ಮಂಡ್ಯ: ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಜೋರಾಗಿರುವ ಮಕ್ಕಳ ಕಳವು ವದಂತಿ ಈಗ ಮಂಡ್ಯಕ್ಕೂ ಪ್ರವೇಶ ಮಾಡಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಮಕ್ಕಳ ಕಳವಿಗೆ ಯತ್ನಿಸಿದರೆಂಬ ಶಂಕೆಯಲ್ಲಿ ಊರಿನವರು ಒಂದು ಗ್ಯಾಂಗನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಒಬ್ಬ ಅಪ್ರಾಪ್ತ ಬಾಲಕ ಅವರ ಕೈಗೆ ಸಿಕ್ಕಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ಯಾಂಗ್‌ನ ಉಳಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ.
ಏನಾಯಿತು ಕಿರಂಗೂರಿನಲ್ಲಿ?
ಕಿರಂಗೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಆಟವಾಡುತ್ತಿದ್ದ ಮಕ್ಕಳನ್ನು ಚಾಕೊಲೆಟ್ ಕೊಡುವ ನೆಪದಲ್ಲಿ ಕರೆದು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕೊಲೇಟ್ ಆಸೆಗೆ ಬಂದ ಮಗುವೊಂದನ್ನು ಪ್ರಜ್ಞೆ ತಪ್ಪಿಸಿ ಹೊತ್ತೊಯ್ಯಲು ಯತ್ನ ಮಾಡಲಾಗಿದೆ. ಈ ವೇಳೆ ಇತರ ಮಕ್ಕಳು ಜೋರಾಗಿ ಚೀರಿದ್ದಾರೆ. ಮಕ್ಕಳ ಚೀರಾಟ ಕೇಳಿ ಅಕ್ಕಪಕ್ಕದ ಮನೆಯ ಜನರು ಓಡಿ ಬಂದಿದ್ದಾರೆ. ಜನರು ಬರುತ್ತಿದ್ದಂತೆ ಮಕ್ಕಳ ಕಳ್ಳತನ ಗ್ಯಾಂಗ್ ನ ಇಬ್ಬರು ಪರಾರಿಯಾಗಿದ್ದು, ಒಬ್ಬ ಅಪ್ರಾಪ್ತ ಬಾಲಕನನ್ನು ಗ್ರಾಮಸ್ಥರು ಹಿಡಿದಿದ್ದಾರೆ.
ಸಿಕ್ಕಿಬಿದ್ದ ಅಪ್ರಾಪ್ತ ಬಾಲಕನಿಗೆ ಸಾರ್ವಜನಿಕರು ಚೆನ್ನಾಗಿ ಥಳಿಸಿದ್ದಾರೆ. ವಿಷಯ ಪೊಲೀಸರಿಗೆ ತಿಳಿದು ಅವರು ಸ್ಥಳಕ್ಕೆ ಧಾವಿಸಿದರು. ಮತ್ತು ಬಾಲಕನನ್ನು ತಮ್ಮ ವಶಕ್ಕೆ ಪಡೆದರು. ಸಿಕ್ಕಿಬಿದ್ದ ಬಾಲಕನನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಪರಾರಿಯಾಗಿರುವ ಮತ್ತಿಬ್ಬರ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.
ಉತ್ತರ ಕರ್ನಾಟಕದ ಹಲವು ಕಡೆ
ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಮಕ್ಕಳನ್ನು ಕಳವು ಮಾಡಲು ಬಂದಿದ್ದಾರೆ ಎಂಬ ಸಂಶಯದಲ್ಲಿ ಹಲವರ ಮೇಲೆ ಹಲ್ಲೆ ನಡೆದಿದೆ. ಕೆಲವು ವಾಹನಗಳನ್ನು ಬೆನ್ನಟ್ಟಿ ಅವು ಪಲ್ಟಿಯಾಗಿರುವ ವಿದ್ಯಮಾನಗಳೂ ನಡೆದಿವೆ. ಕೆಲವು ಮಾನಸಿಕ ಅಸ್ವಸ್ಥರ ಮೇಲೂ ದಾಳಿ ನಡೆದಿದೆ. ರಾಜ್ಯದ ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳು ರಾಜ್ಯದ ಯಾವ ಭಾಗದಲ್ಲೂ ಮಕ್ಕಳ ಕಳವಿನ ಯಾವುದೇ ವಿದ್ಯಮಾನ ನಡೆದಿಲ್ಲ. ಜನರು ಯಾವ ಕಾರಣಕ್ಕೂ ಸಂಶಯದ ಮೇಲೆ ಜನರನ್ನು ಹಿಡಿದು ಥಳಿಸಬಾರದು. ಏನಾದರೂ ಸಂಶಯ ಕಂಡುಬಂದರೆ ಪೊಲೀಸರಿಗೆ ತಿಳಿಸಬೇಕು. ಅಪರಿಚಿತರ ಮೇಲೆ ಬಲವಾದ ಸಂಶಯ ಬಂದರೆ ಅವರನ್ನು ತಡೆದು ಪೊಲೀಸರಿಗೇ ಒಪ್ಪಿಸಬೇಕು. ಪೊಲೀಸರು ವಿಚಾರಣೆ ನಡೆಸಿ ಸತ್ಯಾಸತ್ಯತೆಯನ್ನು ತಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Child theft rumour | ವಿಜಯನಗರ, ಧಾರವಾಡಕ್ಕೂ ಹಬ್ಬಿದ ಹಲ್ಲೆ ಹಾವಳಿ, ಇಬ್ಬರ ಮೇಲೆ ತೀವ್ರ ದಾಳಿ