Site icon Vistara News

Child death : 8 ತಿಂಗಳ ಮಗು ಆಸ್ಪತ್ರೆಯಲ್ಲಿ ಸಾವು, ಗಂಡನೇ ಕಾರಣ ಎಂದು ಆಪಾದಿಸಿದ ಪತ್ನಿ

Child death

ಮಂಗಳೂರು: ಜ್ವರದಿಂದ ಬಳಲುತ್ತಿದ್ದ ಎಂಟು ತಿಂಗಳ ಮಗುವೊಂದು (Child death) ಜುಲೈ 1ರಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ (Wenlock Hospital mangalore) ಮೃತಪಟ್ಟಿತ್ತು. ಈ ಮಗುವಿನ ಸಾವಿಗೆ ನನ್ನ ಗಂಡನೇ ಕಾರಣ ಎಂದು ಮಹಿಳೆಯೊಬ್ಬರು (Wife accuses Husband) ಗಂಭೀರ ಆರೋಪ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಇದು ಸ್ವಲ್ಪ ಕಾಂಪ್ಲಿಕೇಟ್‌ ಆದ ಕೌಟುಂಬಿಕ ಮತ್ತು ಆರೋಗ್ಯ ಸಮಸ್ಯೆಯ ವಿವಾದದಂತೆ ಕಾಣಿಸುತ್ತಿದೆ. ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಗೆ ಜೀವಿತ್‌ ಎಂಬ ಎಂಟು ತಿಂಗಳ ಮಗುವಿದೆ. ಕೆಲವು ದಿನದ ಹಿಂದೆ ತೀವ್ರ ಜ್ವರದಿಂದ ಬಳಲಸುತ್ತಿದ್ದ ಮಗುವನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಜುಲೈ 1ರಂದು ಪ್ರಾಣ ಬಿಟ್ಟಿದೆ.

ಈ ನಡುವೆ, ಜುಲೈ 12ರಂದು ಚಿತ್ರಾ ಅವರು ಮಗುವಿನ ಸಾವಿಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಒಂದು ದೂರನ್ನು ನೀಡುತ್ತಾರೆ. ಅದರಲ್ಲಿ ಈ ಸಾವಿಗೆ ಮಗುವಿನ ತಂದೆ ಮತ್ತು ತನ್ನ ಗಂಡನಾದ ಶ್ರೀಧರ ನಾಯ್ಕನೇ ಕಾರಣವಾಗಿರಬಹುದು ಎಂಬ ಗಂಭೀರ ಆಪಾದನೆಯನ್ನು ಮಾಡುತ್ತಾರೆ.

ಹಾಗಿದ್ದರೆ ಮಗು ಜ್ವರದಿಂದ ಸತ್ತಿದ್ದಕ್ಕೂ ಶ್ರೀಧರ ನಾಯ್ಕನಿಗೂ ಏನು ಸಂಬಂಧ? ಅದನ್ನು ಕೂಡಾ ಅವರೇ ವಿವರಿಸಿದ್ದಾರೆ. ʻʻಜೀವಿತ್‌ನಿಗೆ ಕೆಲವು ದಿನದಿಂದ ಜ್ವರ ಬರುತ್ತಲೇ ಇತ್ತು. ಅದು ಕಡಿಮೆಯಾಗುತ್ತಿರಲಿಲ್ಲ. ಹೀಗಾಗಿ ನಾನು ನನ್ನ ತವರು ಮನೆಗೆ ಹೋಗುತ್ತೇನೆ. ಅಲ್ಲಾದರೂ ಯಾರಿಗಾದರೂ ಒಳ್ಳೇ ಡಾಕ್ಟರ್‌ಗೆ ತೋರಿಸುತ್ತೇನೆ ಎಂದು ಹೇಳಿದ್ದೆ. ಇದನ್ನು ಕೇಳಿದ ಗಂಡನಿಗೆ ಸಿಟ್ಟು ಬಂತು. ನನ್ನ ಜತೆ ಬೇಕಾಬಿಟ್ಟಿ ಜಗಳವಾಡಿದರು. ಮಾತ್ರವಲ್ಲ, ತವರು ಮನೆಗೆ ಹೊರಟಿದ್ದ ನನ್ನನ್ನು ಸಿಟ್ಟಿನಿಂದ ತಳ್ಳಿದರು. ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ನಾನು ಮಗುವಿನೊಂದಿಗೇ ಕೆಳಗೆ ಬಿದ್ದೆ. ಅದುವರೆಗೆ ಮಗುವಿಗೆ ಒಂದು ಹಂತಕ್ಕೆ ಜ್ವರವಿತ್ತು. ಬಳಿಕ ಒಮ್ಮಿಂದೊಮ್ಮೆಗೇ ಜೋರಾಯಿತು. ಈ ರೀತಿ ಜ್ವರ ಒಮ್ಮಿಂದೊಮ್ಮೆಗೇ ಹೆಚ್ಚಾಗಲು ಗಂಡ ನನ್ನನ್ನು ಮತ್ತು ಮಗುವನ್ನು ಜತೆಯಾಗಿ ತಳ್ಳಿದ್ದೇ ಕಾರಣ. ಮಗು ಕೆಳಗೆ ಬಿದ್ದಿದ್ದರಿಂದ ಅದರ ಜ್ವರ ವಿಪರೀಕ್ಕೇರಿದೆ. ಹೀಗಾಗಿ ಪತಿ ತಳ್ಳಿದಾಗ ಕೆಳಗೆ ಬಿದ್ದ ಕಾರಣವೇ ನನ್ನ ಮಗುವಿನ ಸಾವು ಸಂಭವಿಸಿರಬಹುದುʼʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಶ್ರೀಧರ ನಾಯ್ಕ ಅವರನ್ನು ವಿಚಾರಣೆ ನಡೆಸಿದ್ದು, ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಇದರ ಜತೆಗೆ ಗಂಡ-ಹೆಂಡಿರ ನಡುವೆ ಬೇರೆ ಏನಾದರೂ ಸಮಸ್ಯೆಗಳಿವೆಯಾ ಎಂಬ ವಿಚಾರವನ್ನೂ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: Murder Case: ಆಟವಾಡುತ್ತಿದ್ದ ಬಾಲಕರ ಜಗಳ ಕೊಲೆಯಲ್ಲಿ ಅಂತ್ಯ, ಇರಿದವನಿಗೆ ಹದಿನೈದೇ ವರ್ಷ!

ಪತ್ನಿಯ ವಾದವೇನು?

ಚಿತ್ರಾ ಅವರ ವಾದದ ಪ್ರಕಾರ, ಮೊದಲೇ ಜ್ವರದಲ್ಲಿ ಬಳಲುತ್ತಿದ್ದ ಮಗು ಈ ರೀತಿ ಜಗಳದ ವೇಳೆ ನೆಲಕ್ಕೆ ತಳ್ಳಿದಾಗ ಮಗುವಿನ ಜ್ವರ ಇನ್ನಷ್ಟು ಏರಿ ಸಮಸ್ಯೆ ಆಗಿರಬಹುದು. ಬಳಿಕ ಅದು ಕಡಿಮೆಯಾಗದೆ ಸಾವು ಸಂಭವಿಸಿರಬಹುದು ಎನ್ನುವುದು ಆಕೆಯ ಅಭಿಪ್ರಾಯ.

Exit mobile version