಜನೆ ಮಾಡಿ ಬಿಜೆಪಿ ಪಕ್ಷಕ್ಕೂ ಹಾಗೂ ಪಕ್ಷದ ವರಿಷ್ಠರಿಗೂ ತಮ್ಮ ಬೆಂಬಲ, ಶಕ್ತಿಯ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಈ ಬಾರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ಬಸವರಾಜ್ ಅವರೂ ಆಕಾಂಕ್ಷಿ ಎಂದು ಬಸವರಾಜ್ ಬೆಂಬಲಿಗರು ಹೇಳುತ್ತಿದ್ದಾರೆ.

ತಮ್ಮನ ಮಗನಿಂದಲೇ ಭಿನ್ನ ಧ್ವನಿ

ನಾನು ಹುಕ್ಕೇರಿಯಲ್ಲಿ ಗೆಲ್ಲಲ್ಲಿ, ಬಿಡಲಿ, ಯಮಕನಮರಡಿಯಲ್ಲಿ ಬಿಜೆಪಿ ಧ್ವಜ ಹಾರಿಸಿ ಈ ಕ್ಷೇತ್ರದ ಶಾಸಕರನ್ನು ಸೋಲಿಸುತ್ತೇನೆ ಎಂದು ಸತೀಶ್‌ ಜಾರಕಿಹೊಳಿ ವಿರುದ್ಧ ಉಮೇಶ್ ಕತ್ತಿ ಅಬ್ಬರಿಸಿದ್ದರು. ಆದರೆ ಅವರ ತಮ್ಮನ ಮಗ ಅಂದರೆ, ರಮೇಶ್ ಕತ್ತಿಯವರ ಮಗ ಪೃಥ್ವಿ ಕತ್ತಿ ಭಿನ್ನ ಧ್ವನಿ ಹೊರಡಿಸಿದ್ದಾರೆ. ತಮ್ಮ ದೊಡ್ಡಪ್ಪ ಉಮೇಶ್‌ ಕತ್ತಿ ಭಾಗವಹಿಸಿದ ಮಾರುತಿ ಅಷ್ಟಗಿಯವರ ಕಾರ್ಯಕ್ರಮದಲ್ಲಿ ಭಾಗವಹಿಸದ ಪೃಥ್ವಿ, ಮಾರನೇ ದಿನ ಆಯೋಜನೆ ಮಾಡಲಾಗಿದ್ದ ಬಸವರಾಜ್ ಉಂದ್ರಿಯವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅಪ್ಪ ಮಕ್ಕಳ ರಾಜಕೀಯದಾಟದ ಬಗ್ಗೆ ಯಮಕನಮರಡಿ ಕ್ಷೇತ್ರದ ಜನ ಗೊಂದಲಕ್ಕೆ ಈಡಾಗುವಂತೆ ಮಾಡಿದೆ.

ಇದನ್ನೂ ಓದಿ | Amrit Mahotsav | ಚಿಕ್ಕೋಡಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಸಮ್ಮುಖದಲ್ಲಿ ಪಾದಯಾತ್ರೆ

Exit mobile version