ಮಹಲಿಂಗೇಶ್ ಹಿರೇಮಠ್, ವಿಸ್ತಾರ ನ್ಯೂಸ್ ಗದಗ
ಆ ಪುಟ್ಟ ಮಗು ಜಗತ್ತು ನೋಡುವ ಮುನ್ನವೇ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿತ್ತು. ಉಸಿರಾಡಲು ಶ್ವಾಸಕೋಶವೇ ಬೆಳೆದಿರಲಿಲ್ಲ. ಜಗತ್ತು ನೋಡಲು ಕಣ್ಣು ತೆರೆದಿರಲಿಲ್ಲ. ಅಮ್ಮನ ಜೋಗುಳ ಕೇಳಲು ಕಿವಿಗಳಿಗೆ ಶಕ್ತಿ ಇರಲಿಲ್ಲ. ದೇಹದ ಯಾವೊಂದು ಭಾಗಗಳೂ ಸಹ ಬೆಳವಣಿಗೆಯಾಗದೇ ಅವಧಿಗೂ ಮುನ್ನ ಅಂದರೆ ಏಳನೇ ತಿಂಗಳಲ್ಲಿ ಮುನ್ನ ಹೆರಿಗೆಯಾಗಿ ಪ್ರಾಣ ಸಂಕಟಕ್ಕೆ ಸಿಲುಕಿತ್ತು. ಇನ್ನೇನು ಲೋಕದ ಹಂಗು ನನಗ್ಯಾಕೆ? ಅನ್ನೋವಷ್ಟರಲ್ಲೇ ಜಿಮ್ಸ್ ವೈದ್ಯರು ದೇವರಾಗಿ ಪ್ರತ್ಯಕ್ಷರಾಗಿದ್ದರು. ಸತತ ಮೂರು ತಿಂಗಳ ಕಾಲ ವೈದ್ಯರು ಹಾಕಿದ ಶ್ರಮ ಪವಾಡದಂತೆ ಬದಲಾಗಿ ಮಗುವಿಗೊಂದು ಮರುಜನ್ಮ (Child Reborn) ಸಿಕ್ಕಿದೆ. ಈಗ ಅಮ್ಮನ ಒಡಲಲ್ಲಿ ಕಂದನ ಕೇಕೆ ಕೇಳುತ್ತಿದೆ.
ಹೌದು ಗದಗದ ಜಿಮ್ಸ್ ಆಸ್ಪತ್ರೆ ಅಂದ್ರೆ ಕೇವಲ ಎಡವಟ್ಟು ನಡೆದಿರೋ ಆರೋಪಗಳನ್ನೇ ಕೇಳಿರ್ತೀರಾ… ಆದ್ರೆ ಜಿಮ್ಸ್ ನಲ್ಲಿಯೂ ಸಹ ಅಸಾಧಾರಣವಾದುದು ನಡೆಯಬಲ್ಲದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಆ ಮೂಲಕ ನಿಜಕ್ಕೂ ಪೋಷಕರ ಕಣ್ಣಲ್ಲಿ ದೇವರಂತೆ ಕಾಣಿಸಿದ್ದಾರೆ.
ಗದಗ ತಾಲೂಕಿನ ದುಂದೂರು ಗ್ರಾಮದ ರಾಜೇಶ್ವರಿ ಚಿಕ್ಕನಗೌಡ ಎಂಬ ಮಹಿಳೆ ಗದಗನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಧಿ ಪೂರ್ಣ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಕೇವಲ 24 ವಾರಗಳು ಮಾತ್ರ ಕಳೆದಿದ್ದರಿಂದ ಕೂಸುಗಳು ಬೆಳವಣಿಗೆಯಾಗಿರಲಿಲ್ಲ. ಹೀಗಾಗಿ ಹುಟ್ಟಿದ ಎರಡನೇ ದಿನಕ್ಕೆ ಹೆಣ್ಣು ಮಗುವೊಂದು ತೀರಿಹೋಗಿತ್ತು. ಗಂಡು ಮಗು ಸಹ ಜೀವನ್ಮರಣದ ನಡುವೆ ಹೋರಾಡುತ್ತಿತ್ತು.
ಯಾಕೆಂದರೆ ಆ ಮಗುವಿನ ತೂಕ ಕೇವಲ 700 ಗ್ರಾಮ ಇತ್ತು. ಶ್ವಾಸಕೋಶ ಬೆಳವಣಿಗೆಯಾಗದೇ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಕಣ್ಣು, ಕಿವಿ, ರಕ್ತದೊತ್ತಡ ಹೀಗೆ ನಾನಾ ಭಾಗಗಳು ಬೆಳೆಯದೇ ಇದ್ದುದರಿಂದ ಮಗುವಿನ ಮೇಲಿನ ಆಸೆಯನ್ನೇ ಪೋಷಕರು ಬಿಟ್ಟಿದ್ದರು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ವೆಚ್ಚವೂ ಸಹ ದುಬಾರಿಯಾಗಿತ್ತು.
