ಹುಬ್ಬಳ್ಳಿ: ಹೆಂಡತಿ, ಮೂವರು ಮಕ್ಕಳಿದ್ದರೂ ವ್ಯಕ್ತಿಯೊಬ್ಬ ಬಾಲಕಿಯನ್ನು (Child Marriage) ಮದುವೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಾಲಕಿಯನ್ನು ವರಿಸಿದ ಮೂರು ಮಕ್ಕಳ ತಂದೆಯ ವಿರುದ್ಧ ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜತೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೂಡ ದೂರು ದಾಖಲಿಸಿದ್ದಾರೆ.
ಹುಬ್ಬಳ್ಳಿಯ ಮಾಧವನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಹನಮಂತ ಉಪ್ಪಾರ ಹಣದಾಸೆ ತೋರಿಸಿ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಜನವರಿ 18ರಂದು ಮದುವೆಯಾಗಿದ್ದಾನೆ ಎನ್ನಲಾಗಿದೆ.
ನಾಪತ್ತೆಯಾದ ಹನಮಂತ
ಮದುವೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಮೊದಲ ಪತ್ನಿ ನೇತ್ರಾವತಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರು ದಾಖಲಾಗುತ್ತಲೇ ಹನಮಂತ ನಾಪತ್ತೆಯಾಗಿದ್ದಾನೆ. 12 ವರ್ಷಗಳ ಹಿಂದೆ ನೇತ್ರಾವತಿ ಜತೆ ಸಪ್ತಪದಿ ತುಳಿದಿದ್ದ ಹನಮಂತನಿಗೆ ಮೂರು ಮಕ್ಕಳು ಇದ್ದಾರೆ. ಕಳೆದ ಕೆಲ ವರ್ಷದಿಂದ ನೇತ್ರಾವತಿ ಮೇಲೆ ಹನಮಂತ ಉಪ್ಪಾರ ಸಾಕಷ್ಟು ಅನುಮಾನ ಪಡುತ್ತಿದ್ದ ಎನ್ನಲಾಗಿದೆ.
ಗಂಡ ಹೆಂಡತಿ ಇಬ್ಬರೂ ಬೇರೆ ಬೇರೆ ಇದ್ದರು. ಮಕ್ಕಳನ್ನು ಮಾತ್ರ ಆತ ತನ್ನ ಬಳಿ ಇಟ್ಟುಕೊಂಡಿದ್ದ. ಅನುಮಾನಪಟ್ಟು ಮೊದಲ ಹೆಂಡತಿಯನ್ನು ದೂರ ಮಾಡಿದ್ದ. ಸಾಕಷ್ಟು ಸಲ ಹಿರಿಯರು ಬುದ್ಧಿ ಹೇಳಿದರೂ ಇಬ್ಬರ ಸಮಸ್ಯೆ ಬಗೆಹರಿದಿರಲಿಲ್ಲ.
ಇದನ್ನೂ ಓದಿ: fraud case: ಅಪರಿಚಿತರ ನಂಬಿ ಕೆಲಸಕ್ಕಾಗಿ ಹೊರಗೆ ಹೋಗುವ ಹೆಣ್ಣು ಮಕ್ಕಳೇ ಎಚ್ಚರ!
ಇದೇ ಕಾರಣಕ್ಕೆ ಹನಮಂತ ಮತ್ತೊಂದು ಮದುವೆಯಾಗಿದ್ದಾನೆ. ಹನಮಂತ ಬಡ್ಡಿ ವ್ಯವಹಾರ ಮಾಡುತ್ತಿದ್ದು, ಹಣದಾಸೆ ತೋರಿಸಿ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ತಮಗೆ ಬಂದ ಮಾಹಿತಿಯನ್ವಯ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಾಲಕಿಯ ಶಾಲಾ ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿ 15-02-2006ರಲ್ಲಿ ಜನಿಸಿರುವುದು ಖಚಿತವಾಗಿದೆ.