Site icon Vistara News

Child marriage| 16ರ ಬಾಲಕಿಗೆ 52 ವರ್ಷದ ಗಂಡ! ಬಂಧಿಸಲು ಹೋದಾಗ ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯುರಿಟಿ ಗಾರ್ಡ್‌!

child marriage

ಕಾರವಾರ: ಬೆಂಗಳೂರಿನಲ್ಲಿ ೪೫ ವರ್ಷದ ವ್ಯಕ್ತಿಯೊಬ್ಬ ೧೪ ವರ್ಷದ ಬಾಲಕಿಯನ್ನು ಬಲವಂತದಿಂದ ಮದುವೆಯಾಗಿ ಜೈಲು ಸೇರಿದ ಬೆನ್ನಿಗೇ ಕಾರವಾರದಲ್ಲಿ ಅಂಥಹುದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿ ಬಾಲಕಿಯ ವಯಸ್ಸು ೧೬ ಮತ್ತು ಮದುವೆಯಾದ ವರನ ವಯಸ್ಸು ೫೨!

ಇಲ್ಲಿ ಕೇಸು ಸ್ವಲ್ಪ ಡಿಫರೆಂಟಾಗಿದೆ. 52 ವಯಸ್ಸಿನ ವ್ಯಕ್ತಿ 16ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಮೂರು ತಿಂಗಳೇ ಕಳೆದಿದೆ. ಮೂರು ತಿಂಗಳ ಬಳಿಕ ವಧು ಅಪ್ರಾಪ್ತೆ ಎಂಬುದು ಅರಿವಾಗಿದೆ. ಇದೀಗ ಇಬ್ಬರ ಕುಟುಂಬಕ್ಕೂ ಬರಸಿಡಿಲು ಬಡಿದಂತಾಗಿದ್ದು ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಜುಲೈ 19ರಂದು ಕಾರವಾರದ ದೇವಾಲಯೊಂದರಲ್ಲಿ ಅದ್ಧೂರಿಯಾಗಿ ವಿವಾಹವೊಂದು ನಡೆದಿತ್ತು. ವಧು ದೈಹಿಕವಾಗಿ ದಷ್ಟಪುಷ್ಟವಾಗಿದ್ದಳು. ಹೀಗಾಗಿ 52ರ ವಯಸ್ಸಿನ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ವಧುವನ್ನು ವಿವಾಹ ಮಾಡಿಕೊಡಲಾಗಿತ್ತು. ಅದ್ಧೂರಿಯಾಗಿಯೇ ನಡೆದಿದ್ದ ವಿವಾಹದಲ್ಲಿ ಸುಮಾರು 60 ಮಂದಿ ಭಾಗವಹಿಸಿದ್ದರು.

ಮದುವೆಯಾಗಿ ಮೂರು ತಿಂಗಳ ಬಳಿಕ ಅಂಗನವಾಡಿ ಕಾರ್ಯಕರ್ತೆಯರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗಗೊಂಡಿದ್ದು, ಕೂಡಲೇ ಎಚ್ಚೆತ್ತ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿದ್ದರು‌. ಅಲ್ಲದೇ 52ರ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಬಂಧನದ ಭೀತಿಯಿಂದ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ.

ಅಪ್ರಾಪ್ತೆಯನ್ನು ಮದುವೆ ಮಾಡಲಾಗಿದ್ದು, ಫೋಕ್ಸೊ ಪ್ರಕರಣ ದಾಖಲಾಗಿದೆ ಎಂಬ ಬಗ್ಗೆ ಎರಡೂ ಕುಟುಂಬದವರಿಗೆ ಪೊಲೀಸರು ಹಾಗೂ ಇತರ ಅಧಿಕಾರಿಗಳು ವಿವರಿಸಿದ ಬಳಿಕ ಎರಡೂ ಕುಟುಂಬ ಕಕ್ಕಾಬಿಕ್ಕಿಯಾಗಿದೆ. ಅಲ್ಲದೇ ಮದುವೆಗೆ ಹೋಗಿದ್ದ ಸಂಬಂಧಿಕರು ಸೇರಿ ಒಟ್ಟು 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದ್ದು, ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮದುಮಗನನ್ನು ಪೊಲೀಸರು ಬಂಧಿಸಿ ಕಾರವಾರ ಜೈಲಿನಲ್ಲಿರಿಸಿದ್ದರೆ, ಅಪ್ರಾಪ್ತೆ ಸಾಂತ್ವನ ಕೇಂದ್ರದಲ್ಲಿದ್ದಾಳೆ.

ಇದನ್ನೂ ಓದಿ Child Marriage | 14 ವರ್ಷದ ಬಾಲಕಿಯನ್ನು ಮದುವೆಯಾದ 45 ವರ್ಷದ ವ್ಯಕ್ತಿ ಅರೆಸ್ಟ್‌, ಅಪ್ಪ-ಅಮ್ಮನೂ ಸೆರೆ

Exit mobile version