ಹಾವೇರಿ: ತಾಯಿ ಗರ್ಭದಿಂದ ಹೊರಬಂದಿದ್ದ ಆ ಹಸುಗೂಸು ಬೆಚ್ಚಗೆ ತಾಯಿಯ ಮಡಿಲಿನಲ್ಲಿತ್ತು. ಆದರೆ, ಹುಟ್ಟಿದ ಒಂದು ದಿನದ ಮಗುವನ್ನು ನಕಲಿ ದಾದಿಯೊಬ್ಬಳು ಕದ್ದು (Child Kidnapping case) ಪರಾರಿಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆ ಶಿಶುವು ಮತ್ತೆ ಹೆತ್ತವಳ ಮಡಿಲು ಸೇರುವಂತೆ ಮಾಡಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಬ್ಯಾಡಗಿ ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎಂಬುವವರು ಹೆಣ್ಣು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದರು. ನರ್ಸ್ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಶಿಶುವಿನ ಅಜ್ಜಿಯನ್ನು ಕರೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿಸಿದ್ದಾಳೆ. ಮಗುವಿಗೆ ಆರೋಗ್ಯದ ತಪಾಸಣೆ ಮಾಡಿಸುತ್ತೇನೆಂದು ನಂಬಿಸಿ ಕರೆದೊಯ್ದಿದ್ದಾಳೆ. ಕೊನೆಗೆ ಖಾಸಗಿ ಆಸ್ಪತ್ರೆಯಿಂದ ವಾಪಸಾಗುವಾಗ ಹಣ್ಣು ತೆಗೆದುಕೊಂಡು ಬರುತ್ತೇನೆಂದು ಮಗುವಿನ ಸಮೇತ ಹೋದವಳು ಅಪಹರಣ ಮಾಡಿದ್ದಳು.
ಎಷ್ಟು ಕಾದರೂ ನರ್ಸ್ ಹಾಗೂ ಶಿಶು ಪತ್ತೆ ಆಗದೆ ಇದ್ದಾಗ, ಪೋಷಕರಿಗೆ ಆತಂಕವಾಗಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದಾಗಲೇ ಶಿಶು ಅಪಹರಣ (Kidnapping) ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ಪೋಷಕರು ಹಾವೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿ ಮಗು ಇರುವುದು ಗೊತ್ತಾಗಿತ್ತು. ಗೀತಾ ಮಾದರ ಎಂಬಾಕೆ ಮಗುವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಗೀತಾಗೆ ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳು ಆಗಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆಗೆ ಬಂದವಳೇ ನರ್ಸ್ ವೇಷಧರಿಸಿ ಹೆಣ್ಣು ಮಗುವನ್ನು ಕಳ್ಳತನ ಮಾಡಿ ಪರಾರಿ ಆಗಿದ್ದಳು.
ಇದನ್ನೂ ಓದಿ: ಮಾಹಿತಿಯನ್ನೇ ಕೊಡದೆ ಪರೀಕ್ಷೆ ಮುಂದೂಡಿದ ಬಾಗಲಕೋಟೆ ತೋಟಗಾರಿಕೆ ವಿವಿ; ಪರೀಕ್ಷಾರ್ಥಿಗಳ ಆಕ್ರೋಶ
ಮಾಧ್ಯಮದಲ್ಲಿ ಮಗು ಕಳುವಿನ ಸುದ್ದಿ ಪ್ರಸಾರವಾಗುತ್ತಿದ್ದಂತೆ ಗೀತಾಳ ಸಹೋದರ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಮಗುವಿನೊಂದಿಗೆ ಬಂದು ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಗೀತಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