Site icon Vistara News

Child death : ಅಯ್ಯೋ ದೇವ್ರೆ! ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ತಗುಲಿ 8 ತಿಂಗಳ ಮಗು ಸಾವು

Child death

ಕಾರವಾರ: ಮೊಬೈಲ್‌ ಚಾರ್ಜರ್‌ನಿಂದ (Mobile Charger) ಶಾಕ್‌ ತಗುಲಿ ಎಂಟು ತಿಂಗಳ ಪುಟ್ಟ ಮಗುವೊಂದು (8 month old Child) ಪ್ರಾಣ ಕಳೆದುಕೊಂಡ (Child Death) ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ಎಲ್ಲೆಂದರಲ್ಲಿ ಮೊಬೈಲ್‌ ಚಾರ್ಜರ್‌ಗಳನ್ನು ನೇತು ಹಾಕುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಕಾರವಾರದ (karwar News) ಸಿದ್ಧರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 8 ತಿಂಗಳ ಹೆಣ್ಣು ಮಗು ಸಾನಿಧ್ಯ ಸ್ಥಳದಲ್ಲೇ ಮೃತಪಟ್ಟಿದೆ. ಸಿದ್ದರ ಗಾಮದ ನಿವಾಸಿಯಾಗಿರುವ ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ಅವರ ಮಗು ಈ ಸಾನಿಧ್ಯ.

ಸಾನಿಧ್ಯಳನ್ನು ಮನೆಯ ಚಾವಡಿಯಲ್ಲಿ ಮಲಗಿಸಲಾಗಿತ್ತು. ಈಗಷ್ಟೇ ಹರಿದಾಡುತ್ತಿರುವ ಮಗು ಆಚೀಚೆ ಹರಿದಾಡಿದೆ. ಆಗ ಅದಕ್ಕೆ ಪಕ್ಕದಲ್ಲೇ ನೇತಾಡುತ್ತಿದ್ದ ವಸ್ತುವೊಂದು ಕಂಡಿದೆ. ಮನೆಯಲ್ಲಿ ಯಾರೋ ಮೊಬೈಲ್‌ನ್ನು ಚಾರ್ಜ್‌ಗೆ ಹಾಕಿ ಬಳಿಕ ಮೊಬೈಲನ್ನು ತೆಗೆದು ಚಾರ್ಜರನ್ನು ಹಾಗೆಯೇ ಬಿಟ್ಟು ಹೋಗಿದ್ದರು. ಸ್ವಿಚ್‌ ಕೂಡಾ ಆಫ್‌ ಮಾಡಲಾಗಿರಲಿಲ್ಲ.

ಮಗು ಅಲ್ಲೇ ನೇತಾಡುತ್ತಿದ್ದ ಚಾರ್ಜರ್‌ನ ತುದಿಯನ್ನು ಬಾಯಿಗೆ ಹಾಕಿಕೊಂಡಿದೆ. ಚಾರ್ಜರ್‌ನಲ್ಲಿ ಹರಿದು ಬರುವ ಸಣ್ಣ ಪ್ರಮಾಣದ ವಿದ್ಯುತ್‌ ಮಗುವಿಗೆ ಆಘಾತವನ್ನು ಉಂಟು ಮಾಡಿದೆ. ಆಘಾತಕ್ಕೆ ಒಳಗಾದ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.

ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ : ‌Road Accident : ಬೈಕ್‌ಗೆ ಬಸ್‌ ಡಿಕ್ಕಿ; ದೇವರ ದರ್ಶನ ಮಾಡಿ ಬಂದ ಇಬ್ಬರು ಸವಾರರು ರಸ್ತೆಯಲ್ಲೇ ಬಿದ್ದು ಮೃತ್ಯು

ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಸಾವು

ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಇತ್ತೀಚೆಗೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಕುಣಿಕೇರಿ ಗ್ರಾಮದಲ್ಲಿ ನಡೆದಿತ್ತು. ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಾನಿತ (9) ಮೃತಪಟ್ಟ ಬಾಲಕಿ. ಹೆತ್ತವರು ಸೀರೆಯಲ್ಲಿ ಹಾಕಿಕೊಟ್ಟಿದ್ದ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಅದು ಕುತ್ತಿಗೆಗೆ ಬಿಗಿದುಕೊಂಡಿದೆ.

ಬಸವರಾಜು ಮತ್ತು ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ. ಮಗಳಿಗೆ ಆಡಲೆಂದು ಮನೆಯೊಳಗೆ ಸೀರೆಯಿಂದ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಆಂತೆಯೇ ಸಾನಿತಾ ಅದರಲ್ಲಿ ಕುಳಿತು ಆಡುತ್ತಿದ್ದಳು. ಜೋಕಾಲಿ ಆಡುತ್ತಿದಾಗ ಸೀರೆ ಬಿಗಿಯಾಗಲು ಆರಂಭಿಸಿದ್ದು ಸಾನಿತಾಳ ಕುತ್ತಿಗೆಗೆ ಏಕಾಏಕಿ ಬಿಗಿದುಕೊಂಡಿದೆ. ಸಣ್ಣ ಬಾಲಕಿಯಾಗಿರುವ ಆಕೆಗೆ ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರಗಟ್ಟಿ ಮೃತಪಟ್ಟಿದ್ದಳು.

ಒಟ್ಟಾರೆಯಾಗಿ ಮಕ್ಕಳ ವಿಚಾರದಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಅವಘಡಗಳು ಸಂಭವಿಸುತ್ತಲೇ ಇರುತ್ತದೆ.

Exit mobile version