Site icon Vistara News

ಕಾಲುವೆಗೆ ಬಿದ್ದು ಮಗು, ಈಜಲು ಹೋಗಿ ಬಾಲಕ ಸಾವು

Vijayendra

ಕೊಪ್ಪಳ/ ಹಾವೇರಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾಲುವೆಗೆ ಬಿದ್ದು ಮಗು ಮತ್ತು ನದಿಯಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಬಸವಣ್ಣ ಕ್ಯಾಂಪ್‌ನಲ್ಲಿನಲ್ಲಿ ಮಗು ಸಾವಿಗೀಡಾಗಿದ್ದು, ಹಾವೇರಿ ಜಿಲ್ಲೆಯ ಕಳಸೂರು ಗ್ರಾಮದ ವರದಾ ನದಿಯಲ್ಲಿ ಬಾಲಕ ನೀರುಪಾಲಾಗಿದ್ದಾನೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‌ನಲ್ಲಿ ಕಾಲುವೆಗೆ ಬಿದ್ದು ವಿಜಯೇಂದ್ರ ಎಂಬ 14 ತಿಂಗಳ ಮಗು ಮೃತಪಟ್ಟಿದೆ. ಶಿಲ್ಪಾ ಮತ್ತು ಶಿವಾನಂದ್ ದಂಪತಿ ಮಗು ವಿಜಯೇಂದ್ರ, ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಕಾಲುವೆಗೆ ಬಿದ್ದು, ಕ್ಷಣಾರ್ಧದಲ್ಲಿಯೇ ಮೃತಪಟ್ಟಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಮತ್ತೊಂದೆಡೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದ ವರದಾ ನದಿಯಲ್ಲಿ ಈಜಲು ಹೋಗಿ ಅಮೋಘ ಹೊಸಮನಿ (17) ಎಂಬ ಬಾಲಕ ಮೃತಪಟ್ಟಿದ್ದಾನೆ. ಈತ ಸ್ನೇಹಿತರೊಂದಿಗೆ ಸ್ನಾನ ಮಾಡಲು ವರದಾ ನದಿಗೆ ತೆರಳಿದ್ದ. ಈಜು ಬಾರದೆ ನದಿಗೆ ಇಳಿದಿದ್ದರಿಂದ ನೀರಿನಲ್ಲಿ ಮುಳುಗಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ, ಬಾಲಕನ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ಇದನ್ನೂ ಓದಿ | Murder Case : ಕತ್ತು, ಎದೆಗೆ ಇರಿದು ಯುವಕನ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು!

ರಿಹ್ಯಾಬಿಲಿಟೇಷನ್ ಸೆಂಟರ್‌ನ 3ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು

ಬೆಂಗಳೂರು: ಇಲ್ಲಿನ ಕೆಂಚನಪುರದಲ್ಲಿರುವ ರಿಹ್ಯಾಬಿಲಿಟೇಷನ್ ಸೆಂಟರ್‌ನ ಮೂರನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಶುಕೂರ್ ಪಟೇಲ್ ಮೃತ ದುರ್ದೈವಿ.

ಮೂಲತ: ಯಾದಗಿರಿ ಜಿಲ್ಲೆಯವನಾದ ಶುಕೂರ್ ಪಟೇಲ್ ಕೆಂಚನಪುರ ಕ್ರಾಸ್ ಬಳಿ ಇರುವ ಫೋರ್ ಎಸ್ ಮನೋವೈದ್ಯಕೀಯ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರ ಚಿಕಿತ್ಸೆಗೆ ದಾಖಲಾಗಿದ್ದರು.

ಸ್ಕಿಜೋಫ್ರೇನಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದ

ಶುಕೂರ್ ಪಾಟೀಲ್ ಸ್ಕಿಜೋಫ್ರೇನಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದ. ಸ್ಕಿಜೋಫ್ರೇನಿಯಾ ಎಂದರೆ‌‌‌ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತಾನೆ ನನ್ನೊಟ್ಟಿಗೆ ಯಾರೋ ಇದ್ದಾರೆ ಎಂದು ಮಾತನಾಡಿಕೊಳ್ಳುವುದು.

ಈ ಕಾಯಿಲೆ ಇದ್ದ ಶುಕೂರ್‌ ಗುಣಮುಖನಾಗಲಿ ಎಂದು ಕುಟುಂಬಸ್ಥರು ದೊಡ್ಡ ದೊಡ್ಡ ಆಸ್ಪತ್ರೆಗೆಲ್ಲ ತೋರಿಸಿದ್ದಾರೆ‌. ಖಾಯಿಲೆ ಗುಣ ಆಗಲೇ ಇಲ್ಲ. ಹಾಗಾಗಿ ಕೊನೆಗೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚನಪುರ ಕ್ರಾಸ್ ಬಳಿ ಇರುವ 4S ಎಂಬ ಮನೋವೈದ್ಯಕೀಯ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಕಳೆದ ಜುಲೈ ತಿಂಗಳಿಂದ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಇಂದು ಬೆಳಗ್ಗೆ ಶುಕೂರ್‌ನನ್ನು ಕೇಂದ್ರದ ಸಿಬ್ಬಂದಿ ಓಂಕಾರ್ ಬೆಳಗ್ಗೆ 10.45 ಗಂಟೆಗೆ ಕಟ್ಟಡದ ಮೂರನೇ ಮಹಡಿಯ ಮೇಲೆ ವಾಕಿಂಗ್ ಮಾಡಿಸುತ್ತಿದ್ದರು. ಈ ವೇಳೆ ಏಕಾಏಕಿ ಸಿಬ್ಬಂದಿಯನ್ನು ತಳ್ಳಿ ಮೂರನೇ ಮಹಡಿಯಿಂದ ಜಿಗಿದು ಕೆಳಗೆ ಹಾರಿದ್ದಾನೆ. ಪರಿಣಾಮ ತಲೆ ಮತ್ತು ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಕ್ಕಪಕ್ಕದ ಅಂಗಡಿಯವರು ಓಡಿ ಬಂದು ಗಾಬರಿಯಿಂದ ನೋಡಿದ್ದಾರೆ. ಆದರೆ ಅದಾಗಲೇ ಉಸಿರು ನಿಂತಿತ್ತು

ಇದನ್ನೂ ಓದಿ: Murder Case : ಅತ್ತಿಗೆಯೊಂದಿಗೆ ಸರಸ; ಅಡ್ಡಿಯಾಗಿದ್ದ ಅಣ್ಣನನ್ನೇ ಕೊಂದ ತಮ್ಮ!

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version