ಲಕ್ಷಾಂತರ ರೂಪಾಯಿ ಹಣವನ್ನು ಮೊದಲೇ ಕಳೆದುಕೊಂಡಿದ್ದ ಪೋಷಕರು ಕೊನೆಗೆ ನಿರಾಸೆ ಭಾವನೆಯಿಂದ ಗದಗ ಜಿಮ್ಸ್ ಗೆ ತಂದು ಮಗುವಿಗೆ ಚಿಕಿತ್ಸೆ ಕೊಡಿ ಅನ್ನುತ್ತಾರೆ. ಆಗ ಗದಗ ವೈದ್ಯರು ತೋರಿದ ಚಮತ್ಕಾರ ಮಾತ್ರ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಮಗುವಿನ ದೇಹ ಗುಬ್ಬಿ ಮರಿ ರೀತಿಯಲ್ಲಿ ಇದ್ದು ಮಗುವಿನ ಕೈಕಾಲುಗಳು ಬಹಳಷ್ಟು ಚಿಕ್ಕದಾಗಿದ್ದರಿಂದ ಮಗುವನ್ನು ಎತ್ತಿಕೊಳ್ಳಲೂ ಹಿಂಜರಿಯುವ ಸ್ಥಿತಿ ಇತ್ತು. ಮಗು ಗರ್ಭದಲ್ಲಿ ಹೇಗೆ ಬೆಳೆಯುತ್ತದೆಯೋ ಅಂತಹುದೇ ವಾತಾವರಣ ಸೃಷ್ಟಿ ಮಾಡಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ.
ಸತತ ಮೂರು ತಿಂಗಳ ಕಾಲ ಜಿಮ್ಸ್ ಕಾಂಗರೂ ಮದರ್ ಕೇರ್ ಘಟಕದಲ್ಲಿ ವಿಶೇಷ ಚಿಕಿತ್ಸೆ ಕೊಡುತ್ತಾರೆ ವೈದ್ಯರು. ಆರಂಭದಲ್ಲಿ ಶ್ವಾಸಕೋಶ ಬೆಳವಣಿಗೆಯಾಗೋವರೆಗೂ ವೆಂಟಿಲೇಟರ್ ಮೇಲೆ ಶ್ವಾಸಕೋಶದ ಜಾಗದವರೆಗೆ ಪೈಪ್ ಗಳನ್ನ ಹಾಕಿ ಆಕ್ಸಿಜನ್ ಪೂರೈಕೆ ಮಾಡ್ತಾರೆ. 1)Ventilator 2) Cpap, 3)hfnc 4) oxygen ನಂತಹ ವಿವಿಧ ರೀತಿಯ ಆಯಾಮಗಳಲ್ಲಿ ಮಗುವಿಗೆ ಸತತವಾಗಿ ಹಗಲು ರಾತ್ರಿ ಇಡೀ ಒಂದು ದೊಡ್ಡ ಟೀಮ್ ಚಿಕಿತ್ಸೆ ನೀಡಿ ಮಗುವಿನ ತೂಕ ಹೆಚ್ಚಿಸಿದ್ದಾರೆ. ಈಗ ಅಮ್ಮನ ಮಡಿಲಲ್ಲಿ ಮಗು ಜೋಗುಳದ ಹಾಡು ಕೇಳುವಂತೆ ಮಾಡಿ ದೇವರ ಸ್ವರೂಪಿ ಸ್ಥಾನದಲ್ಲಿ ಕೂತಿದ್ದಾರೆ.
ಯಾಕೆಂದರೆ ಈ ರಾಜೇಶ್ವರಿಗೆ ನಾಲ್ಕು ವರ್ಷಗಳ ಕಾಲ ಮಕ್ಕಳು ಆಗಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಗರ್ಭ ಧರಿಸಿದ್ದ ಈ ತಾಯಿಗೆ ಚೊಚ್ಚಲ ಬಸಿರಿನಲ್ಲಿಯೇ ಅವಳಿ ಮಕ್ಕಳು ಆಗಿದ್ದವು. ಆದ್ರೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಅಕಾಲಿಕ ಹೆರಿಗೆಯಾಗಿ ಇಷ್ಟೆಲ್ಲ ತೊಂದರೆ ಅನುಭವಿಸಬೇಕಾಯಿತು ಅಂತಾರೆ ತಾಯಿ.
ಇನ್ನು ಈ ರೀತಿಯ ಮಗುವಿನ ಚಿಕಿತ್ಸೆ ಜಿಮ್ಸ್ ನಲ್ಲಿ ಇದೇ ಮೊದಲ ಬಾರಿಯೇನಲ್ಲ. ನಾಲ್ಕು ವರ್ಷಗಳ ಹಿಂದೆಯೂ ಸಹ 560 ಗ್ರಾಂ ತೂಕದ ಮಗುವನ್ನೂ ಸಹ ಚಿಕಿತ್ಸೆ ನೀಡಿ ಆರೋಗ್ಯವನ್ನಾಗಿ ಮಾಡಿದ್ದರು. ಅದೇ ಮಗು ಈಗ ಎಲ್.ಕೆ.ಜಿಯಲ್ಲಿ ಕಲಿಯುತ್ತಿದೆ. ಇದೇ ನೂರಾರು ರೀತಿ ಕಡಿಮೆ ತೂಕದ ಮಕ್ಕಳಿಗೂ ಸಹ ಚಿಕಿತ್ಸೆ ನೀಡಿ ಮರುಜನ್ಮ ನೀಡಿದ್ದಾರೆ. ಹೀಗಾಗಿ ಹಲವಾರು ಪೋಷಕರು ಜಿಮ್ಸ್ ವೈದ್ಯರ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರ ಈ ಕಾರ್ಯ ಎಲ್ಲರೂ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ : Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು