ಬಾಗಲಕೋಟೆ: ರಾಜ್ಯದ ಕೆಲವು ಭಾಗಗಳಲ್ಲಿ ಮಕ್ಕಳ ಕಳ್ಳರ ಕುರಿತಾದ ವದಂತಿಗಳು ಭಾರಿ ಅಪಾಯವನ್ನೇ ಸೃಷ್ಟಿಸುತ್ತಿವೆ. ಬಾಗಲಕೋಟೆಯಲ್ಲಿ ಶನಿವಾರ ರಾತ್ರಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಭ್ರಮಿಸಿ ಜನರೆಲ್ಲ ಸೇರಿ ವಾಹನವೊಂದನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಇನ್ನೋವಾ ವಾಹನ ಪಲ್ಟಿಯಾಗಿ ಮಹಾರಾಷ್ಟ್ರ ಮೂಲದವರು ಎಂದು ಹೇಳಲಾದ ಮೂವರು ಗಾಯಗೊಂಡಿದ್ದಾರೆ. ಇವರು ಮಕ್ಕಳ ಕಳ್ಳರಲ್ಲ, ಜನರು ಆತಂಕದಿಂದ ಅಪಾಯ ತಂದಿಟ್ಟಿದ್ದಾರೆ ಎಂದು ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಹೇಳಿದ್ದಾರೆ.
ಮಕ್ಕಳ ಕಳವಿನ ಬಗ್ಗೆ ಬಣ್ಣ ಬಣ್ಣದ ಕಥೆಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಭಯವಿದೆ. ಬಾಗಲಕೋಟೆ ಜಿಲ್ಲೆ ಸಂಗಾಪುರ ತಾಲೂಕಿನ ಸಂಗಾಪುರ ಪಟ್ಟಣದಲ್ಲಿ ಶನಿವಾರ ರಾತ್ರಿ ಬೀಳಗಿ ಪಟ್ಟಣದ ಕಡೆಯಿಂದ ಮಹಾರಾಷ್ಟ್ರ ಮೂಲದ ಇನ್ನೋವಾ ವಾಹನವೊಂದು ಬಂದಿತ್ತು. ಹೊರಗಿನ ವಾಹನ ಮತ್ತು ಅದರ ಒಳಗಿದ್ದವರನ್ನು ನೋಡಿದ ಜನರಿಗೆ ಮಕ್ಕಳ ಕಳವಿನ ಕತೆ ನೆನಪು ಬಂದಿತ್ತು. ಇವರೂ ಕಳ್ಳರಿರಬಹುದು ಎಂದು ಭಾವಿಸಿ ವಾಹನವನ್ನು ಬೆನ್ನಟ್ಟಿದರು.
ಹತ್ತಾರು ಮಂದಿ ಬೇರೆ ಬೇರೆ ವಾಹನಗಳಲ್ಲಿ ಬೆನ್ನಟ್ಟಿದ್ದರಿಂದ ಇನ್ನೋವಾ ಚಾಲಕ ಭಯಗೊಂಡಿದ್ದ. ಸ್ವಲ್ಪ ದೂರ ಹೋದ ಮೇಲೆ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು. ಜನರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನದಲ್ಲಿದ್ದ ಮನೋಜ್ ಶರ್ಮಾ (೫೧), ಮಹಮ್ಮದ ಇಲಿಯಾಸ್ (೪೫) ತೀವ್ರವಾಗಿ ಗಾಯಗೊಂಡರು. ಇನ್ನೊಬ್ಬ ದೇವರಾಜ ಭಾರತಿ (೪೫)ಯನ್ನು ಪೊಲೀಸರು ವಿಚಾರಿಸಿದರು. ಇವರು ಉತ್ತರ ಪ್ರದೇಶದ ಬಿಜನೌರ ಮೂಲದ ವ್ಯಕ್ತಿಗಳು ಎಂದು ಗೊತ್ತಾಯಿತು. ಆದರೆ, ಇವರು ಮಕ್ಕಳ ಕಳ್ಳರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಂಡ ಬಳಿಕ ಇವರೆಲ್ಲ ಯಾರು? ಎಲ್ಲಿಂದ ಬಂದಿದ್ದಾರೆ ? ಜನರು ಇವರನ್ನ ಬೆನ್ನಟ್ಟಿದ್ದೇಕೆ ? ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
child thives | ಮಕ್ಕಳ ಕಳ್ಳರ ವದಂತಿಯಿಂದ ಕಂಗೆಟ್ಟ ಹಾವೇರಿ ಜನ, ಭಯದಿಂದ ಕಂಡ ಕಂಡವರಿಗೆಲ್ಲ ಥಳಿತ