ಉಡುಪಿ: ಇಲ್ಲಿನ ಮಲ್ಪೆ ಬಂದರಿನಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 4.30ಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೀನು ಆಯುವ 16 ಅಪ್ರಾಪ್ತರನ್ನು (Child Labour) ರಕ್ಷಣೆ ಮಾಡಲಾಗಿದೆ.
ಜಿಲ್ಲಾಡಳಿತಕ್ಕೆ ಈ ಬಗ್ಗೆ ಸ್ಥಳೀಯರು ಸೇರಿ ಹಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ನಾಗರಿಕ ಸೇವಾ ಟ್ರಸ್ಟ್, ಹೊಸಬೆಳಕು ಸಂಸ್ಥೆ ಮಣಿಪಾಲ ಇವರ ಜಂಟಿ ಕಾರ್ಯಾಚರಣೆ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಕೊಪ್ಪಳ ಮತ್ತು ದಾವಣಗೆರೆ ಮೂಲದ 11 ಬಾಲಕಿಯರು ಹಾಗೂ 5 ಬಾಲಕರು ಸೇರಿ 16 ಮೀನು ಆಯುವ ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು ಇವರ ವಶಕ್ಕೆ ಮಕ್ಕಳನ್ನು ನೀಡಲಾಗಿದೆ. ಈ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೊ ಮತ್ತು ಸದಸ್ಯರು ಸೂಕ್ತ ಪುನರ್ವಸತಿ ಕಲ್ಪಿಸಲಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ , ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ವಿಜೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಸಮನ್ವಯ ಅಧಿಕಾರಿ ವಿ .ಡಿ .ಮೊಗೇರ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರೋಷನ್ ಕುಮಾರ್, ಎನ್.ಆರ್.ಎಲ್.ಎಂ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.
ಶಿಕ್ಷಣದಿಂದ ದೂರ ಉಳಿದಿದ್ದ ಮಕ್ಕಳು
ಈ ರಕ್ಷಣೆ ಮಾಡಲಾಗಿರುವ ಅಪ್ರಾಪ್ತರು ಶಿಕ್ಷಣದಿಂದ ವಂಚಿತರಾಗಿದ್ದಾರೆಂದು ತಿಳಿದುಬಂದಿದೆ. ನಾನಾ ಕಾರಣಕ್ಕೆ ಶಿಕ್ಷಣದಿಂದ ದೂರ ಉಳಿದಿರುವ ಇವರು, ಕುಟುಂಬದೊಂದಿಗೆ ಮಲ್ಪೆಗೆ ಬಂದು ಜೀವನ ಸಾಗಿಸುತ್ತಿದ್ದರು. ಆದರೆ, ತಮ್ಮ ಅಗತ್ಯ ಜೀವನಕ್ಕಾಗಿ ಬೆಳಗ್ಗೆ ಮೀನು ಬಂದರಿಗೆ ಬಂದು ಮೀನನ್ನು ಬೇರ್ಪಡಿಸುವ, ಆಯುವ ಕೆಲಸದಲ್ಲಿ ನಿರತರಾಗಿದ್ದರು. ಇವರಿಗೆ ಅಲ್ಪ ಮಟ್ಟಿನ ಹಣವನ್ನು ಇದಕ್ಕಾಗಿ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ | Seer honey trap | ಕಂಪ್ಯೂಟರ್ ಜ್ಞಾನ ಬಳಸಿ ಎಲ್ಲ ಡಾಟಾ ಡಿಲೀಟ್ ಮಾಡಿದ್ದ ನೀಲಾಂಬಿಕೆ, ರಿಟ್ರೀವ್ ಕಷ್ಟ?